ಗಿರೀಶ್ ಬಿ.
ಕಷ್ಟಪಟ್ಟು, ಬೇಸರವಿಲ್ಲದೆ ಕೆಲಸ ಮಾಡಿ, ಬೆವರು ಸುರಿಸಿ, ಮನೆಯನ್ನು ನಡೆಸುವವನೇ ಮನೆಯ ಯಜಮಾನ. ಅದು ಆತನ ಜವಾಬ್ದಾರಿಯೂ ಹೌದು. ಹೊಲದಲ್ಲಿ, ತೋಟದಲ್ಲಿ, ಕಾರ್ಖಾನೆಯಲ್ಲಿ, ಅಂಗಡಿಯಲ್ಲಿ, ಕಚೇರಿಯಲ್ಲಿ ಹೀಗೆ ಆತನಿಗೆ ಹತ್ತು ಹಲವು ದಾರಿಗಳಿವೆ. ತನ್ನ ಹೊಲ, ತೋಟವಿಲ್ಲದಿದ್ದರೆ ಬೇರೆಯವರಲ್ಲಿ ಕೂಲಿಯಾದರೂ ಮಾಡಿ ಆತ ಮನೆಯ ಜವಾಬ್ದಾರಿ ಹೊರಲೇಬೇಕು. ಒಂದು ದಿನ ಬೇಸರ ಪಟ್ಟುಕೊಂಡರೂ ಆರು ದಿನ ಕೆಲಸ ಮಾಡಲೇಬೇಕು. ಒಂದೆರಡು ದಿನ ಆಕಸ್ಮಾತ್ ತನಗೆ ಕೆಲಸವಿಲ್ಲದಿದ್ದರೂ ಯಜಮಾನನಿಗೆ ರಾತ್ರಿ ನಿದ್ರೆ ಬರುವುದಿಲ್ಲ. ಮನೆಯಲ್ಲಿನ ಮಕ್ಕಳು-ಹೆಂಡತಿಯನ್ನು ಸಾಕುವ ಜವಾಬ್ದಾರಿ ಮನೆಯ ಯಜಮಾನನಿಗಿರುವುದರಿಂದ ಅವನು ’ರೆಸ್ಟ್‌ಲೆಸ್ ಇನ್ ಲೈಫ್’ ರೀತಿಯಲ್ಲಿ ಕೆಲಸ ಮಾಡಬೇಕಾಗುತ್ತದೆ. ಅದೂ ಮನೆ ನಡೆಯುವುದು ಕೇವಲ ಒಬ್ಬನ ವೇತನದಿಂದಾದರೆ ಜೀವನ ಬಲು ಕಷ್ಟ. ಹೆಂಡತಿಯದ್ದೂ ಕೆಲಸವಿದ್ದು, ಆಕೆಯೂ ಸಂಬಳ ತೆಗೆದುಕೊಳ್ಳುತ್ತಿದ್ದರೆ ಜೀವನ ಸ್ವಲ್ಪ ನಿರಾಳ.
