ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಕೊರೊನಾ ಲಾಕ್ ಡೌನ್ ನಿಂದಾಗಿ ದೇಶದ ಆರ್ಥಿಕತೆ ಈಬಾರಿ ಸಾರ್ವಕಾಲಿಕ ಕುಸಿತ ಕಂಡಿದೆ. ಏಪ್ರಿಲ್-ಜೂನ್ ತಿಂಗಳ ಮೊದಲ ತ್ರೈಮಾಸಿಕ ಅವಧಿಯಲ್ಲಿ ಭಾರತದ ಜಿಡಿಪಿ (ಒಟ್ಟು ದೇಶೀಯ ಉತ್ಪನ್ನ) ಶೇ.23.9ಕ್ಕೆ ಋಣಾತ್ಮಕವಾಗಿ ಭಾರೀ ಇಳಿಕೆ ಕಂಡಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ಕೊರೋನಾ ಸೋಂಕು ನಿಂತ್ರಣಕ್ಕಾಗಿ ದೇಶದಲ್ಲಿ ಕಳೆದ ಮಾರ್ಚ್‌ನಿಂದ ನಿರಂತರವಾಗಿ ಸುದೀರ್ಘ ಅವಧಿಯ ಲಾಕ್‌ಡೌನ್ ಘೋಷಿಸಲಾಗಿತ್ತು. ಪರಿಣಾಮ ಪ್ರಮುಖ ಕೈಗಾರಿಕೆಗಳು ಸ್ಥಗಿತಗೊಂಡಿದ್ದರಿಂದಾಗಿ ಲಕ್ಷಾಂತರ ಜನ ಕೆಲಸ ಕಳೆದುಕೊಂಡು ನಿರುದ್ಯೋಗಿಗಳಾಗಿದ್ದರು. ಕಳೆದ 40 ವರ್ಷದಲ್ಲಿ ಭಾರತ ಈ ಹಿಂದೆ ಎಂದೂ ಕಾಣದ ಮಟ್ಟಿಗಿನ ನಿರುದ್ಯೋಗ ಸಮಸ್ಯೆಯನ್ನು ಎದುರಿಸಿತ್ತು. ಇದೆಲ್ಲದರ ಪರಿಣಾಮ ಇಡೀ ದೇಶದ ಆರ್ಥಿಕತೆ ಕುಸಿದಿದೆ ಎನ್ನಲಾಗುತ್ತಿದೆ.
1996 ರಿಂದೀಚೆಗೆ ಇದೇ ಮೊದಲ ಭಾರಿಗೆ ಆರ್ಥಿಕತೆಯಲ್ಲಿ ಈ ಪ್ರಮಾಣದ ಇಳಿಕೆ ದಾಖಲಾಗಿದೆ. ಅಷ್ಟೇ ಅಲ್ಲದೆ ಏಷ್ಯಾದ ಪ್ರಮುಖ ಆರ್ಥಿಕತೆಯಲ್ಲಿ ಒಂದಾದ ಭಾರತದ ಪಾಲಿಗೆ ಇದು ಅತ್ಯಂತ ಕೆಟ್ಟ ಆರ್ಥಿಕ ಕುಸಿತ ಎಂದು ಅರ್ಥಶಾಸ್ತ್ರಜ್ಞರು ಬಣ್ಣಿಸಿದ್ದಾರೆ.
2019–20 ರ ಇದೇ ಅವಧಿಯಲ್ಲಿ ದೇಶದ ಜಿಡಿಪಿ ಶೇ 5.2 ರಷ್ಟು ಬೆಳವಣಿಗೆ ಕಂಡಿತ್ತು ಎಂದು ಎನ್ಎಸ್ಒ ಅಂಕಿ ಅಂಶ ಹೇಳಿತ್ತು. ಬ್ಲೂಂಬರ್ಗ್ ಆರ್ಥಿಕ ತಜ್ಞರ ಲೆಕ್ಕಚಾರದ ಪ್ರಕಾರ ಭಾರತದ ಆರ್ಥಿಕತೆ ಶೇ.15 ರಿಂದ ಶೇ.25.9 ರ ನಡುವೆ ಕುಸಿಯಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಪ್ರಸ್ತುತ ಆರ್ಥಿಕ ಕುಸಿತವು ಎರಡನೇ ತ್ರೈಮಾಸಿಕದಲ್ಲೂ ಮುಂದುವರಿಯಲಿದೆ ಎಂದು ಅಂದಾಜಿಸಲಾಗಿದೆ.
ಪ್ರಸ್ತುತ 2020–21 ನೇ ಆರ್ಥಿಕ ವರ್ಷದ ಮೊದಲನೇ ತ್ರೈಮಾಸಿಕದಲ್ಲೇ ಭಾರತದ ಜಿಡಿಪಿ ಶೇ.23.9 ರಷ್ಟು ಋಣಾತ್ಮಕವಾಗಿ ಇಳಿಕೆಯಾಗಿದೆ. ಈ ಇಳಿಕೆ ಎರಡನೆ ತ್ರೈಮಾಸಿಕದಲ್ಲೂ ಮುಂದುವೆರೆಯಲಿದೆ ಎಂದು ಹೇಳಲಾಗುತ್ತಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