Politics

*ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್: ಓಪಿಎಸ್ ಅನುಷ್ಠಾನಕ್ಕೆ ಸರ್ಕಾರದಿಂದ ಅಗತ್ಯ ಕ್ರಮ: ಡಿಸಿಎಂ ಡಿ.ಕೆ. ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ: ಓಪಿಎಸ್ (ಓಲ್ಡ್ ಪೆನ್ಷನ್ ಸ್ಕೀಮ್) ಜಾರಿ ಸಂಬಂಧ ಅಂಜುಮ್ ಪರ್ವೇಜ್ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಲಾಗಿದ್ದು, ಆ ಸಮಿತಿಯ ವರದಿಯನ್ನು ಪರಿಶೀಲಿಸಿ ಅನುಷ್ಠಾನಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಭರವಸೆ ನೀಡಿದರು.

ಬೆಂಗಳೂರು ಅರಮನೆ ಮೈದಾನದಲ್ಲಿ ಗುರುವಾರ ಏರ್ಪಡಿಸಿದ್ದ ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳ ಸಮಾವೇಶದಲ್ಲಿ ಶಿವಕುಮಾರ್ ಅವರು ಗುರುವಾರ ಮಾತನಾಡಿದರು.

“ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಓಪಿಎಸ್ ಬಗ್ಗೆ ನಾವು ಭರವಸೆ ನೀಡಿದ್ದೆವು. ಅದರಂತೆ ಅದನ್ನು ಜಾರಿಗೆ ತರಲು ಬದ್ದರಾಗಿದ್ದೇವೆ. ನೀವು ಬಿಟ್ಟರೂ ಈ ವಿಚಾರವನ್ನು ನಾವು ಬಿಡುವುದಿಲ್ಲ. ಆದರೆ ಸ್ವಲ್ಪ ತಾಳ್ಮೆಯಿರಲಿ” ಎಂದು ತಿಳಿಸಿದರು.

Home add -Advt

ಆರೋಗ್ಯ ಗಟ್ಟಿಯಾಗಿದೆ; ಇನ್ನೂ ಎಂಟತ್ತು ವರ್ಷ ರಾಜಕೀಯದಲ್ಲಿ ಇರುತ್ತೇನೆ

ಓಪಿಎಸ್ ಜಾರಿ ವಿಚಾರವಾಗಿ ಡಿಸಿಎಂ ಭರವಸೆ ನೀಡಿದಾಗ ನೌಕರರು ಡಿಕೆ, ಡಿಕೆ ಎಂದು ಘೋಷಣೆ ಕೂಗಿದರು.‌ ಆಗ ಸಭಿಕರಿಗೆ ಸುಮ್ಮನಿರಲು ಹೇಳಿದ ಡಿಸಿಎಂ ಅವರು, “ನಾನು ಮುಂದಿನ ಬಾರಿ ಚುನಾವಣೆಗೆ ನಿಂತಾಗ, ನನ್ನ ನಾಯಕತ್ವದಲ್ಲಿ ನಡೆದಾಗ ದಯವಿಟ್ಟು ಈ ಪದವನ್ನು ಉಪಯೋಗಿಸಿ. ನಾನು ವಿಧಾನಸೌಧದಲ್ಲಿ ಇರುವವನೇ. ನಾನು ಇನ್ನು ಎಂಟತ್ತು ವರ್ಷ ಬಿಟ್ಟು ಹೋಗುವುದಿಲ್ಲ. ನನ್ನ ಆರೋಗ್ಯ ಇನ್ನೂ ಗಟ್ಟಿಯಾಗಿದೆ. ನನ್ನ ಮೇಲೆ ನಂಬಿಕೆಯಿಡಿ” ಎಂದು ಮಾರ್ಮಿಕವಾಗಿ ಹೇಳಿದರು.

“ಸರ್ಕಾರದ ರಥ ಎಳೆಯುವವರು ಸರ್ಕಾರಿ ನೌಕರರು. ನೀವು ಇಲ್ಲದಿದ್ದರೆ ಸರ್ಕಾರದ ಚಕ್ರ ಮುಂದಕ್ಕೆ ಸಾಗುವುದಿಲ್ಲ. ನಿಮ್ಮ ಸಂಘ ರಚನಾತ್ಮಕವಾಗಿ ಕೆಲಸ ಮಾಡುತ್ತಿದೆ. ಸರ್ಕಾರಿ ಕೆಲಸ ಕೇವಲ ಹುದ್ದೆಯಲ್ಲ. ಅದೊಂದು ಜವಾಬ್ದಾರಿ. ನೀವು ಹೃದಯ ಶ್ರೀಮಂತಿಕೆಯಿಂದ ಜವಾಬ್ದಾರಿ ಸರಿಯಾಗಿ ನಿಭಾಯಿಸಬೇಕು” ಎಂದರು.