ಲೋಕದ ದೃಷ್ಟಿಯಲ್ಲಿ ಯಜಮಾನನಿಗೆ ಯಾವುದೇ ಹಣದ ತೊಂದರೆ ಇಲ್ಲವೇನೊ ಎನಿಸುತ್ತದೆ. ಆದರೆ ಯಜಮಾನ ತನ್ನ ಮನಸ್ಸಿನಲ್ಲೇ ಕಷ್ಟವನ್ನು ಇಟ್ಟುಕೊಂಡು ಮನೆ ನಡೆಸುತ್ತಿರುತ್ತಾನೆ. ಯಜಮಾನನ ಗೋಳು ಹೇಗಪ್ಪಾ ಅಂದರೆ ಒಮ್ಮೊಮ್ಮೆ ಬಟ್ಟೆ ಹಳೆಯದಾದರೆ ಅದನ್ನು ಬದಲಾಯಿಸಿ, ಹೊಸದನ್ನು ಕೊಂಡುಕೊಳ್ಳಲು ವರ್ಷಗಟ್ಟಲೇ ಕಾಯಬೇಕಾಗುತ್ತದೆ. ಪ್ರತಿ ತಿಂಗಳ ವೇತನ ಬಂದಾಗಲೂ ಮುಂದಿನ ತಿಂಗಳು ನೋಡಿದರಾಯಿತು ಎಂದು ಮುಂದೂಡಬೇಕಾಗುತ್ತದೆ. ಸುತ್ತಮುತ್ತಲು ಇರುವವರೆಲ್ಲ ’ಏ ಅವ ತಿಂಗಳಿಗೆ ಅಷ್ಟು ಸಂಪಾದಿಸುತ್ತಾನೆ ಅವನಿಗೆ ಅಷ್ಟು ಸಂಬಳ ಬರುತ್ತದೆ, ಇಷ್ಟು ಸಂಬಳ ಬರುತ್ತದೆ’ ಎಂದು ಮಾತನಾಡಿಕೊಂಡರೂ ಯಜಮಾನನ ಕಷ್ಟ ಅವನಿಗೇ ಗೊತ್ತು. ಈಗಿನ ದುಬಾರಿ ಜಗತ್ತಿನಲ್ಲಿ ಒಬ್ಬ ಮಗನಿದ್ದರೂ ಅವನಿಗೆ ವರ್ಷಕ್ಕೊಮ್ಮೆ ಬರುವ ಶಾಲೆ ಶುಲ್ಕವನ್ನೂ ಸಾಲ ಮಾಡಬೇಕಾದ ಪರಿಸ್ಥಿತಿ ಯಜಮಾನನಿಗೆ ಬರುತ್ತದೆ. ಏಕೆಂದರೆ ಮಾತೆತ್ತಿದರೆ ಖಾಸಗಿ ಶಾಲೆಗಳಲ್ಲಿ ೧೦-೧೫ ಸಾವಿರ ಶುಲ್ಕ. ಶಾಲಾ ವಾಹನ ಶುಲ್ಕ ವರ್ಷಕ್ಕೆ ಒಮ್ಮೆ ಅಂದರೆ ಮೊದಲೇ ಪಾವತಿಸಬೇಕು. ಮಕ್ಕಳ ಶಾಲಾ ಸಮವಸ್ತ್ರ, ಬೂಟ್, ಶಾಲೆ ಚೀಲ, ಹೀಗೆ ಖರ್ಚಿನ ಪಟ್ಟಿ ಬೆಳೆಯುತ್ತ ಹೋಗುತ್ತದೆ. ತನಗೆ ಒಬ್ಬನೆ/ಳೆ ಮಗುವಿದ್ದರೂ ಯಜಮಾನನ ಜೇಬಿಗೆ ಕತ್ತರಿ ಬೀಳುತ್ತ ಹೋಗುತ್ತದೆ.
ತನ್ನ ಚಪ್ಪಲ್ಲು ಹಳೆಯದಾಗಿದೆ ಎಂದರೆ ಅದನ್ನು ರಿಪೇರಿ ಅಂಗಡಿಯಲ್ಲಿ ೩-೪ ಬಾರಿ ಸರಿ ಮಾಡಿಸಿಕೊಂಡು ಅದನ್ನೇ ಪುನಃ ಹಾಕಿಕೊಳ್ಳುವುದು ಆತನಿಗೆ ರೂಢಿಯಾಗಿಬಿಟ್ಟಿರುತ್ತದೆ. ಅಯ್ಯೊ ನಾನು ನನ್ನ ಮದುವೆಗೆ ಮೊದಲು ವರ್ಷಕ್ಕೆ ೩-೪ ಜೊತೆ ಬೂಟ್ ತೆಗೆದುಕೊಳ್ಳುತ್ತಿದ್ದೆ. ಈಗ ಒಂದು ಹೊಸ ಚಪ್ಪಲ್ಲಿಗೂ ಗತಿಯಿಲ್ಲದಂತಾಯಿತಲ್ಲ ಎಂದುಕೊಳ್ಳುತ್ತಾನೆ. ಸ್ವಲ್ಪ ವರ್ಷಗಳ ಹಿಂದೆ ದ್ವಿಚಕ್ರ ವಾಹನ, ಕಾರ್ ಹೊಸ ಬಟ್ಟೆ, ಬೂಟು, ಇತ್ಯಾದಿಗಳ ಶೋಕಿ ಜವಾಬ್ದಾರಿ ಹೆಚ್ಚಾದಂತೆ ಕಡಿಮೆ ಆಗುತ್ತ ಹೋಗುತ್ತದೆ. ಆಕಸ್ಮಾತ್ ಯಾವುದಾದರೂ ಹೊಸತನ್ನು ತನಗಾಗಿ ಖರೀದಿಸಿದರೆ ಅದನ್ನು ಧರಿಸಬೇಕೆಂಬ ಹುಚ್ಚು ಕಡಿಮೆಯಾಗಿರುತ್ತದೆ. ನಾನು ಅಪ್ಪನಿಗೆ ಅದು ಬೇಕು ಇದು ಬೇಕು ಎಂದು ಪೀಡಿಸುತ್ತಿದ್ದಾಗ ಅಪ್ಪ ಏಕೆ ಸಿಟ್ಟಾಗುತ್ತಿದ್ದ ಎನ್ನುವುದು ಈಗ ಯಜಮಾನನಿಗೆ (ಮಗನಿಗೆ) ಅರಿವಾಗುತ್ತದೆ.
ಇನ್ನು ಮನೆಗೆ ನೆಂಟರು ಬಂದರೆ ಅದೂ ಹೆಚ್ಚುವರಿ ಖರ್ಚೆ. ಆಗ ಯಜಮಾನನಿಗೆ ತಾನು ಚಿಕ್ಕವನಿರುವಾಗ ನೆಂಟರ ಮನೆಗೆ ಹೋದಾಗ ಅವರೇಕೆ ಸಿಟ್ಟು ಸಿಟ್ಟು ಮಾಡುತ್ತಿದ್ದರು ಎನ್ನವುದು ಈಗ ಅರಿವಾಗಲು ಶುರುವಾಗುತ್ತದೆ. ಏಕೆ ಅವರು ಅಷ್ಟೋಂದು ಕಂಜೂಸ್ ಆಗಿದ್ದರು ಎನ್ನುವುದಕ್ಕೆ ಪುರಾವೆ ದೊರೆಯುತ್ತದೆ. ಯಜಮಾನ ’ತನ್ನ ಮದುವೆಗೆ ಮೊದಲು ಇದ್ದ ಜೀವನವೇ ಚೆನ್ನಾಗಿತ್ತಪ್ಪಾ. ಆವಾಗ ಈತರಹ ಜವಾಬ್ದಾರಿ ನನ್ನ ಮೇಲೆ ಇರಲಿಲ್ಲ’ ಎಂದು ಮನಸ್ಸಿನಲ್ಲಿ ಹಪಹಪಿಸುತ್ತಲೇ ಜೀವನ ಸವೆಸುತ್ತಾನೆ. ಇನ್ನು ಸಣ್ಣ ಪುಟ್ಟ ಕಡಿಮೆ ವೇತನದ ಕೆಲಸವಾದರಂತೂ ಮುಂದೆ ನಾನೆಷ್ಟು ವರ್ಷ ಕೆಲಸ ಮಾಡಬಲ್ಲೆ. ನನಗೇನು ಈ ಕಂಪನಿಯವರು ಪೆನ್ಶನ್ ನೀಡುತ್ತಾರೆ? ವಯಸ್ಸಾದ ನಂತರ ನನ್ನ ಸಂಸಾರದ ಕಥೆ ಏನು? ಮಕ್ಕಳು ಹೇಗೆ ಕಲಿಯುತ್ತಾರೋ? ಅವರಿಗೆ ಒಳ್ಳೆಯ ಕೆಲಸ ಸಿಕ್ಕಬಹುದೆ? ಕೆಲಸ ಸಿಕ್ಕರೂ ಅವರು ನಮ್ಮಿಬ್ಬರನ್ನು (ನಾನು, ನನ್ನ ಹೆಂಡತಿ) ನೋಡಿಕೊಳ್ಳುತ್ತಾರೆಯೇ? ಹೀಗೆ ಹತ್ತು ಹಲವಾರು ಪ್ರಶೆಗಳನ್ನು ತನ್ನಲ್ಲಿ ತಾನು ಕೇಳಿಕೊಳ್ಳುತ್ತಲೇ ಮುಂಜಾನೆ/ಸಂಜೆ ವಾಕಿಂಗ್ ಮಾಡುತ್ತಾನೆ.
