ಪ್ರಗತಿವಾಹಿನಿ ಸುದ್ದಿ, ಬಸವರಾಜ ಕಟ್ಟಿಮನಿ ವೇದಿಕೆ, ಗೋಕಾಕ:
ಒಂದೇ ಧರ್ಮ ಗ್ರಂಥ ಓದಿದರೆ ಧರ್ಮಾಂಧತೆ, ಎಲ್ಲ ಧರ್ಮಗಳ ಗ್ರಂಥ ಓದಿದರೆ ಭಾವೈಕ್ಯತೆ. ಎಲ್ಲವನ್ನೂ ಓದುವ ರೂಢಿ ಮಾಡಿಕೊಳ್ಳಬೇಕು. ಕೆಟ್ಟ ನಿರ್ಧಾರದಿಂದ ಅನುಭವ ಸಿಗುತ್ತದೆ. ಎಲ್ಲ ಜೀವಿಗಳನ್ನು ಪ್ರೀತಿಸುವುದೇ ಧರ್ಮ ಎಂದು ಲೇಖಕ ಹಾಗೂ ಸತೀಶ ಶುಗರ್ಸ ವ್ಯವಸ್ಥಾಪಕ ನಿರ್ದಶಕ ಸಿದ್ದಾರ್ಥ ವಾಡೆನ್ನವರ ಹೇಳಿದರು.
ನಗರದ ಕೆಎಲ್‌ಇ ಸಂಸ್ಥೆಯ ಎಂ.ಬಿ.ಮುನವಳ್ಳಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶನಿವಾರ ನಡೆದ ಬೆಳಗಾವಿ ಜಿಲ್ಲಾ ೧೩ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವೈಚಾರಿಕ ಗೋಷ್ಠಿಯಲ್ಲಿ ಅವರು ಯುವ ಜನಾಂಗದ ತವಕ- ತಲ್ಲಣ ಎಂಬ ವಿಷಯ ಕುರಿತು ಅವರು ಮಾತನಾಡಿದರು.
ಎಲ್ಲ ಧರ್ಮ ಗ್ರಂಥಗಳು ಸಕಲ ಜೀವಿಗಳ ಲೇಸು ಬಯಸಿವೆ. ಆದರೆ ಬಹುತೇಕ ಎಲ್ಲ ಗ್ರಂಥಗಳಲ್ಲಿ ಶೇ. ೭೦ಕ್ಕಿಂತ ಹೆಚ್ಚು ಅಧ್ಯಾತ್ಮವೇ ಕೂಡಿದೆ. ಆದರೆ, ನಕಾರಾತ್ಮಕ ಅಂಶಗಳನ್ನು ಮಾತ್ರ ಅಳವಡಿಸಿಕೊಳ್ಳುತ್ತಿರುವುದು ಕಳವಳಕಾರಿ ವಿಷಯ ಎಂದರು.
ಮಕ್ಕಳ ಕನಸುಗಳನ್ನು ಗಣನೆಗೆ ತೆಗೆದುಕೊಳ್ಳದೇ ತಂದೆ-ತಾಯಿ ತಮ್ಮ ವಿಚಾರಗಳನ್ನು ಮಕ್ಕಳ ಮೇಲೆ ಹೇರುತ್ತಿದ್ದಾರೆ. ಇದರಿಂದ ಅನೇಕ ಮಕ್ಕಳು ಮನಸ್ಸಿಲ್ಲದ ಕ್ಷೇತ್ರಗಳಲ್ಲಿ ಹೋಗಿ ಜೀವನದಲ್ಲಿ ಅನುತ್ತೀರ್ಣಗೊಳ್ಳುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಅನುಕರಣೆ ಮಾಡುವುದನ್ನು ಬಿಡಬೇಕಾಗಿದೆ. ಜ್ಞಾನ, ಧೈರ್ಯ ಇಟ್ಟುಕೊಂಡು ಮುಂದೆ ಸಾಗಿದರೆ ಇಡೀ ಜಗತ್ತನ್ನೇ ಗೆಲ್ಲಲು ಸಾಧ್ಯ. ಅಮೆರಿಕ ದೇಶದ ಜನರು ಮಾಡುವುದನ್ನೇ ನಾವು ಮುಂದುವರಿಸುತ್ತಿದ್ದೇವೆ. ಅನುಕರಣೆ ಮಾಡುವುದನ್ನು ಬಿಟ್ಟು ಸ್ವಂತಿಕೆ ಬೆಳೆಸಿಕೊಳ್ಳಬೇಕು. ಸರ್ಕಾರದ ಬೆನ್ನು ಹತ್ತದೇ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಸರ್ಕಾರದ ಮೇಲೆ ಅವಲಂಬಿತರಾಗಿ ನಮ್ಮತನ ಕಳೆದುಕೊಳ್ಳಬಾರದು ಎಂದು ಕಿವಿಮಾತು ಹೇಳಿದರು.
