Latest

ಕರ್ನಾಟಕ ಪೊಲೀಸರ ಜೊತೆ ಗೋವಾ ಪುಂಡರ ಗದ್ದಲ

ಪ್ರಗತಿವಾಹಿನಿ ಸುದ್ದಿ; ಖಾನಾಪುರ: ತಾಲೂಕಿನ ಕಣಕುಂಬಿ ಗ್ರಾಮಕ್ಕೆ ಮೂರು ರಾಜ್ಯಗಳ ಜಲ ತಜ್ಞರ ತಂಡ ಭೇಟಿ ನೀಡಿದ ಸಂದರ್ಭದಲ್ಲಿ ತಂಡದಲ್ಲಿದ್ದ ಗೋವಾ ರಾಜ್ಯದ ಅಧೀಕ್ಷಕ ಅಭಿಯಂತ ಎಂ ಕೆ ಪ್ರಸಾದ್ ಅವರ ಬೆಂಬಲಿಗರು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆದಿದೆ.

ಮೇಲಧಿಕಾರಿಗಳ ಆದೇಶದಂತೆ ಕಣಕುಂಬಿ ಗ್ರಾಮದ ವಿವಾದಿತ ಪ್ರದೇಶಕ್ಕೆ ಸರ್ವೋಚ್ಛ ನ್ಯಾಯಾಲಯದಿಂದ ನಿಯುಕ್ತಿಗೊಂಡ ಮೂರೂ ರಾಜ್ಯಗಳ ತಂಡದ ಸದಸ್ಯರನ್ನು ಹೊರತುಪಡಿಸಿ ಉಳಿದವರಿಗೆ ಪ್ರವೇಶ ನಿರಾಕರಿಸಲಾಗಿತ್ತು. ಆದರೆ ಗೋವಾ ರಾಜ್ಯವನ್ನು ಪ್ರತಿನಿಧಿಸಿದ ಎಂ ಕೆ ಪ್ರಸಾದ್ ಅವರ ಜೊತೆಯಲ್ಲಿ ಗೋವಾ ರಾಜ್ಯದ ಮಹಾದಾಯಿ ಹೋರಾಟಗಾರರು, ನೀರಾವರಿ ಇಲಾಖೆಯ ಅಧಿಕಾರಿಗಳು ಹಾಗೂ ಸಾಮಾಜಿಕ ಕಾರ್ಯಕರ್ತರು ಕಣಕುಂಬಿಗೆ ಆಗಮಿಸಿದ್ದರು.

ಅವರನ್ನೆಲ್ಲ ವಿವಾದಿತ ಪ್ರದೇಶಕ್ಕೆ ತಂಡದ ಜೊತೆ ಬಿಡುವಂತೆ ಗೋವಾ ರಾಜ್ಯದ ಹೋರಾಟಗಾರರು ಪೊಲೀಸರನ್ನು ಕೋರಿದ್ದರು. ಆದರೆ ಇದಕ್ಕೆ ಸಹಮತ ತೋರದ ಪೊಲೀಸರು ಅವರನ್ನೆಲ್ಲ ಕಣಕುಂಬಿ ಗ್ರಾಮದ ಹೊರವಲಯದಲ್ಲಿ ತಡೆದಿದ್ದರು. ಈ ವಿಷಯವನ್ನು ಗೋವಾದ ಸಾಮಾಜಿಕ ಕಾರ್ಯಕರ್ತರು ಎಂ.ಕೆ ಪ್ರಸಾದ್ ಅವರ ಗಮನಕ್ಕೆ ತಂದಿದ್ದರು. ಪ್ರಸಾದ್ ಅವರು ಪೊಲೀಸರಿಗೆ ಎಲ್ಲರನ್ನೂ ಒಳಗೆ ಬಿಡುವಂತೆ ಸೂಚಿಸಿದರು.

ಆದರೆ ಮೇಲಧಿಕಾರಿಗಳ ಆದೇಶದ ಬಗ್ಗೆ ಪ್ರಸಾದ್ ಅವರಿಗೆ ಪೊಲೀಸರು ಮಾಹಿತಿ ನೀಡಿದ್ದರಿಂದ ಪ್ರಸಾದ್ ಅವರ ಸೂಚನೆಯಂತೆ ಗೋವಾ ರಾಜ್ಯದ ನೀರಾವರಿ ಅಧಿಕಾರಿಗಳನ್ನು ಮಾತ್ರ ಅವರ ಗುರುತಿನ ಪತ್ರವನ್ನು ನೋಡಿ ಒಳಗೆ ಬಿಡಲಾಯಿತು. ಉಳಿದವರನ್ನು ತಡೆಹಿಡಿದ ಕಾರಣ ಅವರೆಲ್ಲರೂ ಕರ್ನಾಟಕದ ಪೊಲೀಸ್ ಬಂದೋಬಸ್ತ್ ವಿರುದ್ಧ ಅಸಮಾಧಾನವನ್ನು ವ್ಯಕ್ತ ಪಡಿಸಿದರು.

ಕಣಕುಂಬಿಯ ತಮ್ಮ ನಿರ್ಧರಿತ ಕೆಲಸ ಮುಗಿಸಿ ಮರಳಿ ಗೋವಾ ಕಡೆ ತೆರಳುತ್ತಿದ್ದ ಪ್ರಸಾದ್ ಅವರ ಕಾರಿನ ಬಳಿ ಸೇರಿದ ಗೋವಾ ರಾಜ್ಯದ ಹೋರಾಟಗಾರರು ತಮ್ಮ ಮೇಲೆ ಕರ್ನಾಟಕ ಪೊಲೀಸರು ದೌರ್ಜನ್ಯ ಮಾಡಿರುವುದಾಗಿ ಆರೋಪಿಸಿದರು. ಇದನ್ನು ಕೇಳಿದ ಪ್ರಸಾದ್ ಅವರೂ ಸಹ ಕರ್ನಾಟಕ ಪೊಲೀಸರ ವರ್ತನೆಯನ್ನು ಖಂಡಿಸಿ ಈ ವಿಷಯವನ್ನು ಗೋವಾ ಸರ್ಕಾರದ ಗಮನಕ್ಕೆ ತರುವುದಾಗಿ ಹೋರಾಟಗಾರರಿಗೆ ತಿಳಿಸಿ ತೆರಳಿದರು ಎಂದು ಮೂಲಗಳು ತಿಳಿಸಿವೆ.

ಘಟನೆಯ ಬಗ್ಗೆ ಮಾಹಿತಿ ನೀಡಿದ ಖಾನಾಪುರ ಪೊಲೀಸರು, ಕಣಕುಂಬಿ ಐಬಿ ಬಳಿ ತಮ್ಮನ್ನೂ ಬಿಡುವಂತೆ ಕರ್ತವ್ಯ ನಿರತ ಪೊಲೀಸರ ಜೊತೆ ಗೋವಾ ರಾಜ್ಯದ ಸಾಮಾಜಿಕ ಕಾರ್ಯಕರ್ತರ ವಾಗ್ವಾದ ನಡೆದಿದೆ. ಆದರೆ ತಂಡದ ಪರಿಶೀಲನೆ ನಡೆಯುವಾಗ ಅವರನ್ನು ಕಣಕುಂಬಿ ಗ್ರಾಮದ ಹೊರಗೆ ತಡೆ ಹಿಡಿಯಲಾಗಿತ್ತು. ಪರಿಶೀಲನೆ ಮುಗಿದ ಬಳಿಕ ಎಲ್ಲರನ್ನು ಮರಳಿ ಕಳಿಸಲಾಗಿದೆ ಎಂದು ತಿಳಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button