Kannada NewsKarnataka NewsLatest

ಗೋಕಾಕ ಟೈಗರ್ ಗ್ಯಾಂಗ್ ಪೊಲೀಸರ ಬಲೆಗೆ

ಪ್ರಗತಿವಾಹಿನಿ ಸುದ್ದಿ, ಗೋಕಾಕ:   ನಾಲ್ಕು ತಿಂಗಳ ಹಿಂದೆ ನಗರದಲ್ಲಿ ನಡೆದಿದ್ದ ದಲಿತ ಯುವ ಮುಖಂಡ ಸಿದ್ದಪ್ಪ ಕನಮಡ್ಡಿ ಕೊಲೆ ಪ್ರಕರಣದ ಬಂಧಿತ ಆರೋಪಿಗಳ ಮನೆಗಳ ಮೇಲೆ  ದಾಳಿ ನಡೆಸಿ, ಪಿಸ್ತೂಲ್, ಮಾರಕಾಸ್ತ್ರ, ಲಕ್ಷಾಂತ ರೂ ಸೇರಿದಂತೆ ಬಡ್ಡಿ ವ್ಯವಹಾರಕ್ಕೆ ಸಂಬಂಧಿಸಿದ ಕಾಗದ ಪತ್ರಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದರು.

ಆರೋಪಿಗಳಿಂದ ವಶಪಡಿಸಿಕೊಂಡ ಮಾರಕಾಸ್ತ್ರಗಳು, ಪಿಸ್ತೂಲ್, ಹಣ ಹಾಗೂ ಬಡ್ಡಿ ವ್ಯವಹಾರಕ್ಕೆ ಸಂಬಂಧಿಸಿದ ದಾಖಲಾತಿಗಳು.

ಅವರು ನಗರದ ಡಿವೈಎಸ್‌ಪಿ ಕಾರ್ಯಾಲಯದ ಆವರಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಈ ಬಗ್ಗೆ ತನಿಖೆ ನಡೆಸಲು ಬೆಳಗಾವಿ ಉತ್ತರ ವಲಯ ಐಜಿಪಿ ಎಚ್.ಜಿ ರಾಘವೇಂದ್ರ ಸುಹಾಸ ಅವರ ಮಾರ್ಗದರ್ಶನದಲ್ಲಿ ಈ ತನಿಖೆ ಕೈಗೊಂಡಿದ್ದು, ಬಂಧಿತ ಆರೋಪಿಗಳು ೨೦೦೬ ರಿಂದ ಟೈಗರ್ ಗ್ಯಾಂಗ್ ಎಂಬ ಹೆಸರಿನಡಿ ಗ್ಯಾಂಗ್ ಕಟ್ಟಿಕೊಂಡು ಹಣಗಳಿಸಲು ಈ ಗ್ಯಾಂಗ್ ನಿರ್ಮಿಸಿಕೊಂಡಿದ್ದು, ಸಂಘಟಿತರಾಗಿ ಲಾಭಕ್ಕಾಗಿ ಕೊಲೆ, ಕೊಲೆಗೆ ಯತ್ನ, ಡಕಾಯಿತಿ, ಹಿಂಸಾತ್ಮಕ ಕೃತ್ಯಗಳನ್ನು ಎಸಗಿದ್ದಾರೆ.

