*ಹೋಬಳಿಗೊಂದು ಸ್ಟೇಡಿಯಂ ನಿರ್ಮಾಣಕ್ಕೆ ಜಿಪಂ ಸಿಇಒ ರಾಹುಲ್ ಶಿಂಧೆ ಸೂಚನೆ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಹೋಬಳಿ ಮಟ್ಟದಲ್ಲಿ ಒಂದು ಸ್ಟೇಡಿಯಂ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಜಿಪಂ ಸಿಇಒ ರಾಹುಲ್ ಶಿಂಧೆ ಅವರು ಸೂಚಿಸಿದರು.
ಗೋಕಾಕ ನಗರದ ತಾಲ್ಲೂಕು ಪಂಚಾಯತ್ ಕಾರ್ಯಾಲಯದ ಸಭಾಂಗಣದಲ್ಲಿ ಗುರುವಾರ ನಡೆದ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮನರೇಗಾ ಯೋಜನೆಯಡಿ ಶಾಲಾಭಿವೃದ್ಧಿ ಕಾಮಗಾರಿಗಳ ಕ್ರಿಯಾ ಯೋಜನೆ ಸಿದ್ಧಪಡಿಸಬೇಕು. ಸರಕಾರಿ ಪಿಯು ಕಾಲೇಜು ಹಾಗೂ ಶಾಲಾ ಮಕ್ಕಳಿಗೆ ಅಗತ್ಯ ಬೆಂಚ್ ಗಳನ್ನು ವ್ಯವಸ್ಥೆಗೆ ಅಗತ್ಯ ಕ್ರಮಕೈಗೊಳ್ಳಬೇಕು. ಶಾಲೆಗಳಲ್ಲಿಯೂ ಸ್ಚಚ್ಛತೆ ಶಾಲಾ ಶೌಚಾಲಯ, ಕಿಚನ್ ಶೆಡ್, ಡೈನಿಂಗ್ ಹಾಲ್ ಕಾಮಗಾರಿಗಳನ್ನು ಆದ್ಯತೆ ಮೇಲೆ ತೆಗೆದುಕೊಳ್ಳುವುದು, ಅಂಗನವಾಡಿ ಕೇಂದ್ರಗಳ ಮುಂಭಾಗದಲ್ಲಿ ಅವಶ್ಯವಿರುವ ಕಡೆಗಳಲ್ಲಿ ಸಿಸಿ ರಸ್ತೆ ಚರಂಡಿ ನಿರ್ಮಾಣ ಮಾಡಬೇಕು ಎಂದು ತಿಳಿಸಿದರು.
ಜಿಲ್ಲೆಯಾದ್ಯಂತ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿದ್ದು, ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಡೆಂಗ್ಯೂ ರೋಗ ತಡೆಗಟ್ಟುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು. ಆಯುಷ್ಮಾನ್ ಭಾರತ ಕಾರ್ಡ್ ಅರ್ಹರಿಗೆ ವಿತರಣೆ ಮಾಡಬೇಕು. ಜಾನುವಾರುಗಳಿಗೆ ವ್ಯಾಕ್ಸಿನೇಷನ್ ಹಾಕಬೇಕು. ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ಅಧಿಕಾರಿಗಳು ಕಡ್ಡಾಯ ನೀರು ಪರೀಕ್ಷೆ ಮಾಡಿ ಗುಣಮಟ್ಟದ ನೀರು ಒದಗಿಸುವುದು ಅಲ್ಲದೇ ಜೆಜೆಎಂ ಕಾಮಗಾರಿಗಳನ್ನು ಕೂಡಲೇ ಪೂರ್ಣಗೊಳಿಸಬೇಕು ಎಂದು ನಿರ್ದೇಶನ ನೀಡಿದರು.
ಸಭೆಯ ಮುಂಚೆ ಜಿಪಂ ಸಿಇಒ ಅವರು ತಾಲ್ಲೂಕಿನ ಖನಗಾಂವ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆಗೆ ಭೇಟಿ ನೀಡಿದ ಅವರು, ಮಕ್ಕಳ ದಾಖಲಾತಿ, ಮಕ್ಕಳ ವಸತಿ ಸೌಲಭ್ಯ, ಮಕ್ಕಳಿಗೆ ಪ್ರತಿದಿನ ನೀಡುವ ಆಹಾರ, ಶಾಲೆ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ ಉನ್ನತ ಶಿಕ್ಷಣಕ್ಕಾಗಿ ಮಕ್ಕಳ ಆಯ್ಕೆಯಾಗಿರುವ ಬಗ್ಗೆ ಮಾಹಿತಿ ಪಡೆದುಕೊಂಡರು. ಮೇಲ್ಮಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮೆಳವಂಕಿ ಬಹು ಗ್ರಾಮ ಯೋಜನೆಯ ಕುಡಿಯುವ ನೀರು ಶುದ್ಧೀಕರಣ ಘಟಕ ಭೇಟಿ ನೀಡಿದರು. ತವಗ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದ ಜಿ ಅವರು ಮಕ್ಕಳ ದಾಖಲಾತಿ, ಮಕ್ಕಳ ಹಾಜರಾತಿ, ಆಹಾರ, ಕೈ ತೋಟದ ಮಾಹಿತಿ ಪಡೆದ ಅವರು ಕೊಣ್ಣೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಡಿಜಿಟಲ್ ಗ್ರಂಥಾಲಯ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ತಾಲೂಕ್ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸಹಾಯಕ ಕಾರ್ಯಪಾಲಕ ಅಭಿಯಂತರ ಉದಯಕುಮಾರ ಕಾಂಬಳೆ, ಪಂಚಾಯತ ರಾಜ್ ಸಹಾಯಕ ನಿರ್ದೇಶಕ ವಿನಯಕುಮಾರ, ಶಿಶು ಅಭಿವೃದ್ಧಿ ಯೋಜನಾಧಿಕಾರಿಯಾದ ಟಿ.ಎಸ್. ಕೂಡವಕ್ಕಲಗಿ, ತಾಲೂಕ ಮಟ್ಟದ ಅಧಿಕಾರಿಗಳು, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ತಾಲೂಕ ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