ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕರ್ನಾಟಕದಾದ್ಯಂತ ಅಬ್ಬರಿಸಿದ್ದ ಮಳೆರಾಯ ಇದೀಗ ಕೆಲವು ಕಡೆಗಳಲ್ಲಿ ಮಾತ್ರ ಸೀಮಿತವಾಗಿ ಅಬ್ಬರಿಸುತ್ತಿದ್ದಾರೆ.
ಮಲೆನಾಡು ಕರಾವಳಿ ಭಾಗದ ಜಿಲ್ಲೆಗಳ ಬಳಿಕ ಉತ್ತರ ಹಾಗು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಭಾರೀ ಮಳೆ ವಿಸ್ತರಣೆ ಆಗಿದೆ. ಇಂದಿನಿಂದ ಮೂರು ದಿನ ಉತ್ತಮ ಮಳೆ ಆಗಲಿದೆ. ಈ ಪೈಕಿ ಇಂದು 6 ಜಿಲ್ಲೆಗಳಿಗೆ ಭಾರಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಹೌದು, ಮುಂಗಾರು ಮಳೆ ಬಹುತೇಕ ಅಂತ್ಯದ ಕಡೆಗೆ ಬಂದಿದೆ. ಅಧಿಕೃತವಾಗಿ ಸೆಪ್ಟಂಬರ್ 30ರಂದು ಮುಂಗಾರು ಮಳೆ ಅಂತ್ಯಗೊಳ್ಳುತ್ತದೆ. ನಂತರ ಹಿಂಗಾರು ಮಳೆ ಆರಂಭವಾಗಬೇಕು. ಇದೀಗ ಮುಂಗಾರು ಮಳೆಯೇ ರಾಜ್ಯದ ವಿವಿಧೆಡೆ ಸಕ್ರಿಯವಾಗಿದೆ.
ಇಂದು ರಾಜ್ಯದ ತುಮಕೂರು, ಮಂಡ್ಯ, ಮೈಸೂರು, ಹಾಸನ, ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಗರಿಷ್ಠ 110 ಮಿಲಿ ಮೀಟರ್‌ನಷ್ಟು ಮಳೆ ಆಗುವ ಸಾಧ್ಯತೆ ಇದೆ. ಈ ಕಾರಣದಿಂದಾಗಿ ಈ ಜಿಲ್ಲೆಗಳಿಗೆ ಒಂದು ದಿನ ‘ಯೆಲ್ಲೋ ಅಲರ್ಟ್’ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಮುಂದಿನ ಮೂರು ದಿನಗಳ ಕಾಲ ಬಾಗಲಕೋಟೆ, ಬೆಳಗಾವಿ, ವಿಜಯಪುರ, ಹಾವೇರಿ, ಧಾರವಾಡ, ಗದಗ, ಕೊಪ್ಪಳ ಜಿಲ್ಲೆಗಳು ಹಾಗೂ ಚಾಮರಾಜನಗರ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ವಿವಿಧ ಪ್ರದೇಶಗಳಲ್ಲಿ ಹಗುರದಿಂದ ಸಾಧಾರಣ ಮಳೆಯ ನಿರೀಕ್ಷೆ ಇದೆ. ಇನ್ನು ಕೆಲವು ಕಡೆಗಳಲ್ಲಿ ಜೋರು ಮಳೆ ಆಗಬಹುದು ಎಂದು ಹವಾಮಾನ ತಜ್ಞರು ಅಂದಾಜಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