ಯಜಮಾನನ ಜೇಬಿನಲ್ಲಿ ಎಲ್ಲಿಯವರೆಗೆ ಹಣವಿರುತ್ತದೋ ಅಲ್ಲಿಯವರೆಗೆ ಆತನ ಮನಸ್ಸಿನಲ್ಲಿ ನೆಮ್ಮದಿ ಇದ್ದು ಆತ ಖುಷಿಯಲ್ಲಿರುವಂತೆ ಮಾಡುತ್ತದೆ. ಜೇಬು ಎಂದು ಖಾಲಿ ಆಯಿತೋ ಅಲ್ಲಿಂದ ಸಿಟ್ಟು ಬರಲು ಶುರುವಾಗುತ್ತದೆ. ಯಜಮಾನನಿಗೆ ಸಣ್ಣ ವಿಷಯಕ್ಕೂ ಕೋಪಿಸಿಕೊಂಡು ಹೆಂಡತಿ/ಮಕ್ಕಳೊಂದಿಗೆ ರೇಗಾಡುವುದು ರೂಢಿಯಾಗಿಬಿಡುತ್ತದೆ.
ತನ್ನ ಪ್ರಾಯದ ಕಾಲದಲ್ಲಿ ವೇತನ ಸಿಕ್ಕ ಕೂಡಲೇ ಕಲರ್‌ಫುಲ್ ಡ್ರೆಸ್ ತೆಗೆದುಕೊಳ್ಳುತ್ತಿದ್ದ ಈತ ಸದಾ ತನ್ನ ಕೈಯಲ್ಲಿ ದುಡ್ಡಿದ್ದೂ ಈಗ ’ಫೂಲ್’ ಆಗಿರುತ್ತಾನೆ. ಅಯ್ಯೊ ಇಂದು ಬರೆ ೧೫ ನೇ ತಾರೀಖು. ಎಲ್ಲ ಹಣ ಖರ್ಚಾಯಿತು. ಇನ್ನೂ ವೇತನಕ್ಕೆ ೨೦-೨೫ ದಿನ ಕಾಯಬೇಕಲ್ಲ. ಯಾರಲ್ಲಿ ಸಾಲ ಕೇಳುವುದು ಎಂದು ಯೋಚಿಸುತ್ತಲೇ ಕಾಲ ಕಳೆಯುತ್ತಾನೆ. ಇನ್ನು ತನ್ನ ಮಗ/ಮಗಳು ದೊಡ್ಡವರಾದಂತೆಲ್ಲ ಈತನ ಖರ್ಚು ಹೆಚ್ಚಾಗುತ್ತ ಸಾಗುತ್ತದೆ. ವೇತನ ೫೦೦ ಹೆಚ್ಚಾದರೆ ಖರ್ಚು ೨೦೦೦ ಹೆಚ್ಚಾಗುತ್ತ ಹೋದರೂ ಹೋಯಿತೆ?
