Kannada NewsKarnataka NewsLatest

*ಮೈಕ್ರೋ ಫೈನಾನ್ಸ್ ದಬ್ಬಾಳಿಕೆ ತಡೆಗೆ  ಸರ್ಕಾರದ ಕ್ರಮ* *ಶಾಲಿನಿ ರಜನೀಶ್ ಹೇಳಿಕೆ* 

*ಅನಗತ್ಯ ಕಿರುಕುಳ ತಪ್ಪಿಸಲು ನಿಯಮಗಳ ಪಾಲನೆಗೆ ಸೂಚನೆ*

*ಕಿರುಕುಳ ನೀಡಿದರೆ ಸಹಾಯವಾಣಿಗೆ ಮಾಹಿತಿ ನೀಡಿ*

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಮಧ್ಯಮ  ಹಾಗೂ ಕೆಳ ಮಧ್ಯಮ ವರ್ಗದವರು ತಮ್ಮ  ಅವಶ್ಯಕತೆಗಳಿಗಾಗಿ ಸಣ್ಣ ಫೈನಾನ್ಸ್  ಕಂಪನಿಗಳಲ್ಲಿ ಸಾಲ ಪಡೆದು, ಮರುಪಾವತಿಸುವಲ್ಲಿ ವಿಳಂಬ ಮಾಡಿದ ಸಾಲಗಾರರ ಮೇಲೆ ಅನಧಿಕೃತ ಲೇವಾದೇವಿದಾರರು, ಹಣಕಾಸು ಸಂಸ್ಥೆಗಳಿಂದ ಆಗುತ್ತಿರುವ ದಬ್ಬಾಳಿಕೆ,ದೌರ್ಜನ್ಯಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು,  ದೌರ್ಜನ್ಯ ತಡೆಗೆ ಹಲವು ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ತಿಳಿಸಿದ್ದಾರೆ.

ತುರ್ತು ವೈದ್ಯಕೀಯ ಚಿಕಿತ್ಸೆ, ಮಕ್ಕಳ ವಿದ್ಯಾಭ್ಯಾಸ, ಮದುವೆ ಇನ್ನಿತರ ಖರ್ಚಿಗಾಗಿ ತುರ್ತಾಗಿ ಕೈ ಸಾಲ ಪಡೆಯುವ ಪದ್ಧತಿ ರೂಢಿಯಲ್ಲಿದೆ. ಬಹುತೇಕರು ಪಡೆದ ಸಾಲವನ್ನು ವಾಪಸ್ಸು ನೀಡುತ್ತಾರೆ. ಆದರೆ ಕೆಲವು ವ್ಯಕ್ತಿಗಳು ಸಾಮಾಜಿಕ, ವೈಯಕ್ತಿಕ ಅಥವಾ ಉತ್ಪಾದಕವಲ್ಲದ ಕಾರ್ಯಗಳಿಗಾಗಿ ಹಣ ಖರ್ಚು ಮಾಡುವುದರಿಂದ, ಮರುಪಾವತಿ ಕ್ಷಮತೆ ಕಡಿಮೆ ಇರುತ್ತದೆ. ಇಂತಹ  ಸಂದರ್ಭಗಳಲ್ಲಿ ಸಾಲ ನೀಡಿದವರು ಮರು ವಸೂಲಿಗಾಗಿ ಒತ್ತಾಯಿಸುತ್ತಾರೆ. ಕೆಲವೆಡೆ ಇದು ಕಿರುಕುಳವಾಗಿ ಬೆಳೆಯುತ್ತಿರುವುದನ್ನು  ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ತಿಳಿಸಿದ್ದಾರೆ.

