ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಐತಿಹಾಸಿಕ ದೇವಾಲಯ ಬೆಂಗಳೂರಿನ ಗವಿಗಂಗಾಧರೇಶ್ವರ ದೇವಾಲಯದಲ್ಲಿ ಸೂರ್ಯ ರಶ್ಮಿ ಶಿವಲಿಂಗ ಸ್ಪರ್ಶಿಸಲು ಮೋಡ ಅಡ್ಡಿಯಾಗಿದೆ. ಹೀಗಾಗಿ ಈ ವರ್ಷ ಸಂಕ್ರಾಂತಿಯಂದು ಸೂರ್ಯ ಅಗೋಚರನಾಗಿ ಶಿವನ ಪಾದ ಸ್ಪರ್ಶಿಸಿ ತನ್ನ ಪಥ ಬದಲಿಸಿದ್ದಾನೆ ಎನ್ನಲಾಗಿದೆ.
ಸಂಕ್ರಾಂತಿಯಂದು ಗವಿಗಂಗಾಧರೇಶ್ವರ ದೇವಾಲಯದಲ್ಲಿ ಸಂಜೆ ಸೂರ್ಯ ರಶ್ಮಿ ದೇವಾಲಯದ ನಂದಿ ವಿಗ್ರಹದ ಶಿಖರದ ಮಧ್ಯಭಾಗದಿಂದ ಹಾದು ಹೋಗಿ ಶಿವಲಿಂಗ ಸ್ಪರ್ಶಿಸುವ ಮೂಲಕ ಅದ್ಭುತ ಚಮತ್ಕಾರಕ್ಕೆ ಸಾಕ್ಷಿಯಾಗುವುದು ಪದ್ಧತಿ. ಇಂದು ಸಂಜೆ 5:25ರಿಂದ 5:27ಕ್ಕೆ ಸೂರ್ಯನ ಕಿರಣಗಳು ಶಿವಲಿಂಗವನ್ನು ಸ್ಪರ್ಶಿಸಬೇಕಿತ್ತು. ಆದರೆ ಈ ಬಾರಿ ಸೂರ್ಯನ ಕಿರಣಗಳು ಆಲಯವನ್ನು ಪ್ರವೇಶಿಸುತ್ತಿದ್ದಂತೆ ಮೋಡ ಅಡ್ಡಿಯಾದ ಪರಿಣಾಮ ಸೂರ್ಯ ಶಿವಲಿಂಗವನ್ನು ಸ್ಪರ್ಶಿಲು ಅಡ್ಡಿಯುಂಟಾಗಿದೆ.
ಈ ಕುರಿತು ಮಾಹಿತಿ ನೀಡಿರುವ ದೇವಾಲಯ ಪ್ರಧಾನ ಅರ್ಚಕ ಸೋಮಸುಂದರ ದೀಕ್ಷಿತ್, ಈ ಬಾರಿ ಮೋಡ ಅಡ್ಡಿಯಾದ ಪರಿಣಾಮ ಸುರ್ಯ ದೇವ ಶಿವಲಿಂಗವನ್ನು ಸ್ಪರ್ಶಿಸಿರುವ ಕ್ಷಣಗಳು ಕಣ್ಣಿಗೆ ಗೋಚರಿಸಿಲ್ಲ. ಹೀಗಾಗಿ ಈ ವರ್ಷ ಸೂರ್ಯ ಅಗೋಚರನಾಗಿ ಶಿವಲಿಂಗವನ್ನು ಸ್ಪರ್ಶಿಸಿದ್ದಾನೆ. ನನ್ನ 53 ವರ್ಷಗಳ ಅನುಭವದಲ್ಲಿ ಸೂರ್ಯ ರಶ್ಮಿಗೆ ಮೋಡ ಅಡ್ಡಿಯಾಗಿರುವುದು ಇದೇ ಮೊದಲು. 2021 ಎಲ್ಲರಿಗೂ ಶುಭವನ್ನು ಉಂಟುಮಾಡಲಿ. ದೈವ ನಿರ್ಣಯ ಏನೆಂಬುದು ಯಾರಿಗೂ ತಿಳಿಯದು. ಮಾಘಮಾಸದಲ್ಲಿ ದೇವಾಲಯದಲ್ಲಿ ಅತಿರುದ್ರ ಯಾಗವನ್ನು ಮಾಡಲಾಗುವುದು. ಗಂಗಾಧರೇಶ್ವರ ಸ್ವಾಮಿ ಶಾಂತನಾಗಿ ಎಲ್ಲರಿಗೂ ಒಳಿತನ್ನು ಮಾಡುವನು ಎಂಬ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