ಯಜಮಾನನ ಮನದಲ್ಲಿ, ಆಗಾಗ ತನ್ನ ಜೀವನದ ಹಿಂದಿನ ವರ್ಷಗಳಲ್ಲಿ ದುಡ್ಡು ಪೋಲು ಮಾಡಿದ ನೆನಪು ಆತನನ್ನು ಕಾಡುತ್ತಿರುತ್ತದೆ. ಅಯ್ಯೊ ಆಗ ನಾನು ಸ್ವಲ್ಪವೂ ಹಣವನ್ನು ಉಳಿತಾಯ ಮಾಡಲಿಲ್ಲ. ನನ್ನ ತಂದೆ ಸದಾ ನನಗೆ ’ಲೋ ನೀನು ಜೀವನದಲ್ಲಿ ಎಷ್ಟು ಗಳಿಸುತ್ತೀಯಾ ಎನ್ನುವುದಕ್ಕಿಂತ, ಎಷ್ಟು ಉಳಿಸುತ್ತೀಯಾ ಎನ್ನುವುದು ಮುಖ್ಯ’ ಎಂದು ಪದೆ ಪದೆ ಜರಿಯುತ್ತಿದ್ದರೂ ನಾನು ಆಗ ಅಪ್ಪನ ಮಾತು ಕೇಳಲಿಲ್ಲವಲ್ಲ. ನನ್ನ ಅಪ್ಪ ತಾನು ಅನುಭವಿಸಿದ ಕಷ್ಟಗಳಿಂದಲೇ ತನಗೆ ಹೇಳುತ್ತಿದ್ದ ಎನ್ನುವುದು ಯಜಮಾನನಿಗೆ ಕಾಲ ಮಿಂಚಿ ಹೋದ ಮೇಲೆ ಅರಿವಾಗುತ್ತದೆ.
ತಿಂಗಳಲ್ಲಿ ಯಾವುದೋ ಒಂದು ಇತರೆ ಖರ್ಚು ಜಾಸ್ತಿ ಬಂತೆಂದರೆ ತಿಂಗಳ ಬಜೆಟ್ ಸರಿಹೊಂದಿಸಲು ೩-೬ ತಿಂಗಳುಗಳೇಬೇಕು. ಉದಾಹರಣೆಗೆ ಏನೋ ಆಸ್ಪತ್ರೆ ಖರ್ಚು ಬಂತು ತನ್ನ ಮನೆಯಲ್ಲಿ. ಅಥವಾ ತನ್ನ ಮಗುವಿನ ಜನ್ಮದಿನ ಬಂತು. ಎಲ್ಲೋ ದೂರದ ಊರಿಗೆ ದೇವಸ್ಥಾನಕ್ಕೆ ಹೋದೆವು ಇತ್ಯಾದಿ ಇತ್ಯಾದಿ. ಇನ್ನು ವಯಸ್ಸಾದ ತಂದೆ-ತಾಯಿಯರನ್ನಂತೂ ಸೂಕ್ಷ್ಮವಾಗಿ ನೋಡಿಕೊಳ್ಳಲೇ ಬೇಕು. ಆಕಸ್ಮಾತ್ ಹಿರಿಯರು ವೃದ್ಧಾಶ್ರಮದಲ್ಲೇ ಇರಲು ಇಷ್ಟಪಟ್ಟರೆ ತಿಂಗಳಿಗೆ ಆಶ್ರಮದ ಮಾಸಿಕ ಶುಲ್ಕವೂ ಒಂದು ದೊಡ್ಡ ಖರ್ಚೇ.
ಇವೆಲ್ಲ ಸಮಸ್ಯೆಗಳು ಬರದಿರಲು ಏನು ಮಾಡಬೇಕು?
೧) ನಮ್ಮ ಜೀವನದ ಬಾಲವಾಡಿ ಸಮಯದಿಂದಲೇ ಚೆನ್ನಾಗಿ ಓದಬೇಕು. ನನ್ನ ಜೀವನದಲ್ಲಿ ಕಲಿಯಲು ಇನ್ನೊಂದು ೧೨-೧೫ ವರ್ಷ ಅಷ್ಟೇ ಕಾಲಾವಕಾಶವಿದೆ. ನಂತರ ನಾನು ಉತ್ತಮ ಜೀವನ ನಡೆಸಬೇಕೆಂದರೆ ಈ ಅಮೂಲ್ಯ ವರ್ಷಗಳನ್ನು ಹಾಳುಮಾಡುವುದು ಬೇಡ ಎಂದು ಚೆನ್ನಾಗಿ ಓದುತ್ತ ಸಾಗಬೇಕು.
೨) ಮನೆಯಲ್ಲಿ ಹಿರಿಯರು ಒಳ್ಳೆಯದನ್ನು ಏನೇ ಹೇಳಲಿ ಅವರು ಬೈದರು ಎಂದುಕೊಳ್ಳದೇ ಅದನ್ನು ಮನಸ್ಸಿಗೆ ತೆಗೆದುಕೊಂಡು ಕಾರ್ಯ ರೂಪಕ್ಕೆ ತಂದುಕೊಳ್ಳಬೇಕು. ಬೇಡವಾದನ್ನು ಇನ್ನೊಂದು ಕಿವಿಯಲ್ಲಿ ಬಿಡುವುದು ಒಳ್ಳೆಯದು.
