ಪ್ರಗತಿವಾಹಿನಿ ಸುದ್ದಿ, ಘಟಪ್ರಭಾ:- ಕೆಲವು ತಿಂಗಳುಗಳಿಂದ ಘಟಪ್ರಭಾ ನಗರದಲ್ಲಿ ಗಾಂಜಾ ಮತ್ತು ಡ್ರಗ್ಸ್ ಘಾಟು ಹೆಚ್ಚಾಗಿ ಕೆಲವು ಅಮಾಯಕ ಯುವಕರು ಅಪ್ರಾಪ್ತರು, ವಿದ್ಯಾರ್ಥಿಗಳು ಈ ಡ್ರಗ್ಸ್ ದುಶ್ಚಟಕ್ಕೆ ದಾಸರಾಗಿ ಬಲಿಯಾಗುತ್ತಿರುವುದರಿಂದ ಘಟಪ್ರಭಾದಲ್ಲಿ ಬುಧವಾರ ಬೃಹತ್ ಅಭಿಯಾನ ನಡೆಯಿತು.
ಗುಬ್ಬಲಗುಡ್ಡ ಕೆಂಪಯ್ಯಸ್ವಾಮಿ ಮಠದ ಡಾ|| ಮಲ್ಲಿಕಾರ್ಜುನ ಮಹಾಸ್ವಾಮಿಗಳ ನೇತೃತ್ವದಲ್ಲಿ ನಡೆದ ಡ್ರಗ್ಸ್ ವಿರುದ್ಧ ಅಭಿಯಾನಕ್ಕೆ ನಗರದ ಎಲ್ಲಾ ಕಾಲೇಜು ವಿದ್ಯಾರ್ಥಿ ಸಮೂಹಗಳೊಂದಿಗೆ, ರೈತ ಸಂಘ, ಕನ್ನಡಪರ ಸಂಘಟನೆ, ಭಾರತ ಸೇವಾದಳ, ಕೆನರಾ ಬ್ಯಾಂಕ್ ಸೇರಿ ಹಲವಾರು ಸಂಘ-ಸಂಸ್ಥೆಗಳು ಎಲ್ಲರು ಸ್ವಇಚ್ಚೆಯಿಂದ ಆಗಮಿಸಿ ಅಭಿಯಾನ ನಡೆಸಿದರು.
ಘಟಪ್ರಭಾ ನಗರದಲ್ಲಿ ಇದೇ ಪ್ರಥಮ ಬಾರಿಗೆ 4 ಸಾವಿರಕ್ಕೂ ಹೆಚ್ಚು ಜನರು ಇಂತಹ ಒಂದು ಅಭಿಯಾನದಲ್ಲಿ ಭಾಗವಹಿಸಿ ಗಮನ ಸೆಳೆದಿರುವುದು ಇತಿಹಾಸವಾಗಿದೆ. ಎಲ್ಲಿ ನೋಡಿದರಲ್ಲಿ ಡ್ರಗ್ಸ್ ವಿರುದ್ಧ ಘೋಷಣೆ, ಭಿತ್ತಿ ಪತ್ರ ಕಾಣಿಸುತ್ತಿದ್ದು ಎಲ್ಲಾ ಅಂಗಡಿ ಮುಂಗಟ್ಟುಗಳು ಸ್ವಇಚ್ಚೆಯಿಂದ ಬಂದ್ ಮಾಡಿ ಜಾಗ್ರತಿ ಜಾಥಾದಲ್ಲಿ ಭಾಗವಹಿಸಿದರು.