 *ಮುಖ್ಯಮಂತ್ರಿಗಳ  ಅಧ್ಯಕ್ಷತೆಯಲ್ಲಿ ಸಭೆ*

ಕಳೆದ ಜನವರಿ 25 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ, ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಕರ್ನಾಟಕ ವಲಯದ ಅಧ್ಯಕ್ಷರು, ಭಾರತೀಯ ರಿಸರ್ವ ಬ್ಯಾಂಕ್‌ (RBI) ನ ಪ್ರಾಂತೀಯ ನಿರ್ದೇಶಕರು, ಹಾಗೂ ಸಾ-ಧನ್(SA-DHAN), ಎಕೆಎಂಐ, ಎಂಎಫ್ಐಎನ್ ಮತ್ತು ಪ್ರಮುಖ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಪ್ರತಿನಿಧಿಗಳು , ರಾಜ್ಯಮಟ್ಟದ ಬ್ಯಾಂಕರುಗಳ ಸಮಿತಿ ಸಂಚಾಲಕರು, ಅಧಿಕಾರಿಗಳು , ಪೊಲೀಸ್, ಕಂದಾಯ, ಸಹಕಾರ ಹಾಗೂ ಆರ್ಥಿಕ ಇಲಾಖೆಯ ಅಧಿಕಾರಿಗಳನ್ನೊಳಗೊಂಡ ಸಭೆ ನಡೆಸಿ.  ಕಿರುಕುಳವನ್ನು ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ನಿರ್ದೆಶನ ನೀಡಿದ್ದಾರೆ. 

*ಕರ್ನಾಟಕದ ಅಧಿನಿಯಮಗಳು:*

 *ಕರ್ನಾಟಕ ಲೇವಾದೇವಿದಾರರ ಅಧಿನಿಯಮ-1961*

ಅಡಿಯಲ್ಲಿನ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಲಾಗಿದೆ.

 ಈ ಅಧಿನಿಯಮದಡಿಯಲ್ಲಿ 2024ರ ಡಿಸೆಂಬರ್ 31 ರವರೆಗೆ  20,425 ಸಂಸ್ಥೆಗಳು ನೋಂದಣಿಯಾಗಿವೆ.  ಅದರಲ್ಲಿ 6590 ಲೇವಾದೇವಿದಾರರು, 6772 ಪಾನ್‌ ಬ್ರೋಕರ್‌ಗಳು, 7063 ಹಣಕಾಸಿನ ಸಂಸ್ಥೆಗಳು (Finance Corporation) ಇವೆ.

 *ಕರ್ನಾಟಕ ಮಿತಿಮೀರಿದ ಬಡ್ಡಿ ವಿಧಿಸುವಿಕೆ ನಿಷೇಧ ಕಾಯಿದೆ- 2004* ಪ್ರಕಾರ  ಭದ್ರತಾ ಸಾಲಗಳಿಗೆ ವರ್ಷಕ್ಕೆ ಶೇ.14 ಹಾಗೂ ಭದ್ರತೆ ಇಲ್ಲದ ಸಾಲಗಳಿಗೆ ವರ್ಷಕ್ಕೆ ಗರಿಷ್ಠ ಶೇ.16  ಗರಿಷ್ಠ ಬಡ್ಡಿ ದರವನ್ನು ಲೇವಾದೇವಿದಾರರಿಗೆ  ನಿಗದಿಪಡಿಸಲಾಗಿದೆ.    

 ಇಂತಹ ಮಾಹಿತಿಗಳನ್ನು ಸಾರ್ವಜನಿಕವಾಗಿ ಫಲಕಗಳ ಮೂಲಕ ಪ್ರದರ್ಶಿದಲು ಸಂಸ್ಥೆಗಳು ಹಾಗೂ ಸಂಬಂಧಿಸಿದ ಕಚೇರಿಗಳಿಗೆ ತಿಳಿಸಲಾಗಿದೆ. ಸಾಲಗಾರರು ಇವುಗಳನ್ನು ಸೂಕ್ಷ್ಮವಾಗಿ ಗಮನಿಸಿ ಸಾಲ ಪಡೆಯುವ ಮುನ್ನ ಲೇವಾದೇವಿ ಸಂಸ್ಥೆಗಳ ಅಧಿಕೃತ ನೋಂದಣಿ ಪತ್ರ, ಬಡ್ಡಿದರ, ವಸೂಲಿ ಪ್ರಕ್ರಿಯೆ ಇತ್ಯಾದಿಗಳ ಬಗ್ಗೆ ಖಚಿತಪಡಿಸಿಕೊಳ್ಳಬೇಕು.  ಈ ಪ್ರಕ್ರಿಯೆಗಳಿಂದ ಸಾಲ ಮರುಪಾವತಿ ಸಂದರ್ಭದಲ್ಲಿನ ಕಿರುಕುಳ ತಪ್ಪಿಸಲು ಸಾಧ್ಯವಾಗುತ್ತದೆ.    