ನಮ್ಮಲ್ಲಿ ಜ್ಞಾನ ಎಷ್ಟಿದೆ ಎಂಬುದರ ಆಧಾರದ ಮೇಲೆ ನಮ್ಮ ವ್ಯಕ್ತಿತ್ವ ನಿರ್ಮಾಣ ಆಗುತ್ತದೆ. ಮಾತನಾಡದೇ ಮಾಡಿ ತೋರಿಸುವುದೇ ಯುವ ಶಕ್ತಿ. ಯುವಶಕ್ತಿ ಮನಸ್ಸು ಮಾಡಿದರೆ ಸದೃಢ ಭಾರತ ನಿರ್ಮಾಣ ಸಾಧ್ಯ. ಇಂಥ ಪ್ರಯತ್ನಗಳಿಂದಲೇ ಯಂಗ್ ಇಂಡಿಯಾ ಸಾಧ್ಯವಿದೆ. ಗುರಿ ಒಂದೇ ಇಟ್ಟುಕೊಂಡು ಮುಂದೆ ಸಾಗಬೇಕು. ನಿಮ್ಮ ವಾರಸುದಾರರಿಗೆ ತಂದೆ- ತಾಯಿಗಳು ಆದರ್ಶಗಳಾಗಬೇಕು ಎಂದರು.
ದೇಶದ ಮೂಲ ಸೌಕರ್ಯಕ್ಕಾಗಿ ಮೀಸಲಿಡುವ ಅನುದಾನದಲ್ಲಿ ಶೇ. ೧ರಷ್ಟು ಹಣವನ್ನು ಮಕ್ಕಳ ಶಿಕ್ಷಣಕ್ಕೆ ಬಳಸಬೇಕು. ದೇಶದಲ್ಲಿ ೨.೫೦ ಲಕ್ಷ ಗ್ರಾಪಂ ಗಳಿದ್ದು, ಪ್ರತಿ ಗ್ರಾಪಂಗೆ ಒಂದರಂತೆ ಸಿಬಿಎಸ್‌ಸಿ ಶಾಲೆ ಸ್ಥಾಪಿಸಿದರೆ ಭಿಕ್ಷೆ ಬೇಡುವ ಪರಿಸ್ಥಿತಿ ಇರುವುದೇ ಇಲ್ಲ. ಮುಂದಿನ ೧೦ ವರ್ಷಗಳಲ್ಲಿ ಭಾರತ ಸಶಕ್ತ ದೇಶವಾಗಲು ಸಾಧ್ಯವಿದೆ. ಆದರೆ ಬೇರೆಯವರನ್ನು ಜ್ಞಾನವಂತರನ್ನಾಗಿ ಮಾಡಲು ರಾಜಕಾರಣಿಗಳು ಬಿಡುವುದಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಸಚಿವ ರಂಗರಾಜ ವನದುರ್ಗ ಅವರು ಮಾತನಾಡಿ, ಸಾಹಿತ್ಯ, ಧರ್ಮ, ದೇವರು, ಆಚರಣೆ, ನಂಬಿಕೆ, ಮೂಢನಂಬಿಕೆ ಪ್ರಶ್ನಿಸುವುದೇ ವೈಚಾರಿಕತೆಯಾಗಿದೆ. ಯಾವ ವಿಚಾರದಲ್ಲಿಯೂ ಪ್ರಶ್ನಿಸದೇ ಮೌನವಾಗಿರುವುದು ಮೂಢನಂಬಿಕೆಯಾಗಿದೆ. ಕನ್ಯೆ ನೋಡುವ ವೇಳೆ ಮೌನ ವಹಿಸಿದರೆ ಸಮ್ಮತಿ ಲಕ್ಷಣವಾಗಿತ್ತು. ಮೌನ ಅಸಮ್ಮತಿ ಲಕ್ಷಣ ಎಂದು ಹೇಳಿದ್ದು ವೈಚಾರಿಕತೆಯ ಮೌನಗಳನ್ನು ಮಾತುಗಳಾಗಬೇಕು. ಬೆಳಕು ವಿಚಾರ, ಬದುಕು ಬೀಜವಾದರೆ ನಮ್ಮ ಬಹದುಕು ಹಸನಾಗುತ್ತದೆ ಎಂದು ಅವರು ಹೇಳಿದರು.