೩) ಕೇವಲ ಓದಿದರೆ ಬೇಜಾರಾಗುತ್ತದೆ ಎನಿಸಿದರೆ ಆಗಾಗ ಆಸಕ್ತಿಯುಳ್ಳ ಆಟ ವಾಡುತ್ತ ಮನಸ್ಸು ಹಗುರ ಮಾಡಿಕೊಂಡು ಪುನಃ ಓದಬೇಕು.
೪) ಉತ್ತಮವಾಗಿ ಓದಿದ ನಂತರ ಒಳ್ಳೆಯ ಕೆಲಸ ಸಿಕ್ಕರೆ ಮೊದಲ ತಿಂಗಳಿನಿಂದಲೇ ೧೦೦ ರೂಪಾಯಿಗಳನ್ನಾದರೂ ಉಳಿತಾಯ ಮಾಡಬೇಕು. ಹೆಚ್ಚು ವೇತನ ಸಿಗುತ್ತಿದೆ ಎಂದಾದರೆ ಹೆಚ್ಚು ಉಳಿತಾಯ ಮಾಡಲೂ ಬಹುದು.
೫) ಮದುವೆಯ ನಂತರ ಉಳಿತಾಯ ಮಾಡುವುದು ತುಂಬಾ ಕಷ್ಟವಾದ್ದರಿಂದ ಒಂಟಿ ಜೀವನದಲ್ಲಿ ನಾವೇನು ಉಳಿಸುತ್ತೇವೆಯೋ ಅದೇ ನಿಜ.
೬) ಮನೆಯ ಹುಂಡಿಯಲ್ಲಿ ಕೂಡಿಟ್ಟ ಹಣ ಅಷ್ಟೊಂದು ಭದ್ರವಲ್ಲ. ಮತ್ತು ಅದು ಖರ್ಚಾಗುವ ಅಪಾಯವಿದೆ. ಆದ್ದರಿಂದ ಅಂಚೇ ಕಚೇರಿ, ಬ್ಯಾಂಕ್‌ಗಳಲ್ಲಿ ಉಳಿತಾಯ ಮಾಡುವುದು ಉತ್ತಮ.
೭) ಪ್ರೀತಿ -ಪ್ರೇಮದ ಬಲೆಯಲ್ಲಿ ಬಿದ್ದರೆ ಪರಿಣಾಮ ಬಹು ದುಸ್ತರ. ಏಕೆಂದರೆ ದುಬಾರಿ ಗಿಫ್ಟ್, ಪಿಕ್‌ನಿಕ್ ಮುಂತಾದವುಗಳಿಂದ ಹಣದ ಪೋಲು. ಜೊತೆಗೆ ವಿದ್ಯಾರ್ಥಿ ಜೀವನದ ಅಮೂಲ್ಯ ಸಮಯ ವ್ಯರ್ಥವಾಗುವುದು. ಅದೂ ಪ್ರೀತಿಯನ್ನು ತುಂಬಾ ಮನಸ್ಸಿನಿಂದ ಹಚ್ಚಿಕೊಂಡರಂತೂ ಪ್ರೇಮಿಗಳಿಗೆ ಬೇರೆ ಏನು ಮಾಡಲೂ ತಲೆ ಓಡುವುದಿಲ್ಲ. ಅಲ್ಲಿಂದ ಮುಂದಿನ ಜೀವನ ವಿದ್ಯಾರ್ಥಿಗಳು ತಮ್ಮ ಕೈಯಿಂದಲೇ ತಮ್ಮ ಜೀವನ ಹಾಳುಮಾಡಿಕೊಂಡಂತೆ.