*ಸೂಕ್ಷ್ಮ ಹಣಕಾಸು (Micro finance) ಸಂಸ್ಥೆಗಳು ಎಂದರೇನು?:*

 3 ಲಕ್ಷ ರೂ.ವರೆಗೂ ಆದಾಯವಿರುವ ಸಾರ್ವಜನಿಕರಿಗೆ ಸಾಲವನ್ನು ಒದಗಿಸುವ ವ್ಯವಸ್ಥೆಯನ್ನು ಮೈಕ್ರೋ ಫೈನಾನ್ಸ್‌ ಎಂದು ಘೋಷಿಸಲಾಗಿದೆ.  ಬ್ಯಾಂಕುಗಳಲ್ಲದ  ಸಹಕಾರ ಸಂಘಗಳು, ಎನ್‌ಬಿಎಫ್‌ಸಿಗಳು, ಸರ್ಕಾರೇತರ ಸಂಸ್ಥೆಗಳು, ಟ್ರಸ್ಟ್‌ಗಳು, ಸಣ್ಣ ಅಂಗಡಿ ಮಾಲೀಕರು, ಇನ್ನಿತರರು ಸಾಲ ನೀಡುತ್ತಾರೆ. 

 ಸಹಕಾರಿ ಸಂಸ್ಥೆಗಳ ಮೇಲ್ವಿಚಾರಣೆಯನ್ನು ಸಹಕಾರ ಇಲಾಖೆ. ಬ್ಯಾಂಕ್‌ ಅಲ್ಲದ ಆರ್ಥಿಕ  ಸಂಸ್ಥೆಗಳ (ಎನ್‌ಬಿಎಫ್‌ಸಿ) ಮೇಲ್ವಿಚಾರಣೆಯನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಮೂಲಕ ನೋಂದಣಿ ಮತ್ತು ಮೇಲ್ವಿಚಾರಣೆ ಮಾಡಲಾಗುತ್ತಿದೆ. ಸಾ-ಧನ್ (SA-Dhan) ಮತ್ತು  ಮೈಕ್ರೋ ಫೈನಾನ್ಸ್ ಇಂಡಸ್ಟ್ರಿ ನೆಟ್‌ವರ್ಕ್ (MFIN) ಸಂಸ್ಥೆಗಳನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ (RBI) ಸ್ವಯಂ ನಿಯಂತ್ರಣಾ ಸಂಸ್ಥೆಗಳನ್ನಾಗಿ (self-regulatory organisation)  ನೇಮಿಸಿದೆ. ನಿಗದಿತ  ಉತ್ತಮ ಲೇವಾದೇವಿ ಪದ್ದತಿಗಳನ್ನು ಅನುಷ್ಠಾನಗೊಳಿಸಲು ಈ ಸಂಸ್ಥೆಗಳನ್ನು ರಚಿಸಲಾಗಿದೆ.   

