Kannada NewsKarnataka NewsNationalPolitics

*ಸಾರಿಗೆ ನೌಕರರ ಮುಷ್ಕರ ಹಿಂದಕ್ಕೆ* *ಬಿಜೆಪಿ ಸರ್ಕಾರ 5,900 ಕೋಟಿ ರೂ ಸಾಲ ಬಿಟ್ಟು ಹೋಗಿದ್ದೇ ಸಮಸ್ಯೆಗೆ ಕಾರಣ*

ಪ್ರಗತಿವಾಹಿನಿ ಸುದ್ದಿ: ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ನಾಲ್ಕೂ ಸಾರಿಗೆ ನಿಗಮಗಳ ನೌಕರರು ಬಸ್ ಸೇವೆ ನಿಲ್ಲಿಸಿ ಮುಷ್ಕರ ನಡೆಸುತ್ತೇವೆ ಎಂದು ಹೇಳಿದ್ದು ಸಂಕ್ರಾಂತಿ ಹಬ್ಬದ ಬಳಿಕ ನೌಕರರ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಅವರು ಭರವಸೆ ನೀಡಿದರು.

ಸಾರಿಗೆ ಸಿಬ್ಬಂದಿ ಬಸ್ ಮುಷ್ಕರ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಇಂದು ಕಾವೇರಿ ನಿವಾಸದಲ್ಲಿ ನಡೆದ ಸಭೆ ಬಳಿಕ ಪ್ರತಿಕ್ರಿಯೆ ನೀಡಿದ ಅವರು, ಮುಷ್ಕರದ, ಸಾರಿಗೆ ನೌಕರರ ಸಮಸ್ಯೆ ಬಗ್ಗೆ ಸಿಎಂ ಬಳಿ ಚರ್ಚೆ ಮಾಡಿದ್ದೇವೆ. ಸಾರಿಗೆ ಸಿಬ್ಬಂದಿಯ ಬೇಡಿಕೆ ವಿಚಾರದಲ್ಲಿ ನಮ್ಮ ಸರ್ಕಾರ ಪಾಸಿಟಿವ್ ಆಗಿದೆ. ಸಾರಿಗೆ ನಿಗಮಗಳ ಆರ್ಥಿಕ ಪರಿಸ್ಥಿತಿ ಬಗ್ಗೆಯೂ ನೌಕರರಿಗೆ ಮಾಹಿತಿ ಇದೆ ಎಂದರು.

ಇನ್ನು ನಮ್ಮ ಪಕ್ಷದ ಪ್ರಣಾಳಿಕೆಯಲ್ಲೂ ಸಮಾನ ವೇತನದ ಬಗ್ಗೆ ಉಲ್ಲೇಖಿಸಿದ್ವಿ. ಈಗಾಗಲೇ ಇಲಾಖೆಗೆ ಸರ್ಕಾರವು 220 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಪಿಎಫ್ ಹಣ ಸಂಬಂಧ 2 ಸಾವಿರ ಕೋಟಿ ರೂಪಾಯಿ ಬಿಡುಗಡೆಗೆ ಮನವಿ ಸಲ್ಲಿಸಿದ್ದೇವೆ. ಕ್ಯಾಬಿನೆಟ್‌ನಲ್ಲಿ ವೇತನ ಪರಿಷ್ಕರಣೆ ಬಗ್ಗೆಯೂ ಮಾತನಾಡಿದ್ದೇವೆ. ನಮ್ಮ ಸರ್ಕಾರ ಸಕರಾತ್ಮಕವಾಗಿದ್ದು, ನೌಕರರು ಒಪ್ಪುತ್ತಾರೆಂಬ ನಂಬಿಕೆ ಇದೆ. ಹೀಗಾಗಿ ಮುಷ್ಕರವನ್ನು ಮುಂದೂಡಲು ಹೇಳಿದ್ದಾಗಿ ತಿಳಿಸಿದರು. ಇದಲ್ಲದೇ ಬಸ್ ಟಿಕೆಟ್ ದರ ಹೆಚ್ಚಳ ಸಂಬಂಧ ನಿಗಮಗಳು ಪ್ರಸ್ತಾವನೆ ಕಳುಹಿಸಿವೆ. ದರ ಹೆಚ್ಚಳದ ಪ್ರಸ್ತಾವನೆ ಬಗ್ಗೆ ಪರಿಶೀಲಿಸಿ ಸರ್ಕಾರ ತೀರ್ಮಾನಿಸಲಿದೆ ಎಂದು ಇದೇ ವೇಳೆ ಹೇಳಿದರು.

ಬಿಜೆಪಿಯವರು ಸೋಷಿಯಲ್ ಮೀಡಿಯಾಗಳಲ್ಲಿ ಟೀಕೆ ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಾವಿರಾರು ನೌಕರರನ್ನು ಅಮಾನತು ಮಾಡಲಾಗಿತ್ತು. ಆದರೆ ನಾವು ಅಧಿಕಾರಕ್ಕೆ ಬಂದ ನಂತರ ಅವರನ್ನೆಲ್ಲಾ ಪುನಃ ನೇಮಿಸಿಕೊಂಡಿದ್ದೇವೆ. ಬಿಜೆಪಿ ಸರ್ಕಾರ 5,900 ಕೋಟಿ ರೂಪಾಯಿ ಸಾಲ ಬಿಟ್ಟು ಹೋಗಿದ್ದೇ ಸಮಸ್ಯೆಗೆ ಕಾರಣವಾಗಿದೆ. ಬಜೆಟ್‌ನಲ್ಲಿ ಸಾರಿಗೆ ಇಲಾಖೆಗೆ ಅನುದಾನ ನೀಡಿ ಅಂತಾ ಸಿಎಂ ಬಳಿ ಬೇಡಿಕೆ ಇಟ್ಟಿದ್ದೇನೆ. ಹೀಗಾಗಿ ಸಂಕ್ರಾಂತಿ ಹಬ್ಬದ ನಂತರ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.

ಮುಷ್ಕರ ಹಿಂದಕ್ಕೆ

ಸಚಿವರ ಭರವಸೆ ಹಿನ್ನೆಲೆಯಲ್ಲಿ ಸಾರಿಗೆ ನೌಕರರು ಡಿ.31ರಿಂದ ಆರಂಭಿಸಲಿದ್ದ ಮುಷ್ಕರ ವಾಪಸ್ ಪಡೆದಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button