ಬಿಜೆಪಿ ಸುಳ್ಳುಗಳಿಗೆ ಕೌಂಟರ್ ಕೊಡಲು ಸಿದ್ದರಾಗಿ: ಸಚಿವರಿಗೆ ಸಿಎಂ ಸೂಚನೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ರಾಜ್ಯದ 3 ಕ್ಷೇತ್ರಗಳಿಗೆ ವಿಧಾನಸಭೆ ಉಪಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಸಚಿವರುಗಳ ಸಭೆ ನಡೆಸಿ ಚರ್ಚಿಸಿದರು.
ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಚಿವರುಗಳ ಸಭೆಯಲ್ಲಿ ಚರ್ಚೆಯಾದ ಸಂಗತಿಗಳು/ ತೆಗೆದುಕೊಂಡ ತೀರ್ಮಾನಗಳು-
*ಮೂರೂ ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲ್ಲುವ ಸಾಧ್ಯತೆಗಳು ಹೆಚ್ಚಾಗಿವೆ. ಆದ್ದರಿಂದ ಸಂಪೂರ್ಣ ಶ್ರಮ ಹಾಕಿ ಚುನಾವಣೆ ನಿರ್ವಹಿಸಬೇಕು.
*ಪ್ರತೀ ಚುನಾವಣೆ ಸಂದರ್ಭದಲ್ಲೂ ಬಿಜೆಪಿಯ ಪ್ರತಿಯೊಬ್ಬರೂ ಚಾಲೆಂಜಿಗೆ ಬಿದ್ದವರಂತೆ ಸುಳ್ಳುಗಳನ್ನು ಹೇಳುತ್ತಾರೆ. ಅವರ ಸುಳ್ಳುಗಳನ್ನು ಜನರೆದುರು ಬಯಲುಗೊಳಿಸಬೇಕು.

*ಲೋಕಸಭೆ ಚುನಾವಣೆ ಮುಗಿದ ಮರುದಿನವೇ ಗ್ಯಾರಂಟಿ ಯೋಜನೆಗಳು ಸ್ಥಗಿತಗೊಳ್ಳುತ್ತವೆ ಎಂದು ಮೋದಿಯವರಿಂದ ಹಿಡಿದು ಸಿ.ಟಿ.ರವಿವರೆಗೂ ಪ್ರತಿಯೊಬ್ಬರೂ ರಾಶಿ ರಾಶಿ ಸುಳ್ಳು ಹೇಳಿದ್ದರು. ಈ ಚುನಾವಣೆಯಲ್ಲೂ ಹೊಸ ಹೊಸ ಸುಳ್ಳುಗಳನ್ನು ಬೆಳಗ್ಗೆ, ಮಧ್ಯಾಹ್ನ, ಸಂಜೆ, ರಾತ್ರಿ ಹೇಳುತ್ತಲೇ ಇರುತ್ತಾರೆ. ಇವುಗಳನ್ನು ಸರಿಯಾಗಿ ಕೌಂಟರ್ ಮಾಡಬೇಕು.
*ಉಪಚುನಾವಣೆ ಮುಗಿಯುವರೆಗೂ ಕೇಂದ್ರ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುವ ಪ್ರಮಾಣ ಇನ್ನೂ ಹೆಚ್ಚಲಿದೆ.
*ಜಾತಿ ಸಮೀಕ್ಷೆ, ಒಳ ಮೀಸಲಾತಿ, ಪಂಚಮಸಾಲಿ ಸಮುದಾಯದ ಬೇಡಿಕೆ ಕುರಿತಂತೆ ಅಪಪ್ರಚಾರ ಮಾಡುತ್ತಾರೆ. ಈ ಎಲ್ಲಾ ವಿಚಾರಗಳ ಬಗ್ಗೆಯೂ ನಮ್ಮ ನಿಲುವು ಸ್ಪಷ್ಟವಾಗಿದ್ದು ಆಯಾ ಸಮುದಾಯದ ಮುಖಂಡರು ಮತ್ತು ಜನಪ್ರತಿನಿಧಿಗಳ ಜೊತೆ ಸಭೆ ನಡೆಸಿ ನಮ್ಮ ಬೆಂಬಲ ಇರುವುದನ್ನು ಮನದಟ್ಟು ಮಾಡಿಸಿದ್ದೇವೆ. ಆದರೂ ಬಿಜೆಪಿ ಸರಣಿ ಸುಳ್ಳುಗಳ ಮೂಲಕ ಭಯಾನಕ ಅಪಪ್ರಚಾರ ಮಾಡುತ್ತದೆ. ಸುಳ್ಳುಗಳ ಹೊರತಾಗಿ ಬಿಜೆಪಿಗೆ ಬೇರೆ ಬಂಡವಾಳ ಇಲ್ಲ.
*ಮೂರೂ ಕ್ಷೇತ್ರಗಳ ಉಪಚುನಾವಣೆ ಬಹಳ ಮಹತ್ವದ್ದಾಗಿದ್ದು ನಾವು ಮೂರನ್ನೂ ಗೆಲ್ಲಬೇಕು. ಇದಕ್ಕಾಗಿ ಪ್ರತಿಯೊಬ್ಬರೂ ತಾವು ವಹಿಸಿಕೊಂಡ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