ಕಾರ‍್ಯಕ್ರಮದ ನೇತೃತ್ವ ವಹಿಸಿದ ಡಾ|| ಮಲ್ಲಿಕಾರ್ಜುನ ಮಹಾಸ್ವಾಮಿಗಳು ಮಾತನಾಡಿ, ಈ ಗಾಂಜಾ, ಡ್ರಗ್ಸ್ ಸೇವನೆ ದೇಶಕ್ಕೆ ಅತ್ಯಂತ ಮಾರಕ. ನಮ್ಮ ದೇಶದ ಸಂಸ್ಕೃತಿಯನ್ನು ಎಲ್ಲ ದೇಶದವರು ಗೌರವಿಸುತ್ತಿದ್ದ ಸಂದರ್ಭದಲ್ಲಿ ಇಂತಹ ಒಂದು ದುಶ್ಚಟ ಇಂದು ನಮ್ಮ ದೇಶದಲ್ಲಿ ವೇಗವಾಗಿ ಹರಡುತ್ತಿದೆ. ಅದು ಈಗ ತಮ್ಮ-ತಮ್ಮ ಮನೆ ಬಾಗಿಲಿಗೆ ಬಂದು ನಿಂತಿದ್ದು ತಮ್ಮ ಮಕ್ಕಳನ್ನು ಅದರಿಂದ ರಕ್ಷಿಸಿಕೊಳ್ಳುವುದೆ ಈ ಸಂದರ್ಭದಲ್ಲಿ ಅತ್ಯಂತ ಮುಖ್ಯವಾಗಿದೆ. ತಮ್ಮ ಮಕ್ಕಳನ್ನು ರಕ್ಷಿಸಿಕೊಳ್ಳುವುದು ಪ್ರತಿಯೊಬ್ಬರ ಹೊಣೆಯಾಗಿದೆ ಎಂದರು.
ಈ ಡ್ರಗ್ಸ್ ವ್ಯಸನದ ಜಾಲಕ್ಕೆ ಒಮ್ಮೆ ಬಿದ್ದರೆ ಮತ್ತೆ ಅದರಿಂದ ಹೊರ ಬರಲು ಸಾಧ್ಯವಾಗುವುದಿಲ್ಲ. ಅದರಿಂದ ಮೆದುಳಿನ ಮೇಲೆ ಪರಿಣಾಮ ಬಿದ್ದು ಆತ ತನ್ನ ಜೀವನವನ್ನೆ ಹಾಳು ಮಾಡಿಕೊಳ್ಳಬೇಕಾಗುತ್ತದೆ. ಇಂದು ಘಟಪ್ರಭಾದಲ್ಲಿ ಯುವಕರು ಗಾಂಜಾ ಮತ್ತು ಡ್ರಗ್ಸ್ ಸೇವನೆಯಲ್ಲಿ ಮುಗ್ನರಾಗಿ ಕೆಲವು ಅಪತ್ತುಗಳನ್ನು ತಂದುಕೊಂಡಿದ್ದಾರೆಂದು ಕೇಳಿ ಬರುತ್ತಿದ್ದು ಇದರ ಬಗ್ಗೆ ಪ್ರತಿಯೊಬ್ಬರು ಒಂದಾಗಿ ಹೊರಾಟ ಮಾಡೋಣ ಘಟಪ್ರಭಾವನ್ನು ಗಾಂಜಾ, ಡ್ರಗ್ಸ್ ಮುಕ್ತ ನಗರವನ್ನಾಗಿ ಮಾಡೋಣ ಎಂದು ಹೇಳಿದರು.
ಮಲ್ಲಾಪೂರ ಲಕ್ಷ್ಮೀ ದೇವರ ಗುಡಿಯಿಂದ ಹೊರಟು ಮೃತ್ಯುಂಜಯ ಸರ್ಕಲ್ ತನಕ ಅಭಿಯಾನ ನಡೆದಿದ್ದು ಸರ್ಕಲ್‌ನಲ್ಲಿ ಕೆಲ ಸಮಯ ರಸ್ತೆ ತಡೆ ಮಾಡಿ ಗಾಂಜಾ ಮತ್ತು ಡ್ರಗ್ಸ್‌ನಿಂದ ಆಗುವ ಆಪತ್ತಿನ ಬಗ್ಗೆ ರೈತ ಸಂಘದ ರಾಜ್ಯ ಗೌರವಾಧ್ಯಕ್ಷರಾಗಿರುವ ಶಶಿಕಾಂತ ಪಡಸಲಗಿ, ರಾಮಣ್ಣ ಹುಕ್ಕೇರಿ, ಸುರೇಶ ಕಾಡದವರ, ಮಡಿವಾಳಪ್ಪ ಮುಚಳಂಬಿ, ಗುರುಬಸಯ್ಯ ಕರ್ಪೂರಪಠ, ಚೂನಪ್ಪ ಪೂಜೇರಿ, ಬಸವರಾಜ ಹಟ್ಟಿಗೌಡರ, ಪುರಸಭೆ ಮುಖ್ಯಾಧಿಕಾರಿ ಕೆ.ಬಿ.ಪಾಟೀಲ, ವಿರೂಪಾಕ್ಷ ದೇವರು ಸೇರಿ ಹಲವಾರು ಮಾತನಾಡಿದರು.