ಆರೋಪಿತರು ಟೈಗರ್ ಗ್ಯಾಂಗ್ ಎಂಬ ಸಂಘಟನೆ ಕಟ್ಟಿಕೊಂಡು ವ್ಯವಸ್ಥಿತವಾಗಿ ಸಂಚು ರೂಪಿಸಿ ಅಪರಾದ ಎಸಗುವುದಲ್ಲದೆ, ಹದಿ ಹರೆಯದ ಯುವಕರ ಮೇಲೆ ಪ್ರಭಾವ ಬೀರಿ ತಮ್ಮ ಸಂಘಟನೆಯ ಸದಸ್ಯರನ್ನಾಗಿ ಮಾಡಿಕೊಂಡು ಅವರನ್ನು ಅಪರಾಧಿಕ ಚಟುವಟಿಕೆಗಳಲ್ಲಿ ತೊಡಗಿಸುತ್ತಿರುವುದು ಕಂಡು ಬಂದಿದೆ ಎಂದರು.
ಈ ಟೈಗರ್ ಗ್ಯಾಂಗ್ ಸದಸ್ಯರು ಸಾರ್ವಜನಿಕರಲ್ಲಿ ಭಾರಿ ಭಯವನ್ನುಂಟು ಮಾಡಿ ಪ್ರಕರಣಗಳಲ್ಲಿಯ ಸಾಕ್ಷಿದಾರರನ್ನು ಹೆದರಿಸಿ, ಹಣದ ಆಮಿಷವೊಡ್ಡಿ ಹಾಗೂ ಪುರಾವೆಗಳನ್ನು ನಾಶಪಡಿಸುವದರಲ್ಲಿ ನಿಸ್ಸೀಮರಾಗಿದ್ದಾರೆ ಹೀಗಾಗಿ ಎಲ್ಲ ಆರೋಪಿತರ ಮೇಲೆ ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ೨೦೦೦ (ಕೋಕಾ) ಕಾಯ್ದೆಯಡಿಯಲ್ಲಿ ತನಿಖೆ ಕೈಗೊಂಡಿರುವದಾಗಿ ತಿಳಿಸಿದರು.
ನಿನ್ನೆ ರಾತ್ರಿ ಆರೋಪಿಗಳ ಮನೆಗಳ ಮೇಲೆ ಸರ್ಚ್ ವಾರಂಟ್ ಜೊತೆಗೆ ನಡೆಸಿದ ದಾಳಿಯಲ್ಲಿ ೩೦,೪೮,೪೬೦ ಲಕ್ಷರೂಪಾಯಿ ನಗದು, ಪಿಸ್ತೂಲ್, ೨೦ ಜೀವಂತ ಗುಂಡುಗಳು, ನಾಲ್ಕು ತಲವಾರಳು, ೩ ಜಂಬೆ, ೨೨ ಮೊಬೈಲ್, ೪ ಸೀಮ್ ಕಾರ್ಡ, ೧೧ ಬ್ಯಾಂಕ್ ಪಾಸ್ ಬುಕ್, ೧೨ ಅಸಲು+ ೧೨ ನಕಲು ಆಸ್ತಿ ದಾಖಲಾತಿಗಳು, ಪಾನ್ ಕಾರ್ಡ, ಆಧಾರ್ ಕಾರ್ಡ, ವೋಟರ್ ಐಡಿ ತಲಾ ಒಂದು, ೪ ಖಾಲಿ ಚೆಕ್ ಗಳು, ೧ ಬಾಂಡ್ ಪೇಪರ್, ೨ ಎಟಿಮ್, ಗೋಕಾಕ ಶಹರ ಪೋಲಿಸ್ ಠಾಣೆಯ ಅಪರಾಧ ಸಂಖ್ಯೆ ೭೨/೨೦೨೦ನೇದ್ದಕ್ಕೆ ಸಂಭಂಧಿಸಿದ ದಾಖಲಾತಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿತರ ಬಗ್ಗೆ ಇನ್ನೂ ತನಿಖೆ ನಡೆಸುತ್ತಿರುವುದಾಗಿ ಎಂದು ಎಸ್‌ಪಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಎಎಸ್ಪಿ ಅಮರನಾಥ ರೆಡ್ಡಿ, ರಾಮದುರ್ಗ ಡಿಎಸ್‌ಪಿ ಶಂಕರಗೌಡ ಪಾಟೀಲ, ಗೋಕಾಕ ಡಿಎಸ್‌ಪಿ ಮನೋಜಕುಮಾರ, ಸಿಪಿಐ ಗೋಪಾಲ ರಾಠೋಡ ಸೇರಿದಂತೆ ಪೋಲಿಸ್ ಅಧಿಕಾರಿಗಳು ಇದ್ದರು.
ಬಂಧಿತ ಆರೋಪಿಗಳಾದ ಗಂಗಾರಾಮ ಸಂತ್ರಾಮ ಶಿಂಧೆ (೨೬), ವಿನಾಯಕ ಬಸವರಾಜ ಹಡಗಿನಾಳ (೨೨), ವಿಠ್ಠಲ ಪರಶುರಾಮ ಪವಾರ (೨೩), ವಿನೋದ ಚಂದ್ರು ಹೊಸಮನಿ (೨೨), ಕಿರಣ ವಿಜಯ ದೊಡ್ಡನ್ನವರ (೨೨), ಕೇದಾರಿ ಬಸವಣ್ಣಿ ಜಾಧವ (೩೬), ಸುನೀಲ ಮಲ್ಲಿಕಾರ್ಜುನ ಮುರಕಿಭಾವಿ (೪೩), ಸಂತೋಷ ಪಾಂಡುರಂಗ ಚಿಗದೊಳ್ಳಿ (೨೧)   ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button