
ಘಟಪ್ರಭಾ ಸಕ್ಕರೆ ಕಾರ್ಖಾನೆ: ರೈತರಿಗೆ 2200 ರೂ ಮುಂಗಡ ಹಣ
ಪ್ರಗತಿವಾಹಿನಿ ಸುದ್ದಿ, ಗೋಕಾಕ: ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಗೆ ಪ್ರಸಕ್ತ ಹಂಗಾಮಿನಲ್ಲಿ ಕಬ್ಬು ಪೂರೈಸುವ ರೈತರಿಗೆ ಪ್ರತಿ ಟನ್ ಕಬ್ಬಿಗೆ 2200 ರೂ.ಗಳನ್ನು ಮುಂಗಡವಾಗಿ ಹಣ ಪಾವತಿಸಲಾಗುವುದು ಎಂದು ಕಾರ್ಖಾನೆಯ ಅಧ್ಯಕ್ಷ ಅಶೋಕ್ ಪಾಟೀಲ ಹೇಳಿದರು.
ಬುಧವಾರ ನಗರದ ಹೊರವಲಯದಲ್ಲಿರುವ ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ 2019-20ನೇ ಸಾಲಿನ ಕಬ್ಬು ನುರಿಸುವ ಹಂಗಾಮು ಪ್ರಾರಂಭೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಿಂದಿನಂತೆ ಕಬ್ಬು ಪೂರೈಕೆ ಮಾಡಿದಂತೆ ಈ ಹಂಗಾಮಿನಲ್ಲಿಯೂ ನಮ್ಮ ಕಾರ್ಖಾನೆಗೆ ಕಬ್ಬು ಪೂರೈಕೆ ಮಾಡುವ ಮೂಲಕ ಕಾರ್ಖಾನೆಯ ಒಳಿತಿಗಾಗಿ ಸಹಕರಿಸುವಂತೆ ರೈತರಲ್ಲಿ ಕೋರಿದರು.
ಈ ಭಾಗದ ರೈತರ ಜೀವನಾಡಿಯಾಗಿರುವ ಕಾರ್ಖಾನೆಯ ಪ್ರಗತಿಯಲ್ಲಿ ಅರಭಾಂವಿ ದುರದುಂಡೀಶ್ವರ ಮಠದ ಆಶೀರ್ವಾದಿಂದ ನಮ್ಮ ಕಾರ್ಖಾನೆಯು ಪಾವನವಾಗಿದೆ. ಜಾರಕಿಹೊಳಿ ಸಹೋದರರ ಮಾರ್ಗದರ್ಶನದಲ್ಲಿ ಕಾರ್ಖಾನೆಯು ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ಕೆಎಂಎಫ್ ಅಧ್ಯಕ್ಷರೂ ಆಗಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಸೂಚನೆಯ ಮೇರೆಗೆ ರೈತರಿಗೆ ಮುಂಗಡ ಹಣ ಪಾವತಿ ಮಾಡಲು ನಿರ್ಧರಿಸಲಾಗಿದೆ. ನಮ್ಮ ನೆರೆ-ಹೊರೆಯ ಕಾರ್ಖಾನೆಯವರು 2019-20ನೇ ಸಾಲಿನ ನಿಗದಿಪಡಿಸುವ ದರವನ್ನು ನಾವು ರೈತರ ಬ್ಯಾಂಕ್ ಖಾತೆಗಳಿಗೆ ಬಿಲ್ಲನ್ನು ಜಮಾ ಮಾಡಲು ಸಿದ್ಧರಿದ್ದೇವೆ ಎಂದು ಹೇಳಿದರು.
ಕಳೆದ ಹಂಗಾಮಿನಲ್ಲಿ 2.17 ಲಕ್ಷ ಟನ್ ಕಬ್ಬು ನುರಿಸಿದ್ದು, ಪ್ರಸಕ್ತ ಹಂಗಾಮಿನಲ್ಲಿ 3 ಲಕ್ಷ ಟನ್ ಕಬ್ಬು ನುರಿಸುವ ಜೊತೆಗೆ 3.25 ಲಕ್ಷ ಕ್ವಿಂಟಲ್ ಸಕ್ಕರೆಯನ್ನು ಉತ್ಪಾದಿಸುವ ಗುರಿಯನ್ನು ಹೊಂದಲಾಗಿದೆ ಎಂದು ತಿಳಿಸಿದರು.
ಅರಭಾಂವಿ ದುರದುಂಡೀಶ್ವರಮಠದ ಸಿದ್ದಲಿಂಗ ಮಹಾಸ್ವಾಮಿಗಳು ಪ್ರಸಕ್ತ ಕಬ್ಬು ನುರಿಸುವ ಹಂಗಾಮಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
ಕಾರ್ಖಾನೆಯ ಉಪಾಧ್ಯಕ್ಷ ರಾಮಣ್ಣಾ ಮಹಾರೆಡ್ಡಿ, ನಿರ್ದೇಶಕರಾದ ಬಸಗೌಡ ಪಾಟೀಲ(ಕಲ್ಲೋಳಿ) ಕೃಷ್ಣಪ್ಪ ಬಂಡ್ರೋಳ್ಳಿ, ಲಕ್ಷ್ಮಣ ಗಣಪ್ಪಗೋಳ, ಶಿವಲಿಂಗ ಪೂಜೇರಿ, ಭೂತಪ್ಪ ಗೋಡೇರ, ಮಾಳಪ್ಪ ಜಾಗನೂರ, ಸಿದ್ದಲಿಂಗ ಕಂಬಳಿ, ಮಲ್ಲಿಕಾರ್ಜುನ ಕಬ್ಬೂರ, ಗಿರೀಶ ಹಳ್ಳೂರ, ಯಲ್ಲವ್ವ ಸಾರಾಪೂರ, ಲಕ್ಕವ್ವ ಬೆಳಗಲಿ, ಕಾರ್ಖಾನೆಯ ಸಲಹಾ ಸಮಿತಿಯ ಸದಸ್ಯರಾದ ವಿಕ್ರಮ ಅಂಗಡಿ, ಸೈದಪ್ಪ ಗದಾಡಿ, ಬಸವರಾಜ ಕಲ್ಯಾಣಶೆಟ್ಟಿ, ಕಬ್ಬು ಅಭಿವೃದ್ದಿ ಅಧಿಕಾರಿ ಜೆ.ಆರ್.ಬಬಲೇಶ್ವರ, ಸಹಕಾರಿಗಳು, ರೈತ ಬಾಂಧವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