ಕರ್ನಾಟಕ ರಾಜ್ಯದಲ್ಲಿ ಕೇವಲ 31 ಮೈಕ್ರೋ ಫೈನಾನ್ಸ್ ಇಂಡಸ್ಟ್ರಿಗಳು ಅಸ್ತಿತ್ವದಲ್ಲಿ ಇವೆ.  ಈ 31 ಸಂಸ್ಥೆಗಳು ಅಸೋಸಿಯೇಷನ್ ಆಫ್ ಕರ್ನಾಟಕ ಮೈಕ್ರೋ ಫೈ‌ನಾನ್ಸ್ ಇನಸ್ಟಿಟ್ಯೂಷನ್ (AKMI) ಸದಸ್ಯತ್ವ ಪಡೆದಿವೆ.  ರಾಜ್ಯದಲ್ಲಿ ಈ ಸಂಸ್ಥೆಗಳ 3090 ಶಾಖೆಗಳಿದ್ದು 37,967 ಸಿಬ್ಬಂದಿಗಳು ಕೆಲಸ ನಿರ್ವಹಿಸುತ್ತಿದ್ದಾರೆ. 1,09,88,332 ಖಾತೆಗಳಲ್ಲಿ 59,367.76 ಕೋಟಿ ರೂ‌. ಬಾಕಿ ಉಳಿದಿದೆ.

        ನಿಯಮಗಳನ್ನು ಪಾಲಿಸದ ಹಣಕಾಸು ಸಂಸ್ಥೆಗಳ ಬಗ್ಗೆ  ಮೇಲ್ವಿಚಾರಣಾ ಸಂಸ್ಥೆಗಳ ಮೂಲಕ ಭಾರತೀಯ ರಿಸರ್ವ್‌ ಬ್ಯಾಂಕಿಗೆ ವರದಿ ನೀಡಲಾಗುತ್ತದೆ , ಆರ್‌ಬಿಐ ಒಪ್ಪಿಗೆಯೊಂದಿಗೆ ಸೂಕ್ತ ಶಿಸ್ತಿನ ಕ್ರಮವನ್ನು ಜರುಗಿಸಲಾಗುತ್ತದೆ.  

  *ದಬ್ಬಾಳಿಕೆಯ ಸಾಲ ಮರುಪಾವತಿ ಕ್ರಮದಿಂದ ಸಂರಕ್ಷಿಸಲು ಅಧಿಕೃತವಾಗಿ ಭಾರತೀಯ ರಿಸರ್ವ್‌ ಬ್ಯಾಂಕ್‌ ಮಾರ್ಗಸೂಚಿಗಳು*

 ಎಲ್ಲಾ ಎನ್‌ಬಿಎಫ್‌ಸಿ-ಎಂಎಫ್‌ಐಗಳು ಬಡ್ಡಿಯ ದರ, ಮರುಪಾವತಿಯ ಕಂತು ಮತ್ತು ಅಸಲು ಸಾಲ ಮುಂತಾದವುಗಳ ಬಗ್ಗೆ ʼಫ್ಯಾಕ್ಟ್ ಶೀಟ್‌ನಲ್ಲಿ ಸಾಲ ವಿತರಣೆಯ ಸಮಯದಲ್ಲಿ ಪ್ರತಿಯೊಬ್ಬ ಸಾಲಗಾರನಿಗೆ ಮಾಹಿತಿ ಒದಗಿಸಬೇಕು.  

*ಮೈಕ್ರೋ ಫೈನಾನ್ಸ್  ಸಂಸ್ಥೆಗಳು ಅನುಸರಿಸಬೇಕಾದ ಕ್ರಮಗಳು*

ಮೈಕ್ರೋ ಫೈನಾನ್ಸ್ ಇನ್‌ಸ್ಟಿಟ್ಯೂಷನ್ (ಎಂಎಫ್ಐ) , ಮನಿ ಲೆಂಡಿಂಗ್ ಏಜೆನ್ಸಿ ಅಥವಾ ಸಂಸ್ಥೆಯಿಂದ ನೀಡುವ  ಎಲ್ಲಾ ಸಾಲಗಳ ಮಂಜೂರಾತಿ, ವಿತರಣೆಯ ಪ್ರಕ್ರಿಯೆಯಲ್ಲಿ ಈ  ಅಂಶಗಳನ್ನು  ಅನುಸರಿಸಬೇಕು:

