Latest

ಗೋಕಾಕ ಫಾಲ್ಸ್ ನಲ್ಲಿ ಯುವಕರ ಹುಚ್ಚಾಟಕ್ಕೆ ಖಾಕಿ ಕಡಿವಾಣ; ನೀರಿಗಿಳಿಯದಂತೆ ತಾತ್ಕಾಲಿಕವಾಗಿ ಬ್ಯಾರಿಕೇಡ್ ಅಳವಡಿಕೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಅವ್ಯಾಹತ ಮಳೆಗೆ  ಪ್ರಸಿದ್ಧ ಗೋಕಾಕ ಫಾಲ್ಸ್ ಮೈದುಂಬಿಕೊಂಡು ಧುಮ್ಮಿಕ್ಕುತ್ತಿದ್ದು ಪ್ರವಾಸಿಗರನ್ನು ತನ್ನತ್ತ ಸೆಳೆಯತೊಡಗಿದೆ.  ಇಲ್ಲಿಗೆ ಆಗಮಿಸುವ ಪ್ರವಾಸಿಗರಲ್ಲಿ ಕೆಲ ಯುವಕರ ಅಪಾಯಕಾರಿ ಹುಚ್ಚಾಟಗಳು ಮಾತ್ರ ಮಿತಿ ಮೀರಿದ್ದು ಇದೀಗ ಪೊಲೀಸರು ಇದಕ್ಕೆ ಭಾನುವಾರದಿಂದಲೇ ಕಡಿವಾಣ ಹಾಕಿದ್ದಾರೆ.

ಫಾಲ್ಸ್ ಧುಮುಕುವ ಜಾಗದ ಪಕ್ಕದಲ್ಲಿ ಎತ್ತರದ ಬಂಡೆಗಳ ಮೇಲೆ ನಿಂತು ಸೆಲ್ಫಿ ತೆಗೆದುಕೊಳ್ಳುವ, ಫಾಲ್ಸ್ ನ ದೃಶ್ಯ ಚಿತ್ರೀಕರಿಸುವ ಸಾಹಸಕ್ಕೆ ಇಳಿಯುವ ಕೆಲ ಯುವಕರು ಜೀವದ ಹಂಗೇ ಇಲ್ಲದಂತೆ ವರ್ತಿಸುತ್ತಾರೆ. ಈ ಭಾಗದಿಂದ ಕೆಳಗೆ ಬಿದ್ದರೆ ನೇರವಾಗಿ ಜಲಪಾತದಲ್ಲೇ ಬಿದ್ದು ಪ್ರಾಣಹಾನಿಯಾಗುವುದು ನಿಶ್ಚಿತ. ಈ ಹಿಂದೆ ಹಲವು ಘಟನೆಗಳು ನಡೆದಿದ್ದರೂ ಸೆಲ್ಫಿ ಗೀಳಿನ ಯುವಕರು ಮಾತ್ರ ತಮ್ಮ ಚಾಳಿ ಬದಲಿಸುವುದಿಲ್ಲ.

ಇದೀಗ ಫಾಲ್ಸ್ ವೀಕ್ಷಣೆಗೆ ಬರುವವರ ಸಂಖ್ಯೆ ಹೆಚ್ಚಿರುವ ಹಿನ್ನೆಲೆಯಲ್ಲಿ ಪೊಲೀಸರು ಭಾನುವಾರದಿಂದಲೇ ಇಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದಾರೆ. ಜಲಪಾತದ ಮೇಲ್ಭಾಗದ ಜಾಗಗಳಿಗೆ ಪ್ರವಾಸಿಗರು ತೆರಳದಂತೆ ಬ್ಯಾರಿಕೇಡ್ ಗಳನ್ನು  ಅಳವಡಿಸಿದ್ದು ಆಗಮಿಸಿದ ಪ್ರವಾಸಿಗರಿಗೆ ಸುರಕ್ಷತೆಯ ಬಗ್ಗೆ ತಿಳಿಹೇಳಲಾಗುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿಯವರ ಗಮನಕ್ಕೂ ತರಲಾಗಿದ್ದು ಮುಂಬರುವ ದಿನಗಳಲ್ಲಿ ಇಲ್ಲಿ ಮೆಟಲ್ ರೇಲಿಂಗ್ಸ್ ಅಳವಡಿಸುವಂತೆ ಸಂಬಂಧಿಸಿದ ಇಲಾಖೆ ಗಮನಕ್ಕೆ ತರಲಾಗುತ್ತಿದೆ ಎಂದು ಗೋಕಾಕ ಫಾಲ್ಸ್ ಗೆ ಭೇಟಿ ನೀಡಿ ಪರಿಶೀಲಿಸಿದ ಬೆಳಗಾವಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಸಂಜೀವ ಪಾಟೀಲ ಹೇಳಿದ್ದಾರೆ.

ಗೊಡಚಿಮಲ್ಕಿ ಫಾಲ್ಸ್ ಬಳಿಯೂ ಇದೇ ರೀತಿಯ ಅಸುರಕ್ಷಿತತೆ ಬಗ್ಗೆ ಗಮನ ಸೆಳೆದಿದ್ದಕ್ಕೆ  ಪ್ರತಿಕ್ರಿಯಿಸಿರುವ ಅವರು,  ಸಂಬಂಧಿಸಿದ ಅಧಿಕಾರಿಗಳಿಂದ ಅಲ್ಲಿನ ಸ್ಥಿತಿಗತಿಗಳ ವರದಿ ತರಿಸಿಕೊಂಡು ಅಲ್ಲೂ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.

Home add -Advt

ಜಿಲ್ಲೆಯಲ್ಲಿ ಇಂಥ ಅನೇಕ ಪ್ರವಾಸಿ ತಾಣಗಳಿದ್ದು ಇಲ್ಲಿ ಪ್ರವಾಸಿಗರು ಹಾಗೂ ಸ್ಥಳೀಯರು ಯಾವುದೇ ಪ್ರಾಣಹಾನಿ ಅಥವಾ ಬೇರೆ ರೀತಿಯ ಹಾನಿಯಾಗದಂತೆ ಪೊಲೀಸ್ ಇಲಾಖೆ ಜೊತೆ ಸಹಕರಿಸಬೇಕು. ಪ್ರವಾಸಿ ತಾಣಗಳಿಗೆ ಬಂದಾಗ ತಮ್ಮ ಹಾಗೂ ತಮ್ಮ ಮಕ್ಕಳ ಸುರಕ್ಷಿತತೆ ಬಗ್ಗೆ ಪ್ರವಾಸಿಗರು ಗಮನ ಹರಿಸಬೇಕು ಎಂದು ಅವರು ಹೇಳಿದರು.

ಪಂಢರಾಪುರ ದರ್ಶನಕ್ಕೆ ತೆರಳುತ್ತಿದ್ದ ಬೆಳಗಾವಿಯ ವಾರಕರಿಗಳ ಕಾರು ಪಲ್ಟಿ; ಇಬ್ಬರ ಸಾವು, ಮೂವರಿಗೆ ಗಂಭೀರ ಗಾಯ

 

Related Articles

Back to top button