Belagavi NewsBelgaum NewsKannada NewsKarnataka NewsPolitics

*ಅಸಂಘಟಿತ ಕಾರ್ಮಿಕರಿಗೆ ಸುರಕ್ಷತೆ, ಸಾಮಾಜಿಕ ಭದ್ರತೆ ಒದಗಿಸುವುದು ಸರ್ಕಾರದ ಧ್ಯೇಯೋದ್ದೇಶ: ಸಚಿವ ಸಂತೋಷ್ ಲಾಡ್*

ಪ್ರಗತಿವಾಹಿನಿ ಸುದ್ದಿ: ಅಸಂಘಟಿತ ವಿವಿಧ ವಲಯಗಳಡಿ ದುಡಿಯುವ ಕಾರ್ಮಿಕರನ್ನು ಗುರುತಿಸಿ ಅವರಿಗೆ ಸುರಕ್ಷತೆ ಮತ್ತು ವಿಶೇಷ ಸಾಮಾಜಿಕ ಭದ್ರತೆ ಒದಗಿಸುವುದು ರಾಜ್ಯ ಸರ್ಕಾರದ ಧ್ಯೇಯೋದ್ದೇಶವಾಗಿದೆ ಎಂದು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಎಸ್.ಲಾಡ್ ಅವರು ಹೇಳಿದರು.

ಕಾರ್ಮಿಕ ಇಲಾಖೆ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ, ಸಾರಿಗೆ ಇಲಾಖೆ, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಇವರ ಸಂಯುಕ್ತಾಶ್ರಯದಲ್ಲಿ ನಗರದ ಸ್ಟೇಡಿಯಂ ರಸ್ತೆಯ ವಾಲ್ಮೀಕಿ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಬಳ್ಳಾರಿ ಜಿಲ್ಲೆಯ ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಹಾಗೂ ವಿವಿಧ ಯೋಜನೆಗಳ ಕುರಿತು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದಲ್ಲಿ ಸುಮಾರು ಶೇ .90 ರಷ್ಟು ಕಾರ್ಮಿಕರು ಅಸಂಘಟಿತ ವಿವಿಧ ವಲಯಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಸುಮಾರು ಶೇ. 85 ರಷ್ಟು ಕಾರ್ಮಿಕರು ಇದ್ದಾರೆ. ದೇಶದ ಶೇ.50 ರಷ್ಟು ಜಿಡಿಪಿ ಯು ಅಸಂಘಟಿತ ವಲಯಗಳ ಕಾರ್ಮಿಕರ ಆದಾಯದಿಂದ ಬರುತ್ತದೆ. ಹಾಗಾಗಿ ಅವರ ಸುರಕ್ಷತೆ ಮತ್ತು ಸಾಮಾಜಿಕ ಭದ್ರತೆಯು ನಮ್ಮ ಸರ್ಕಾರದ ಆದ್ಯತೆಯಾಗಿದೆ ಎಂದರು.

ರಾಜ್ಯದಲ್ಲಿ 91 ಅಸಂಘಟಿತ ವರ್ಗಗಳಡಿಯ ಇ-ಶ್ರಮ ಪೋರ್ಟಲ್ ನಲ್ಲಿ ಸುಮಾರು 1.53 ಕೋಟಿ ಕಾರ್ಮಿಕರು ನೋಂದಾಯಿಸಿಕೊಂಡಿದ್ದಾರೆ. ನೋಂದಾಯಿಸಿಕೊಂಡ ಅಸಂಘಟಿತ ಕಾರ್ಮಿಕರಿಗೆ ಈ ಯೋಜನೆಯಡಿ ಅಪಘಾತ ಪರಿಹಾರ ಸೌಲಭ್ಯ ಅಪಘಾತದಿಂದ ಮರಣ ಹೊಂದಿದಲ್ಲಿ, ಸಂಪೂರ್ಣ ದುರ್ಬಲತೆ ಹೊಂದಿದಲ್ಲಿ ಅವರ ನಾಮನಿದೇರ್ಶಿತರಿಗೆ 1 ಲಕ್ಷ ರೂ.ಪರಿಹಾರ, ಶಾಶ್ವತ ದುರ್ಬಲತೆ ಹೊಂದಿದರೆ ಮತ್ತು ತಾತ್ಕಾಲಿಕ ದುರ್ಬಲತೆ ಹೊಂದಿದರೆ ಆಸ್ಪತ್ರೆ ಚಿಕಿತ್ಸೆ ವೆಚ್ಚಕ್ಕಾಗಿ 1 ಲಕ್ಷ ರೂ.ವರೆಗೆ ಪರಿಹಾರ ಧನ ಸಹಾಯ ನೀಡಲಾಗುತ್ತದೆ ಎಂದು ತಿಳಿಸಿದರು.

