
ಪ್ರಗತಿವಾಹಿನಿ ಸುದ್ದಿ; ಗೋಕಾಕ: ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಉನ್ನತಿ ಮತ್ತು ಪ್ರಗತಿಗಾಗಿ ಸುಧಾರಣೆ ತರಲು ಅಮೂಲಾಗ್ರ ಬದಲಾವಣೆ ಮಾಡಿದ್ದು, ಇದಕ್ಕೆ ಎಲ್ಲರೂ ಸಹಕಾರ ನೀಡಿ ಕಾರ್ಖಾನೆಯ ಅಭಿವೃದ್ಧಿಗಾಗಿ ಕೈ ಜೋಡಿಸುವಂತೆ ಕಾರ್ಖಾನೆಯ ಮಾರ್ಗದರ್ಶಕರೂ ಆಗಿರುವ ಅರಭಾವಿ ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಸಲಹೆ ನೀಡಿದರು.
ಕಾರ್ಖಾನೆಯ ಸಭಾಗೃಹದಲ್ಲಿ ಜರುಗಿದ ಕಾರ್ಖಾನೆಯ ಆಡಳಿತ ಮಂಡಳಿಯ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು, ಕಾರ್ಖಾನೆಯ ಹಿತದೃಷ್ಟಿಯಿಂದ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
ಸಹಕಾರಿ ತತ್ವದಡಿ ಸ್ಥಾಪಿತಗೊಂಡಿರುವ ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯು ಈ ಭಾಗದ ರೈತರ ಜೀವನಾಡಿಯಾಗಿದೆ. ಕಾರ್ಖಾನೆಯ ಪ್ರಗತಿಯಲ್ಲಿ ರೈತರ ಕೊಡುಗೆ ಅಪಾರವಾಗಿದೆ. ಜೊತೆಗೆ ಕಾರ್ಮಿಕರ ಸಹಕಾರವೂ ಕೂಡ ಅಗತ್ಯವಾಗಿದೆ. ಕಾರ್ಖಾನೆಯಲ್ಲಿ ಕಬ್ಬು ವಿಭಾಗವು ಅಷ್ಟೇನೂ ಜವಾಬ್ದಾರಿಯನ್ನು ಅರಿಯದೇ ಇರುವುದರಿಂದ ಕಾರ್ಖಾನೆಗೆ ಸ್ವಲ್ಪ ಮಟ್ಟಿಗೆ ತೊಂದರೆಯಾಗಿದೆ ಎಂದು ತಿಳಿಸಿದರು.
ಇಳುವರಿ ಕಬ್ಬನ್ನು ಕಾರ್ಖಾನೆಗೆ ರೈತರು ಪೂರೈಕೆ ಮಾಡಬೇಕು. ಅದಕ್ಕಾಗಿಯೇ ಆಡಳಿತದಲ್ಲಿ ಬದಲಾವಣೆಗೆ ಮುಂದಾಗಿದ್ದು, ಅಧಿಕ ಇಳುವರಿ ಕಬ್ಬನ್ನು ಕಾರ್ಖಾನೆಗೆ ಪೂರೈಸಲು ಆಡಳಿತ ಮಂಡಳಿಯವರು ಹೊಸದಾಗಿ ನೇಮಕಗೊಂಡಿರುವ ಸಿಬ್ಬಂದಿಗಳಿಗೆ ಸಂಪೂರ್ಣ ಸಹಕಾರ ನೀಡಬೇಕು. ಹಿಂದಿನ ಕಹಿ ಘಟನೆಗಳು ಮರುಕಳಿಸಬಾರದು. ಕಾರ್ಖಾನೆಯ ಅಭಿವೃದ್ಧಿಯೊಂದೇ ನಮ್ಮ ಮುಂದಿರುವ ಗುರಿಯಾಗಿದೆ ಎಂದು ಹೇಳಿದರು.