* ಸಾಲಗಾರನಿಗೆ ಸಾಲದ ನಿಯಮಗಳ ಬಗ್ಗೆ   ಸ್ಥಳೀಯ ಭಾಷೆಯಲ್ಲಿ ಅಥವಾ ಆತನಿಗೆ ಅರ್ಥವಾಗುವ ಭಾಷೆಯಲ್ಲಿ ತಿಳಿಸಬೇಕು

* ಸಾಲದ ಅರ್ಜಿಯಲ್ಲಿ ಷರತ್ತುಗಳ ಬಗ್ಗೆ ಮಾಹಿತಿ ನೀಡಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಸಹಾಯ ಮಾಡಬೇಕು.

* ಯಾವ ದಾಖಲೆಗಳನ್ನು ನೀಡುವ ಅವಶ್ಯಕತೆ ಇದೆ ಎನ್ನುವ ಸೂಕ್ತ ಮಾಹಿತಿ ನೀಡಬೇಕು. 

* ನಗದು ಪುಸ್ತಕ, ಲೆಡ್ಜರ್ ಮತ್ತು  ಇತರ ದಾಖಲೆಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು.

*ಸಾಲ ನೀಡಿದ ದಿನಾಂಕದಿಂದ ಏಳು ದಿನಗಳ ಒಳಗೆ ಸಾಲಗಾರನಿಗೆ ನಿಗದಿತ ನಮೂನೆಯಲ್ಲಿ ಸಾಲದ ಮೊತ್ತ , ನೀಡಿದ ದಿನಾಂಕ ಮತ್ತು ಅವಧಿಯ ಮುಕ್ತಾಯ,  ಸಂಸ್ಥೆಯ ಕಾರ್ಯನಿರ್ವಾಹಕರ ಹೆಸರು ಮತ್ತು ವಿಳಾಸ, ನಿಯಮಾನುಸಾರ ವಿಧಿಸಲಾಗುವ ಬಡ್ಡಿದರ ಸ್ಪಷ್ಟವಾಗಿರುವ ಲಿಖಿತ ದಾಖಲೆಯನ್ನು ತಲುಪಿಸಬೇಕು.

* ಸಾಲಗಾರನು ಮಾಡುವ ಪಾವತಿಗೆ ಪ್ರತಿಯಾಗಿ ಸಹಿ ಮಾಡಿದ ರಶೀದಿ ನೀಡಬೇಕು.

* ಸಾಲಗಾರನ ಲಿಖಿತ ಬೇಡಿಕೆಯ ಮೇರೆಗೆ  ಸಾಲಕ್ಕೆ ಸಂಬಂಧಿಸಿದ ಯಾವುದೇ ದಾಖಲೆಯ ನಕಲನ್ನು ನೀಡಬೇಕು.

* ಸಾಲಗಾರರಿಂದ ಪಡೆದ ಭದ್ರತೆಯನ್ನು ಸ್ಪಷ್ಟವಾಗಿ  ತಿಳಿಸಬೇಕು 

*ಜನಸಾಮಾನ್ಯರು ಈ ವಿಧಾನಗಳ ಬಗ್ಗೆ ತಿಳುವಳಿಕೆ ಹೊಂದಿರಬೇಕು.  ತಮ್ಮ ಅಧಿಕೃತ ಹಕ್ಕುಗಳು,ಬಾಧ್ಯತೆಗಳ ಬಗ್ಗೆ ಖಚಿತ ಪಡಿಸಿಕೊಂಡ ನಂತರ ಸಾಲ ತೆಗೆದುಕೊಳ್ಳಬೇಕು.