ಅಶಯ ಭಾಷಣ ಮಾಡಿದ ಮೂಡಲಗಿಯ ಮಹಾದೇವ ಜಿಡ್ಡಿಮನಿ ಅವರು ವೈಚಾರಿಕ ಮೂಲ ಬೇರುಗಳು ಮನುಷ್ಯನ ಹೃದಯಲ್ಲಿವೆ. ಶಂಕೆ, ಕುತೂಹಲ, ಸಂಶಯ ಇಲ್ಲದಿದ್ದರೆ ವೇದಗಳು, ಉಪನಿಷತ್, ವಚನಗಳು ಹುಟ್ಟುತ್ತಿರಲಿಲ್ಲ. ಬಸವ ತತ್ವ ಕೂಡ ನಮಗೆ ಕಾಣಲು ಸಿಗುತ್ತಿರಲಿಲ್ಲ. ಸಂಶಯಾತ್ಮಕ ಉಳ್ಳವರಾಗಬೇಕು. ಚಿಕಿತ್ಸಕ ಬುದ್ಧಿ ಇದ್ದರೆ ಅತೃಪ್ತಿಯಿಂದ ತೃಪ್ತಿಯ ಕಡೆಗೆ ಹೋಗಬಹುದಾಗಿದೆ.
ಕೃಷ್ಣ, ಬುದ್ಧ ಹಾಗೂ ಬಸವಣ್ಣವರಲ್ಲಿ ಚಿಕಿತ್ಸಕ ಬುದ್ಧಿಯನ್ನು ನಾವು ಕಾಣಬಹುದಾಗಿದೆ. ಬೇಕು ಬೇಡುಗಳ ವ್ಯವಸ್ಥಿತವಾಗಿ ಮೌಲ್ಯಗಳು ಆಗಾಗ ಅಮೌಲ್ಯಗಳಾಗಿ ಬದಲಾವಣೆ ಆಗುತ್ತಿವೆ. ಅರಿವು ಪಡೆಯಬೇಕಾದರೆ ವೈಚಾರಿಕತೆ ಆದಸಾರ ಸ್ಥಂಭವಾಗಿ ನಿಲ್ಲುತ್ತವೆ ಎಂದು ಹೇಳಿದರು.
ಮುಂಡರಗಿ ಜಗದ್ಗುರು ತೋಂಟದಾರ್ಯ ಮಠದ ನಿಜಗುಣ ಪ್ರಭು ತೋಂಟದಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಇಂದು ದೇಶದಲ್ಲಿ ಪ್ರಶ್ನೆ ಕೇಳುವುದೇ ಒಂದು ಅಪರಾಧವಾಗಿದೆ. ಪ್ರಶ್ನೆ ಕೇಳಿದರೆ ಗುಂಡಿಕ್ಕಿ ಕೊಲೆ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.
೧೨ನೇ ಶತಮಾನದಲ್ಲಿ ಬಸವಾದಿ ಶರಣರು ಪ್ರಶ್ನೆ ಕೇಳುವುದು ಆರಂಭಿಸಿದರು. ಆದರೆ, ೨೧ ನೇ ಶತಮಾನದಲ್ಲಿ ನಮ್ಮ ಬಾಯಲ್ಲಿ ಮಾತನಾಡುವ ನಾಲಿಗೆ ಶಕ್ತಿ ಕಳೆದುಕೊಂಡು ಸತ್ತುಹೋಗಿವೆ. ನಾವು ಏನಾದರೂ ಪ್ರಶ್ನೆ ಮಾಡಿದರೆ, ನಮ್ಮನ್ನು ಚಕ್ರವ್ಯೂಹದಲ್ಲಿ ಸಿಲುಕಿಸಿ ಮಾಧ್ಯಮಗಳ ಮೂಲಕ ಮನೆಯಲ್ಲಿ ಘೇರಾವ ಹಾಕಿ ಕುಳ್ಳಿರಿಸುವ ಪ್ರಸಂಗ ಎದುರಾಗಿದೆ ಎಂದರು.