ಈ ಹಿಂದಿನ ಕಬ್ಬು ವಿಭಾಗದ ಅಧಿಕಾರಿಗಳು ಕರ್ತವ್ಯಲೋಪ ಎಸಗಿದ್ದರಿಂದ ನಮಗೆ ಹಾನಿಯಾಗಿದೆ. ಇಳುವರಿ ಕಬ್ಬಿನ ಬದಲಾಗಿ ಕಡಿಮೆ ಇಳುವರಿ ಕಬ್ಬನ್ನು ರೈತರಿಂದ ಪಡೆಯುತ್ತಿದ್ದರಿಂದ ಇದಕ್ಕಾಗಿಯೇ ಸಮರ್ಥವಾಗಿ ನಿಭಾಯಿಸಲು ಹೊಸ ಸಿಇಓ ಹಾಗೂ ಸಿಡಿಓ ಸಹಿತ ನಾಲ್ವರನ್ನು ನಿಯೋಜಿಸಲಾಗಿದೆ. ಯಾವುದೇ ಸಮಸ್ಯೆಗಳು ಇದ್ದರೆ ತುರ್ತಾಗಿ ಪರಿಹರಿಸಲು ಸಮೀತಿಯೊಂದನ್ನು ರಚಿಸಲಾಗಿದೆ. ಪರಸ್ಪರ ಸಹಕಾರದಿಂದ ಕರ್ತವ್ಯ ನಿರ್ವಹಿಸಿದರೆ ಕಾರ್ಖಾನೆಗೆ ಒಳಿತಾಗಲಿದೆ. ಕಾರ್ಖಾನೆ ಮುಂಬರುವ ದಿನಗಳಲ್ಲಿ ಹೆಚ್ಚಿನ ಲಾಭದ ಜೊತೆಗೆ ಜಿಲ್ಲೆಯಲ್ಲಿಯೇ ಮಾದರಿ ಕಾರ್ಖಾನೆ ಮಾಡಲು ನಾವೆಲ್ಲರೂ ಶ್ರಮಿಸೋಣ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.
ಕಾರ್ಖಾನೆಗೆ ಬೆನ್ನೆಲುಬಾಗಿ ನಿಂತಿರುವ ರೈತರು ಹಾಗೂ ಕಾರ್ಮಿಕ ವರ್ಗದವರು ಸುಖವಾಗಿರಬೇಕೆಂಬ ಏಕೈಕ ಉದ್ಧೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಇದರಲ್ಲಿ ಯಾವುದೇ ರೀತಿಯ ಸ್ವಾರ್ಥವಿಲ್ಲ. ಕಾರ್ಖಾನೆ ಶ್ರೇಯೋಭಿವೃದ್ಧಿಯೇ ನಮ್ಮ ಗುರಿಯಾಗಿದ್ದು, ಪ್ರತಿ ಹಂತದಲ್ಲೂ ನಮಗೆ ಆಸರೆಯಾಗಿ ನಿಂತುಕೊಂಡು ಕಾರ್ಖಾನೆಯ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸುತ್ತಿರುವ ರೈತರು ಇನ್ನು ಮುಂದೆಯೂ ನಮಗೆ ಎಲ್ಲ ರೀತಿಯ ಸಹಾಯ ಸಹಕಾರ ನೀಡಬೇಕು. ರೈತರ ಆಶೀರ್ವಾದವೇ ನಮ್ಮ ಕಾರ್ಖಾನೆಗೆ ದೊಡ್ಡ ಶಕ್ತಿಯಾಗಿದೆ ಎಂದರು.
ಕಾರ್ಖಾನೆಯ ಅಧ್ಯಕ್ಷ ಅಶೋಕ ಪಾಟೀಲ, ಉಪಾಧ್ಯಕ್ಷ ರಾಮಣ್ಣಾ ಮಹಾರಡ್ಡಿ, ನಿರ್ದೇಶಕರಾದ ಕೆಂಚನಗೌಡ ಪಾಟೀಲ, ಕೃಷ್ಣಪ್ಪ ಬಂಡ್ರೊಳ್ಳಿ, ಲಕ್ಷ್ಮಣ ಗಣಪ್ಪಗೋಳ, ಶಿದ್ಲಿಂಗ ಕಂಬಳಿ, ಶಿವಲಿಂಗ ಪೂಜೇರಿ, ಗಿರೀಶ ಹಳ್ಳೂರ, ಮಹಾದೇವಪ್ಪ ಭೋವಿ, ಭೂತಪ್ಪ ಗೊಡೇರ, ಮಲ್ಲಿಕಾರ್ಜುನ ಕಬ್ಬೂರ, ಮುಂತಾದವರು ಈ ಸಭೆಯಲ್ಲಿ ಉಪಸ್ಥಿತರಿದ್ದರು.
ನೇರ ನೇಮಕಾತಿಯಲ್ಲಿ ನೈಜ ಕಾರ್ಮಿಕರಿಗೆ ವಂಚನೆ: ಹರಿಶ್ ನಾಯಕ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