೮) ವಿದ್ಯಾರ್ಥಿ ಜೀವನದಲ್ಲಿ ನಾವು ಆರಿಸಿಕೊಳ್ಳುವ ಸ್ನೇಹಿತರು ನಮ್ಮ ಜೀವನದ ಮೇಲೆ ತುಂಬಾ ಪರಿಣಾಮ ಬೀರುತ್ತಾರೆ. ಕೆಲವು ದುಷ್ಟ ಗೆಳೆಯರನ್ನು ನಾವು ಹೊಂದಿದ್ದೇವೆಂದು ಇಟ್ಟುಕೊಳ್ಳೋಣ. ಅವರು ಜನ್ಮದಿನ, ಡಿಸೆಂಬರ್ ೩೧, ಹೋಳಿ, ಗಣೇಶ ಚತುರ್ಥಿ ಮುಂತಾದ ಸಂದರ್ಭದಲ್ಲಿ ಒಂದು ಸಣ್ಣ ಬೀಯರ್ ಟಿನ್ ಹೊಡೆಯೋಣ ಎಂದು ಚಟ ಹತ್ತಿಸಿ ಅದು ಕೊನೆಗೆ ವಿಸ್ಕಿ, ರಮ್, ಜಿನ್‌ಗೆ ಹೋಗಿ ತಲುಪುತ್ತದೆ. ಮದ್ಯದ ಜೊತೆ ಸಿಗರೇಟ್, ಗುಟಖಾ ಇವೆಲ್ಲ ಚಟಗಳ ಒಂದು ಪ್ಯಾಕೇಜ್ ಇದ್ದಂತೆ. ಒಂದನ್ನೊಂದು ಬಿಟ್ಟಿರಲು ಬಿಡವು. ಆಕಸ್ಮಾತ್ ಯುವಕ/ಯುವತಿ ಕೈಯಲ್ಲಿ ದುಡ್ಡು ಓಡಾಡುತ್ತಿದ್ದರಂತೂ ಚಟ ಇನ್ನೂ ಬೇಗ ಅಂಟಿಕೊಳ್ಳುತ್ತದೆ. ಆದ್ದರಿಂದ ಇವುಗಳಿಂದ ದೂರ ಇರಬೇಕೆಂದರೆ ಮೊದಲು ಉತ್ತಮ ಸ್ನೇಹಿತರನ್ನು ಆಯ್ಕೆ ಮಾಡಿಕೊಳ್ಳಿ.
೯) ಚೆನ್ನಾಗಿ ಓದಿ ಸಣ್ಣ ವಯಸ್ಸಿನಲ್ಲಿಯೇ ಉತ್ತಮ ಕೆಲಸ ಸಿಕ್ಕಿದರಂತೂ ಮನುಷ್ಯ ಬಲು ಬೇಗ ಜೀವನದಲ್ಲಿ ಸೆಟಲ್ ಆಗುತ್ತಾನೆ. ಇವಕ್ಕೆಲ್ಲ ಜವಾಬ್ದಾರಿ ಸ್ಥಾನದಲ್ಲಿರುವ ತಂದೆ-ತಾಯಂದಿರ, ಮನೆಯವರ ಸಹಾಯವೂ ಅಷ್ಟೇ ಮುಖ್ಯ. ತಂದೆ-ತಾಯಂದಿರು ತಮ್ಮ ಮಕ್ಕಳು ದೊಡ್ಡವರಾದಂತೆಲ್ಲ ಸ್ನೇಹಿತರಂತೆ ತಮ್ಮ ಮಕ್ಕಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಕಷ್ಟ-ಸುಖಗಳನ್ನು ಅರಿತು ವಿದ್ಯಾರ್ಥಿಗಳು ಹಾದಿ ತಪ್ಪದಂತೆ ನೋಡಿಕೊಳ್ಳಬೇಕು.
೧೦) ಇನ್ನೊಂದು ಜೀವನದ ಬಹು ಮುಖ್ಯ ವಿಷಯವೆಂದರೆ ಎಷ್ಟು ಬೇಗ ವಿದ್ಯಾಭ್ಯಾಸ ಮುಗಿಸಿ ಒಳ್ಳೆಯ ಕೆಲಸ ಹಿಡಿಯುತ್ತೇವೆಯೋ ಅಷ್ಟು ಒಳ್ಳೆಯದು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