ವಾಸ್ತವ ಒಪ್ಪುವುದೇ ವೈಚಾರಿಕತೆಯಾಗಿದೆ. ಕಾಲ್ಪನಿಕ ವಿಚಾರ ಶಿಷ್ಟಾಚಾರ ಸಾಹಿತ್ಯವಾಗಿದೆ. ವೈಚಾರಿಕತೆ ಸಾಹಿತ್ಯ ವಾಸ್ತವಿಕ ನೆಲೆಗಟ್ಟಿನ ಮೇಲೆ ನಿಂತಿದೆ. ಸಮಾಜದಲ್ಲಿ ಪ್ರಶ್ನೆ ಕೇಳುವುದೇ ದೊಡ್ಡ ಅಪರಾಧವಾಗಿದೆ. ವಿಚಾರಗಳ ಕುರಿತು ಚರ್ಚೆಯಾಗಬೇಕು. ಈ ಮೂಲಕ ಎಲ್ಲರನ್ನೂ ನಾವು ಮಾನವೀಯತೆಯತ್ತ ಕೊಂಡೊಯ್ಯಬೇಕಿದೆ. ವೈಚಾರಿಕತೆ ಕುರಿತು ಮಾತನಾಡಿದರೆ ಧರ್ಮ ವಿರೋಧಿ, ದೇವರ ವಿರೋಧಿ, ರಾಷ್ಟ್ರ ವಿರೋಧಿ, ಸಂಪ್ರದಾಯ ವಿರೋಧಿ ಎಂದು ಬಿಂಬಿಸಲಾಗುತ್ತಿದೆ ಎಂದು ನಿಜಗುಣ ಪ್ರಭು ತೋಂಟದಾರ್ಯ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.
ಸೃಷ್ಟಿ ನಮಗೆ ಬದುಕಲು ಕೊಟ್ಟಿರುವುದೇ ವೈಚಾರಿಕತೆಯಾಗಿದೆ. ಶಾಸ್ತ್ರ ಹೇಳಿದರೇನು ನಿನ್ನ ಎದೆ ದನಿಗಿಂತ ಯಾವುದು ಮೇಲಲ್ಲ. ಈ ದನಿಯ ಬೆಲೆಯೇ ವೈಚಾರಿಕತೆಯಾಗಿದೆ. ವೈಚಾರಿಕತೆಯಲ್ಲಿ ಅಘೋಚರ ಶಕ್ತಿ ಅಡಗಿದೆ. ವೈಚಾರಿಕತೆಯ ದನಿ ಅಡಿಗಿಸಲು ಯಾರಿಂದಲೂ ಸಾಧ್ಯವಿಲ್ಲ. ವಾಸ್ತವವಾದಿಗಳು ಎಲ್ಲರಂತೆ ಬದುಕುವುದಿಲ್ಲ. ಎಲ್ಲರಿಗಾಗಿ ಬದುಕುತ್ತಾರೆ ಎಂದು ಹೇಳಿದರು.
ಬದುಕು ಕಟ್ಟಿಕೊಳ್ಳಲು ಹಾಗೂ ಅನುಭವಿಸಲು ವಚನಗಳನ್ನು ಓದಬೇಕಾದ ಅಗತ್ಯವಿದೆ. ವೈಚಾರಿಕತೆ ಯಾವುದೇ ಧರ್ಮದ ವಿರೋಧಿಯಲ್ಲ. ಮಾನವೀಯ ಮೌಲ್ಯಗಳನ್ನು ಗಟ್ಟಿಗೊಳಿಸುವುದೇ ವೈಚಾರಿಕತೆಯಾಗಿದೆ ಎಂದರು.
ದೇಶವು ಇಂದು ವಿಷಮ ಶೀತ ಜ್ವರದಲ್ಲಿದೆ. ಎಲ್ಲ ಪಕ್ಷಗಳು ಒಂದೊಂದು ಅಫೀಮುಗಳಿಗೆ ಅಂಟಿಕೊಂಡಿವೆ. ಒಂದು ಪಕ್ಷಕ್ಕೆ ಧಾರ್ಮಿಕ ಅಫೀಮು, ಇನ್ನೊಂದು ಪಕ್ಷಕ್ಕೆ ಜಾತ್ಯಾತೀತ ಅಫೀಮು, ಮತ್ತೊಂದು ಪಕ್ಷಕ್ಕೆ ಆಡಳಿತದ ಅಫೀಮು ಹೀಗೆ ಒಂದಿಲ್ಲೊಂದು ಅಫೀಮು ಅಂಟಿಕೊಂಡಿವೆ ಎಂದು ಶ್ರೀಗಳು ವಿಷಾದ ವ್ಯಕ್ತಪಡಿಸಿದರು.