Home add -Advt

ರಾಜ್ಯ ಸರ್ಕಾರದ ಪೆಟ್ರೋಲ್ ಮತ್ತು ಡಿಸೇಲ್‌ನಿಂದ ರಾಜ್ಯಕ್ಕೆ ಬರುವ ತೆರಿಗೆ ಸಂಗ್ರಹದಲ್ಲಿ ಕನಿಷ್ಠ ಶೇ.1 ರಷ್ಟು ಹಣವನ್ನು ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಗೆ ನೀಡಬೇಕೆಂದುಸಿ ಎಂ ಸಿದ್ದರಾಮಯ್ಯ ಅವರಿಗೆ ಕೋರಲಾಗಿದೆ. ಮುಖ್ಯಮಂತ್ರಿಗಳ ಒಪ್ಪಿಗೆ ದೊರೆತಲ್ಲಿ, 1,500 ಕೋಟಿ ರೂ. ಸಂಗ್ರಹವಾಗಲಿದೆ ಅದನ್ನು ನೇರವಾಗಿ ಸ್ಮಾರ್ಟ್ ಕಾರ್ಡ್ ಫಲಾನುಭವಿಗಳಿಗೆ ನೀಡಲಾಗುವುದು ಎಂದು ಭರವಸೆ ನೀಡಿದರು.

ಕರ್ನಾಟಕ ರಾಜ್ಯ ಮೋಟಾರು ಸಾರಿಗೆ ಹಾಗೂ ಇತರೆ ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ಮಂಡಳಿ ರೂಪಿಸಿ ಅಧಿನಿಯಮವನ್ನು ಜಾರಿಗೊಳಿಸಿ 20 ವರ್ಗಗಳನ್ನು ಗುರುತಿಸಿ ಸೌಲಭ್ಯಗಳನ್ನು ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಯೋಜನೆಯಡಿ ಅಪಘಾತದಿಂದ ಫಲಾನುಭವಿ ನಿಧನರಾದರೆ 5 ಲಕ್ಷ ರೂ ಪರಿಹಾರ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಹೆಲ್ಮೆಟ್ ಕಡ್ಡಾಯ ಎಂದು ಜಾರಿ ಮಾಡಿರುವುದು ಉತ್ತಮ ಕೆಲಸವಾಗಿದೆ ಎಂದು ಜಿಲ್ಲಾ ಪೊಲೀಸ್ ಇಲಾಖೆಗೆ ಅಭಿನಂದಿಸಿದರು.

ರಾಜ್ಯದ ಜನತೆಗೆ ವರ್ಷಕ್ಕೆ ನೇರವಾಗಿ 60 ಸಾವಿರ ಕೋಟಿ ರೂ. ನೀಡುತ್ತಿದ್ದು, ಐದು ವರ್ಷಕ್ಕೆ 3 ಲಕ್ಷ ಕೋಟಿ ನೀಡುವ ದೇಶದ ಏಕೈಕ ಸಿ ಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ, ನಮ್ಮ ಸರ್ಕಾರವಾಗಿದೆ. ‘ಕೆರೆಯ ನೀರನ್ನು ಕೆರೆಗೆ ಚೆಲ್ಲಿ’ ಎಂಬ ಗಾದೆಯಂತೆ ತೆರಿಗೆ ಹಣವನ್ನು ಜನರಿಗೆ ವಾಪಸ್ ನೀಡುತ್ತಿದ್ದೇವೆ ಎಂದು ಪ್ರತಿಪಾದಿಸಿದರು.

ಗಿಗ್ ಕಾರ್ಮಿಕರ ವಿಮಾ ಯೋಜನೆ

ಇ-ಕಾಮರ್ಸ್ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗಿಗ್ ಕಾರ್ಮಿಕರಿಗೆ ತಲಾ 2 ಲಕ್ಷ ರೂ.ಗಳ ಅಪಘಾತ ಪರಿಹಾರ ಹಾಗೂ ಜೀವ ವಿಮಾ ಸೌಲಭ್ಯ ಸೇರಿದಂತೆ ಒಟ್ಟು 4 ಲಕ್ಷ ರೂ.ಗಳ ವಿಮಾ ಸೌಲಭ್ಯ ಒದಗಿಸುವ ‘ಕರ್ನಾಟಕ ರಾಜ್ಯ ಗಿಗ್ ಕಾರ್ಮಿಕರ ವಿಮಾ ಯೋಜನೆ’ ಯನ್ನು ಜಾರಿಗೊಳಿಸಲಾಗಿದ್ದು, ಗಿಗ್ ಕಾರ್ಮಿಕರು ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ಆಶಾ ದೀಪ ಕಾರ್ಯಕ್ರಮ

