
ಪ್ರಗತಿವಾಹಿನಿ ಸುದ್ದಿ; ಹುಬ್ಬಳ್ಳಿ: ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ, ಗ್ರಾಹಕ ವ್ಯವಹಾರಗಳು ಮತ್ತು ಆಹಾರ ಮತ್ತು ಸಾರ್ವಜನಿಕ ವಿತರಣೆ ಮತ್ತು ಜವಳಿ ಸಚಿವ ಪಿಯೂಷ್ ಗೋಯಲ್ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ನಿಲ್ದಾಣದಲ್ಲಿ ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್‌ಫಾರ್ಮ್‌ಗೆ ಭೇಟಿ ನೀಡಿದರು.
ಸೌತ್ ವೆಸ್ಟರ್ನ್ ರೈಲ್ವೇ ಪ್ರಧಾನ ವ್ಯವಸ್ಥಾಪಕರಾದ ಸಂಜೀವ್ ಕಿಶೋರ್ ಅವರು ಸಚಿವರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಕಿಶೋರ್ ಅವರು ಹುಬ್ಬಳ್ಳಿ ಜಂಕ್ಷನ್ ನಲ್ಲಿ ಇತ್ತೀಚಿನ ದಿನಗಳಲ್ಲಿ ಕೈಗೊಂಡ ಪ್ರಮುಖ ಸುಧಾರಣೆಗಳು ಮತ್ತು ಭವಿಷ್ಯದ ಅಭಿವೃದ್ಧಿಯ ಯೋಜನೆಯ ಬಗ್ಗೆ ಸಚಿವರಿಗೆ ವಿವರಿಸಿದರು.
ಇತ್ತೀಚೆಗೆ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್, ಹುಬ್ಬಳ್ಳಿಯ 1507 ಮೀ ಉದ್ದದ ಪ್ಲಾಟ್‌ಫಾರ್ಮ್ ಅನ್ನು ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್‌ಫಾರ್ಮ್ ಎಂದು ಗುರುತಿಸಿದೆ ಎಂದು ಅವರು ಹೇಳಿದರು.
ಮರುರೂಪಿಸಲಾದ ಯಾರ್ಡ್ ಮತ್ತು ಉದ್ದದ ಪ್ಲಾಟ್ಫಾರ್ಮ್ ಹುಬ್ಬಳ್ಳಿ ನಗರದ ಹೆಚ್ಚುತ್ತಿರುವ ಸಾರಿಗೆ ಅಗತ್ಯಗಳನ್ನು ಪೂರೈಸುತ್ತದೆ ಎಂದು ಕಿಶೋರ್ ವಿವರಿಸಿದರು.
ಗೋಯಲ್ ಅವರು ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್‌ಫಾರ್ಮ್ ಅನ್ನು ನಿರ್ಮಿಸುವಲ್ಲಿ ನೈಋತ್ಯ ರೈಲ್ವೆಯ ಸಾಧನೆಯನ್ನು ಶ್ಲಾಘಿಸಿದರು. ಸ್ಥಳೀಯ ಕಲೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಬಿಂಬಿಸುವ ಉಬ್ಬುಶಿಲ್ಪಗಳನ್ನು ವೀಕ್ಷಿಸಿ, ನಿಲ್ದಾಣದ ನಿರ್ವಹಣೆ ಮತ್ತು ಸೌಂದರ್ಯೀಕರಣದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಸಚಿವರೊಂದಿಗೆ ಮೇಯರ್ ಈರೇಶ್ ಅಂಚಟಗೇರಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಹುಬ್ಬಳ್ಳಿ ವಿಭಾಗದ ಹೆಚ್ಚುವರಿ ವ್ಯವಸ್ಥಾಪಕ ಎಸ್. ಕೆ. ವರ್ಮಾ, ಸೀನಿಯರ್ ಡಿ.ಪಿ.ಒ. ಆಸಿಫ್ ಹಫೀಜ್, ಸೀನಿಯರ್ ಡಿ.ಸಿ.ಎಂ ಹರಿತಾ, ಸಿ.ಪಿ.ಆರ್.ಒ. ಅನೀಶ್ ಹೆಗಡೆ, ಪಿ.ಆರ್.ಒ. ಪ್ರಾಣೇಶ್ ಉಪಸ್ಥಿತರಿದ್ದರು.