ರಾಜಕೀಯ ಪಕ್ಷಗಳು ಜಾತಿ, ಧರ್ಮ ಹೆಸರಿನಲ್ಲಿ ರಾಜಕಾರಣ ಮಾಡದೆ, ಈ ದೇಶದ ಹಿತದೃಷ್ಯಿಯಿಂದ ಸಂವಿಧಾನಾತ್ಮಕದಡಿ ರಾಜಕೀಯ ಮಾಡಿದರೆ ಈ ದೇಶ ಉಳಿಯುತ್ತದೆ ಎಂದರು.
ಮನುಷ್ಯನ ಪ್ರಗತಿ ಜ್ಞಾನದ ಕಡೆಗೆ ಸಾಗಬೇಕು. ನಮ್ಮಲ್ಲಿ ಪ್ರಶ್ನೆ ಹುಟ್ಟಲಿಲ್ಲ ಎಂದರೆ ನಾವು ಮನುಷ್ಯರೇ ಅಲ್ಲ. ವೈಚಾರಿಕತೆ ಒಳ್ಳೆಯ ಚಿಂತನೆಯೆಡೆಗೆ ನಮ್ಮನ್ನು ಕೊಂಡೊಯ್ಯುತ್ತದೆ. ವೈಚಾರಿಕತೆ ನಮ್ಮನ್ನು ಕಷ್ಟ ಕಾಲದಲ್ಲಿ ಕೈ ಹಿಡುತ್ತದೆ ಆದರೆ, ಕರ್ಮವಾದ ನಮ್ಮ ಅಸ್ತಿತ್ವವನ್ನೇ ಕಡೆಗಣಿಸುತ್ತದೆ ಹಾಗಾಗಿ ದೇವರು ಹಾಗೂ ಧರ್ಮದ ವಿಚಾರದಲ್ಲಿ ಯಾರೂ ಭಯಪಡಬಾರದು. ವೈಚಾರಿಕತೆ ಬಗ್ಗೆ ಮಾತನಾಡುವವರು ಧರ್ಮ, ರಾಷ್ಟ್ರ, ಸಾಹಿತ್ಯ ವ್ಕಕ್ತಿ ವಿರೋಧಿಗಳಲ್ಲ. ಮನುಷ್ಯ ಭಯಮುಕ್ತನಾಗಿ ಬದುಕಬೇಕಿದೆ. ನಮ್ಮ ಕಷ್ಟದ ಸಮಯದಲ್ಲಿ ದೇವರು ಬರುವುದಿಲ್ಲ ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ನಮ್ಮ ಕಷ್ಟಕ್ಕೆ ನಮ್ಮ ಬುದ್ದಿ ಹಾಗೂ ಶಕ್ತಿಯೇ ಪರಿಹಾರವಾಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷೆ ಮಂಗಲಾ ಮಟಗುಡ್ಡ, ಸಮ್ಮೇಳನದ ಸರ್ವಾಧ್ಯಕ್ಷೆ ಡಾ.ಗುರುದೇವಿ ಹುಲೆಪ್ಪನವರಮಠ, ಕಸಾಪ ತಾಲೂಕು ಘಟಕದ ಅಧ್ಯಕ್ಷ ಮಹಾಂತೇಶ ತಾಂವಶಿ, ಬಸವರಾಜ ಸಸಾಲಟ್ಟಿ, ಬಿಜೆಪಿ ಮುಖಂಡ ಅಶೋಕ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
ಮಾತು ಮಂತ್ರವಾದಾಗ ಮಾತ್ರ ಕಾವ್ಯವಾಗುತ್ತದೆ -ಸಾಹಿತಿ ಮಹಾಲಿಂಗ ಮಂಗಿ
ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಡೆದ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಾಹಿತಿ ಮಹಾಲಿಂಗ ಮಂಗಿ, ಲೇಖಕರಾಗೋದು, ಕಾದಂಬರಿಗಾರರು ಸುಲಭ. ಆದರೆ ಕವಿಯಾಗೋದು ಸತತ ಅಧ್ಯಯನ ಮಾಡುವುದು ಅವಶ್ಯವಾಗಿದೆ. ದಿನ ನಿತ್ಯ ಮಾತನಾಡುವ ಮಾತುಗಳು ಕಾವ್ಯ ಕವನವಾಗುವುದಿಲ್ಲ. ಒಂದು ಹೃದಯದಿಂದ ಮತ್ತೊಂದು ಹೃದಯಕ್ಕೆ ಮುಟ್ಟುವುದು ಕವಿತೆ ಎನ್ನುತ್ತಾರೆ ಎಂದರು.