ಸಿಟ್ಟಾದ ಸಿಪಿಐ
ಘಟಪ್ರಭಾ ನಗರದಲ್ಲಿ ಗಾಂಜಾ ಮತ್ತು ಡ್ರಗ್ಸ್ ಸೇವನೆ ಹೆಚ್ಚಾಗುತ್ತಿರುವ ಕಾರಣ ಊರಿನ ಜನರು ಮಲ್ಲಿಕಾರ್ಜುನ ಮಹಾಸ್ವಾಮಿಗಳ ನೇತೃತ್ವದಲ್ಲಿ ಜಾಗ್ರತೆ ಅಭಿಯಾನ ಮಾಡಲು ನಿರ್ಧರಿಸಿರುವುದು ಘಟಪ್ರಭಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಶ್ರೀಶೈಲ ಬ್ಯಾಕೂಡರವರಿಗೆ ಅಸಮಾಧಾನ ಉಂಟು ಮಾಡಿದೆಯೇ?
ಅವರ ವರ್ತನೆ ಅಂತಹ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಈ ಅಭಿಯಾನದಲ್ಲಿ ವಿದ್ಯಾರ್ಥಿಗಳು ಭಾಗವಹಿಸದಂತೆ ಅವರು ತಡೆಯುವ ಪ್ರಯತ್ನ ಮಾಡಿದರೆನ್ನುವ ಆರೋಪ ಕೇಳಿ ಬಂದಿದೆ. ಅಲ್ಲದೆ ಮನವಿ ಸ್ವೀಕರಿಸಲು ಮೇಲಾಧಿಕಾರಿಗಳನ್ನು ಕರೆಯಿಸಿ ಎಂದು ಹೇಳಿದರೂ ಆ ಬಗ್ಗೆ ಕ್ರಮ ಕೈಗೊಳ್ಳಲಿಲ್ಲ.
ಈ ಸಂದರ್ಭದಲ್ಲಿ ಅಭಿಯಾನದಲ್ಲಿ ಭಾಗವಹಿಸಿದ ಹಿರಿಯರು, ಮೇಲಾಧಿಕಾರಿಗಳು ಬರುವ ತನಕ ರಸ್ತೆ ತೆರವು ಮಾಡುವುದಿಲ್ಲವೆಂದು ಹಠ ಹಿಡಿದು ಅಕ್ರೋಶ ವ್ಯಕ್ತ ಪಡಿಸಿದರು. ನಂತರ ಮನವಿ ಸ್ವೀಕರಿಸಲು ಬಂದ ಸಿಪಿಐ, ಘಟಪ್ರಭಾದಲ್ಲಿ ಡ್ರಗ್ಸ್ ಹಾಗೂ ಗಾಂಜಾ ಮಾರಾಟದ ಬಗ್ಗೆ ನಮಗೆ ಯಾವುದೆ ಮಾಹಿತಿ ಇಲ್ಲ. ಎಲ್ಲಿಯಾದರೂ ಇದ್ದರೆ ಬಂದು ನಮಗೆ ಹೇಳಿ ಎಂದು ಅಕ್ರೋಶದಿಂದ ಮಾತನಾಡಿದರು.
ಅಭಿಯಾನ ನಡೆಸಿದವರೆ ಅಪರಾಧಿಗಳು ಎನ್ನುವಂತೆ ಅವರು ವರ್ತಿಸಿರುವುದು ಸೇರಿದ ಹಿರಿಯರಿಗೆ, ಮುಖಂಡರಿಗೆ ಹಾಗೂ ಸಾರ್ವಜನಿಕರಿಗೆ ಅಸಮಾಧಾನವನ್ನುಂಟು ಮಾಡಿದೆ.
ಡ್ರಗ್ಸ್ ಮತ್ತು ಗಾಂಜಾ ಮುಕ್ತ ಘಟಪ್ರಭಾಕ್ಕಾಗಿ ಬುಧವಾರ ಅಭಿಯಾನ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