*ಸ್ವಸಹಾಯ ಗುಂಪುಗಳಲ್ಲಿ ಸಾಲ*

ಮಹಿಳಾ ಸ್ವ-ಸಹಾಯ ಗುಂಪುಗಳಿಂದ  ಹಲವು ಕಡೆ ಬಳಕೆ ಸಾಲವನ್ನು (Consumption Loan) ಪಡೆಯುವ ವ್ಯವಸ್ಥೆ ಇದೆ. ಇವುಗಳಲ್ಲಿ ಶೇ. 99 ರಷ್ಟು ಯಶಸ್ವಿಯಾಗಿ ಮರುಪಾವತಿ ಕೂಡ ಆಗುತ್ತವೆ.  ಬ್ಯಾಂಕುಗಳಲ್ಲಿ ಇರುವಂತೆ ದಾಖಲಾತಿ ಒದಗಿಸುವ, ಜಾಮೀನು ನೀಡುವ ಹಾಗೂ ತಮ್ಮ ಆಸ್ತಿಗಳ ಅಡಮಾನ ಮಾಡುವ ಕ್ಲಿಷ್ಟ ವಿಧಾನ ಇಲ್ಲಿರುವುದಿಲ್ಲ. ಸರಳ ವಿಧಾನ ಅನುಸರಿಸಿ ಸಾಲ ಸಿಗುವುದರಿಂದ ಜನರು ಇಂತಹ ವ್ಯವಸ್ಥೆಗಳಿಗೆ ಹೆಚ್ಚಾಗಿ ಮೊರೆ ಹೋಗುತ್ತಾರೆ.

*ಸಹಾಯವಾಣಿ*

 ಬಡಜನರ ಅವಶ್ಯಕತೆಯನ್ನು ಬಂಡವಾಳ ಮಾಡಿಕೊಳ್ಳುವ ಕೆಲವು ವ್ಯಕ್ತಿಗಳು,ಅನಧಿಕೃತ ಲೇವಾದೇವಿದಾರರು ಜನರ ತುರ್ತು ಅವಶ್ಯಕತೆಗೆ ಹಣ ನೀಡಿ, ಹೆಚ್ಚು ಬಡ್ಡಿ ವಿಧಿಸಿ ಶೋಷಣೆ ಮಾಡುತ್ತಾರೆ. ಅಂತಹ ವ್ಯಕ್ತಿಗಳು ಅಥವಾ ಸಂಸ್ಥೆಗಳ ವಿರುದ್ಧ ಸಾರ್ವಜನಿಕರು  ಸಹಾಯವಾಣಿ ಸಂಖ್ಯೆಗಳಿಗೆ ದೂರು ನೀಡಬಹುದು. ಸೂಕ್ಷ್ಮ ಹಣಕಾಸು ಸಂಸ್ಥೆ (MFI) ,ಮನಿ ಲೆಂಡಿಂಗ್ ಸಂಸ್ಥೆಗಳ ನಿಯಮ ಉಲ್ಲಂಘನೆಗಳ ಕುರಿತು ಭಾರತೀಯ ರಿಸರ್ವ್ ಬ್ಯಾಂಕ್‌ (RBI) ಸಹಾಯವಾಣಿ ಸಂಖ್ಯೆ 14448 ಗೆ ಮಾಹಿತಿ ನೀಡಬಹುದು.

ರಾಜ್ಯ ಸರ್ಕಾರವು  ಮೈಕ್ರೋ ಫೈನಾನ್ಸ್‌ ಸಾಲಗಾರರಿಗೆ ಎಲ್ಲ ರೀತಿಯ ಕಾನೂನು ರಕ್ಷಣೆ ನೀಡಲು ಕ್ರಮವಹಿಸಿದೆ ನೊಂದ ವ್ಯಕ್ತಿಗಳು ರಾಜ್ಯದ ಏಕೀಕೃತ ಸಹಾಯವಾಣಿ ಸಂಖ್ಯೆ: 112 ಅಥವಾ 1902   ಸಂಪರ್ಕಿಸಬಹುದು ಎಂದು *ಡಾ.ಶಾಲಿನಿ ರಜನೀಶ್* ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button