ಜೀವನದ ರಸಾನುಭವೇ ಸಾಹಿತ್ಯ. ಅದನ್ನು ಶಬ್ದಗಳಲ್ಲಿ ರಸಾನುಭಹತ್ವವಾಗಿ ನಿರೂಪಿಸಿದಾಗ ಸಾಹಿತ್ಯ ಮಹತ್ವವನ್ನು ಪಡೆದುಕೊಳ್ಳುತ್ತದೆ. ಕವಿತೆ ಜಟಿಲವಾಗಿದ್ದು, ಭಿನ್ನ ವಿಭಿನ್ನವಾಗಿ ಆಲೋಚಿಸಿ ಕವನ ರಚಿಸಬೇಕು ಎಂದು ಕವಿಗಳಿಗೆ ಸಲಹೆ ನೀಡಿದರು.
ಗೋಕಾಕ ಸಾಂಸ್ಕೃತಿಕ ಕೇಂದ್ರವಾಗಿದೆ. ಇಲ್ಲಿಯ ಸಾಹಿತಿಗಳ ಕೊಡುಗೆ ಕನ್ನಡ ನಾಡು, ನುಡಿಗೆ ಅಪಾರವಾಗಿದೆ ಎಂದು ಮಹಾಲೀಂಗ ಮಂಗಿ ಹೇಳಿದರು.
ರವಿ ಉಳ್ಳಾಗಡ್ಡಿ, ವಿಶ್ಯಾಲಕ್ಷಿ ತೀರ್ಥ, ವಿಜಯಲಕ್ಷ್ಮಿ ಮಿರ್ಜಿ, ಶ್ರೀಕಾಂತ ರಾಯಮನೆ, ಪ್ರಶಾಂತ ಪಾಟೀಲ, ನಿರ್ಮಲಾ ಬಟ್ಟಲ, ಉಮಾ ಅಂಗಡಿ, ಪಾರ್ವತಿ ಪಾಟೀಲ, ಎಮ್.ಆರ್.ಕೊಣ್ಣೂರ, ರಂಗರಾವ್ ಕುಂಬಾರ, ಮಹಾದೇವ ಗುಡ್ಡೆದ ಸೇರಿದಂತೆ ೫೦ ಕ್ಕೂ ಅಧಿಕ ಕವಿಗಳು ಕವನ ವಾಚಿಸಿದರು.
ಧಾರವಾಡದ ಆಕಾಶವಾಣಿ ಕಾರ್ಯಕ್ರಮ ಅಧಿಕಾರಿ ಡಾ. ಬಸು ಬೇವಿನಗಿಡದ ಆಶಯ ನುಡಿಗಳನ್ನಾಡಿದರು.
ಕಸಾಪ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ, ಪ್ರಕಾಶ ದೇಶಪಾಂಡೆ, ಬಸವರಾಜ ಸಸಾಲಟ್ಟಿ, ಶ್ರೀಪಾದ ಕುಂಬಾರ, ಪಾಂಡುರಂಗ ಜಟಗನ್ನವರ, ಎಮ್.ವಾಯ್. ಮೆಣಸಿನಕಾಯಿ ಸೇರಿದಂತೆ ಮುಂತಾದವರು ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಬೈಲಹೊಂಗಲ ತಾಲೂಕಾ ಕಸಾಪ ಅಧ್ಯಕ್ಷೆ ಗೌರಾದೇವಿ ತಾಳಿಕೋಟಿಮಠ ಸ್ವಾಗತಿಸಿದರು, ವಿದ್ಯಾವತಿ ಜನವಾಡ ಹಾಗೂ ಪ್ರೊ. ಚೇತನ ಜೋಗನ್ನವರ ಕಾರ್ಯಕ್ರಮ ನಿರೂಪಿಸಿದರು. ಪ್ರೊ. ಬಿ.ಎ.ದೇಸಾಯಿ ವಂದಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