ದೇಶದಲ್ಲಿಯೇ ಪ್ರಥಮ ಬಾರಿಗೆ ಬಳ್ಳಾರಿ ಜಿಲ್ಲೆಯಲ್ಲಿ ಆಶಾ ದೀಪ ಕಾರ್ಯಕ್ರಮ ಆರಂಭಿಸಲಾಗಿದ್ದು, ಇದರಲ್ಲಿ ಯಾವುದೇ ಉದ್ದಿಮೆದಾರರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಉದ್ಯೋಗ ಅಥವಾ ಅಪ್ರೆಂಟಿಸ್ ತರಬೇತಿ ನೀಡಿದಲ್ಲಿ ಕಾರ್ಮಿಕ ಇಲಾಖೆ ವತಿಯಿಂದ 2 ವರ್ಷದವರೆಗೆ ತಿಂಗಳ 7 ಸಾವಿರ ರೂ.ನಂತೆ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಅನುದಾನದಡಿ ಸಹಾಯಧನ ನೀಡಲಾಗುವುದು. ಈ ನಿಟ್ಟಿನಲ್ಲಿ ತೋರಣಗಲ್ ನ ಜೆಎಸ್‌ಡಬ್ಲ್ಯೂ ಕಂಪನಿಗೆ 19 ಲಕ್ಷ ರೂ. ಚೆಕ್ ವಿತರಿಸಲಾಗಿದೆ ತಿಳಿಸಿದರು. 

ಸಂಸದರಾ ಈ.ತುಕಾರಾಂ, ಕೆ.ರಾಜಶೇಖರ ಬಸವರಾಜ, ಶಾಸಕರಾದ ಈ.ಅನ್ನಪೂರ್ಣ ಹಾಗೂ ಜೆ.ಎನ್.ಗಣೇಶ್ ಸಮಾರಂಭದಲ್ಲಿ ಮಾತನಾಡಿದರು. 

ಕಾರ್ಯಕ್ರಮಕ್ಕೂ ಆರಂಭಕ್ಕೂ ಮುನ್ನ ಭಾರತ ಸಂವಿಧಾನದ ಪ್ರಸ್ತಾವನೆಯನ್ನು ಬೋಧಿಸಲಾಯಿತು.ಬಳಿಕ ಸಾಂಕೇತಿಕವಾಗಿ ವಿವಿಧ ವರ್ಗಗಳಡಿ ನೋಂದಾಯಿಸಿಕೊಂಡಿದ್ದ ಕಾರ್ಮಿಕರಿಗೆ ಸಚಿವರು ಮತ್ತು ಗಣ್ಯರು ಸ್ಮಾರ್ಟ್ ಕಾರ್ಡ್ ವಿತರಿಸಿದರು.  

ನಂತರ ಕಟ್ಟಡ ನಿರ್ಮಾಣ ಕಾರ್ಮಿಕರನ್ನು ಅವರಿರುವ ಸ್ಥಳಕ್ಕೇ ತೆರಳಿ ಉಚಿತವಾಗಿ ಆರೋಗ್ಯ ತಪಾಸಣೆಗೆ ಒಳಪಡಿಸುವುದು, ಚಿಕಿತ್ಸೆ ಹಾಗೂ ಸಲಹೆ ನೀಡಲು ಮೊದಲಾದ ಸೇವೆ ಒದಗಿಸುವ 3 ಅತ್ಯಾಧುನಿಕ ಸಂಚಾರಿ ಆರೋಗ್ಯ ಘಟಕ ವಾಹನಗಳಿಗೆ ಕಾರ್ಮಿಕ ಸಚಿವರು ಚಾಲನೆ ನೀಡಿದರು.

ಸಮಾರಂಭದಲ್ಲಿ ಸಿರುಗುಪ್ಪ ಶಾಸಕ ಬಿ.ಎಂ.ನಾಗರಾಜ, ಡಾ.ಬಾಬು ಜಗಜೀವನ್‌ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ, ಮಹಾನಗರ ಪಾಲಿಕೆಯ ಮಹಾಪೌರರಾದ ಮುಲ್ಲಂಗಿ ನಂದೀಶ್, ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜೆ.ಎಸ್.ಆಂಜನೇಯಲು, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ.ಚಿದಾನಂದಪ್ಪ, ಕಾರ್ಮಿಕ ಆಯುಕ್ತ ಡಾ.ಎಚ್.ಎನ್. ಗೋಪಾಲಕೃಷ್ಣ, ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹ್ಯಾರೀಸ್ ಸುಮೈರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ. ವಿ.ಜೆ., ಜಂಟಿ ಕಾರ್ಮಿಕ ಆಯುಕ್ತರು ಹಾಗೂ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಜಂಟಿ ಕಾರ್ಯದರ್ಶಿ ಡಾ.ಎಸ್.ಬಿ ರವಿಕುಮಾರ್, ದಾವಣಗೆರೆಯ ಬಳ್ಳಾರಿ ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತ ಡಾ.ಅವಿನಾಶ್ ನಾಯಕ್, ಬಳ್ಳಾರಿ ಉಪ ವಿಭಾಗ ಕಾರ್ಮಿಕ ಅಧಿಕಾರಿ ಸಿದ್ದಪ್ಪ ಖೈನೂರು ಸೇರಿದಂತೆ ಜಿಲ್ಲೆಯ ಎಲ್ಲಾ ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಸದಸ್ಯರು, ಕಾರ್ಮಿಕ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು ಹಾಗೂ ಇತರರು ಉಪಸ್ಥಿತರಿದ್ದರು.

Related Articles

Back to top button