“ನಾನು 1989ರಿಂದ ವಿಧಾನಸಭೆಯಲ್ಲಿ ಇದ್ದೇನೆ. ಕಾರ್ಯಾಂಗದ ಭಾಗವಾಗಿ ಸರ್ಕಾರಿ ನೌಕರರು ನೀವೀದ್ದೀರಿ. ನಿಮ್ಮ ಜವಾಬ್ದಾರಿ ನನಗೆ ಅರಿವಿದೆ. ನಾವು ದೇವಾಲಯಕ್ಕೆ ಹೋದಾಗ ದೇವರ ಬಳಿ ಏನು ಮಾತನಾಡಬೇಕು ತಿಳಿಯದೇ ಇದ್ದಾಗ ನಮ್ಮ ಮಧ್ಯೆ ಮಾತುಕತೆ ನಡೆಸಲು ಅರ್ಚಕರು ಸಹಾಯ ಮಾಡುತ್ತಾರೆ. “ಅರ್ಚಕಸ್ಯ ಪ್ರಭಾವೇನ ಶಿಲಾಭವತಿ ಶಂಕರಃ” ಅಂದರೆ ಅರ್ಚಕರ ಪ್ರಭಾವದಿಂದ ನಾವು ಶಿಲೆಯಲ್ಲೂ ಶಂಕರನನ್ನು ಕಾಣಬಹುದು ಎಂದು ಅರ್ಥ. ಪ್ರಜಾಪ್ರಭುತ್ವ, ಸಂವಿಧಾನದ ವ್ಯವಸ್ಥೆಯಲ್ಲಿ ಸರ್ಕಾರಿ ನೌಕರರು ಸರ್ಕಾರ ಹಾಗೂ ಜನರ ಮಧ್ಯೆ ಸಂಪರ್ಕ ಸೇತುವೆಯಂತೆ ಇದ್ದಾರೆ. ಜನ ದೇವಾಲಯಕ್ಕೆ ತಮ್ಮ ಕಷ್ಟ ಹೇಳಿಕೊಳ್ಳಲು ಹೋಗುವಂತೆ ಜನ ತಮ್ಮ ಸಮಸ್ಯೆಯನ್ನು ಹೊತ್ತು ನಿಮ್ಮ ಬಳಿಗೆ ಬರುತ್ತಾರೆ” ಎಂದು ತಿಳಿಸಿದರು.

“ಇದನ್ನು ನೀವು ಅರಿಯಬೇಕು. ಮಗುವಿಗೆ ತಾಯಿಯ ಮೇಲೆ ನಂಬಿಕೆ, ಮರಕ್ಕೆ ತನ್ನ ಬೇರಿನ ಮೇಲೆ ನಂಬಿಕೆ. ಪೋಷಕರಿಗೆ ತಮ್ಮ ಮಕ್ಕಳ ಮೇಲೆ ನಂಬಿಕೆ, ಭಕ್ತನಿಗೆ ಭಗವಂತನ ಮೇಲೆ ನಂಬಿಕೆ. ಈ ಸರ್ಕಾರದ ಅಭಿವೃದ್ಧಿ ವಿಚಾರದಲ್ಲಿ ನನಗೆ ಸರ್ಕಾರಿ ನೌಕರರ ಮೇಲೆ ನಂಬಿಕೆ ಇದೆ. ಮನುಷ್ಯನಿಗೆ ನಂಬಿಕೆಗಿಂತ ದೊಡ್ಡ ಗುಣವಿಲ್ಲ. ಅದೇ ರೀತಿ ನಿಮ್ಮೆಲ್ಲರ ನಂಬಿಕೆಯನ್ನು ನಿಮ್ಮ ಸಂಘದ ಅಧ್ಯಕ್ಷರಾದ ಷಡಕ್ಷರಿ ಅವರು ಉಳಿಸಿಕೊಳ್ಳುತ್ತಾರೆ ಎಂದು ಭಾವಿಸಿದ್ದೇನೆ. ನಾನು ಕೂಡ ಬಡ ನೌಕರನಂತೆ 38 ವರ್ಷಗಳಿಂದ ಸೇವೆ ಮಾಡುತ್ತಿದ್ದೇನೆ. ಶಾಸಕನಾಗಿ ಸರ್ಕಾರದ ವೇತನ ಪಡೆದಿದ್ದೇನೆ. ನನಗೂ ಪಿಂಚಣಿ ಬರುತ್ತದೆ” ಎಂದು ಹೇಳಿದರು.

“ನಮ್ಮ ಸಮಾಜ ಸದಾ ಸೇವೆ ಮಾಡುವವರನ್ನು ಗುರುತಿಸುತ್ತದೆ. ರಾಮನ ತಂದೆ ದಶರಥ ಹಾಗೂ ರಾಮನ ಭಂಟ ಹನುಮಂತ. ನಮ್ಮಲ್ಲಿ ದಶರಥನಿಗಿಂತ ಹನುಮಂತನ ದೇವಾಲಯಗಳೇ ಹೆಚ್ಚು. ನೀವು ಕೂಡ ನಿಮಗೆ ಅವಕಾಶ ಸಿಕ್ಕಾಗ ಸಮಾಜದ ಕೆಲಸ ಮಾಡಬೇಕು. ಮನುಷ್ಯನಲ್ಲಿ ನಂಬಿಕೆ ಇಲ್ಲದಿದ್ದರೆ ಸಂಬಂಧಗಳು ಉಳಿಯುವುದಿಲ್ಲ. ನಾವು ಜನಪ್ರತಿನಿಧಿಗಳು ಹೇಗೆ ಜನರನ್ನು ಪ್ರತಿನಿಧಿಸುತ್ತೇವೆಯೋ ಅದೇ ರೀತಿ, ಎಲ್ಲಾ ಸರ್ಕಾರಿ ನೌಕರರು ರಾಜ್ಯದ ಏಳುವರೆ ಕೋಟಿ ಜನರನ್ನು ಪ್ರತಿನಿಧಿಸುತ್ತೀರಿ. ನೀವೆಲ್ಲರೂ ಜನರ ಸೇವೆ ಮಾಡುವ ಅವಕಾಶ ಪಡೆದಿದ್ದು, ಇದನ್ನು ಸರಿಯಾಗಿ ಮಾಡಬೇಕು. ಆತ್ಮಸಾಕ್ಷಿಗೆ ತೃಪ್ತಿಯಾಗುವಂತೆ ಕೆಲಸ ಮಾಡಬೇಕು. ಹುಟ್ಟು ಆಕಸ್ಮಿಕ, ಸಾವು ಅನಿವಾರ್ಯ, ಜನನ ಉಚಿತ, ಮರಣ ಖಚಿತ. ಈ ಹುಟ್ಟು ಸಾವಿನ ಮಧ್ಯೆ ನಾವು ಏನು ಸಾಧನೆ ಮಾಡುತ್ತೇವೆ ಎಂಬುದು ಮುಖ್ಯ. ನೀವು ನಿಮ್ಮ ಜೀವನದಲ್ಲಿ ಎಷ್ಟು ಜನರ ಬದುಕು ಬದಲಾವಣೆ ಮಾಡಲು ಪೆನ್ನು ಪೇಪರ್ ಬಳಸುತ್ತೀರಿ ಎಂಬುದು ಮುಖ್ಯ” ಎಂದರು.

“ದೇಶಕ್ಕೆ ಹಾಗೂ ಸಮಾಜಕ್ಕೆ ಸೇವೆ ಸಲ್ಲಿಸುತ್ತಿದ್ದೇವೆ ಎಂಬ ಭಾವನೆ ನಿಮ್ಮಲ್ಲಿರಬೇಕು. ಪರೋಪಕಾರಾಯ ಫಲಂತಿ ವೃಕ್ಷಾಃ ಪರೋಪಕಾರಾಯ ವಹಂತಿ ನದ್ಯಃ, ಪರೋಪಕಾರಾಯ ದುಹಂತಿ ಗಾವಃ, ಪರೋಪಕಾರಾರ್ಥಮ್ ಇದಂ ಶರೀರಮ್. ಅಂದರೆ ಪ್ರಕೃತಿಯಲ್ಲಿರುವ ಮರ, ನದಿ, ಹಸು ಪರೋಪಕಾರಕ್ಕಾಗಿಯೇ ಇದ್ದು, ನಮ್ಮ ದೇಹ ಕೂಡ ಬೇರೆಯವರ ಉಪಕಾರಕ್ಕೆ ಮೀಸಲಾಗಿರಬೇಕು ಎಂದರ್ಥ” ಎಂದು ತಿಳಿಸಿದರು.

“ಮುಖ್ಯಮಂತ್ರಿಗಳು ಈ ಕಾರ್ಯಕ್ರಮಕ್ಕೆ ಆಗಮಿಸಲು ಇಚ್ಛೆ ಇತ್ತು. ಆದರೆ ಅವರಿಗೆ ವೈದ್ಯರು ವಿಶ್ರಾಂತಿ ಹೇಳಿದ್ದಾರೆ. ನಮ್ಮ ಸರ್ಕಾರದ‌ ಮೇಲೆ ಎಲ್ಲಾ ವರ್ಗದ ಜನರ ನಂಬಿಕೆ ಇಟ್ಟಿದ್ದಾರೆ. ಜಾತಿ, ಧರ್ಮದ ತಾರತಮ್ಯ ಮೇಲೆ ನನಗೆ ನಂಬಿಕೆ ಇಲ್ಲ. ಎಲ್ಲಾ ಜಾತಿ, ಸಮುದಾಯಗಳು ಬೇಕು. ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದ ವಿಶ್ವಕ್ಕೆ ಶಾಂತಿ ಸಿಗಲಿ ಎಂದು ನಮ್ಮ ಗುರುಗಳು ಹೇಳಿದ್ದಾರೆ. ಪ್ರತಿಯೊಬ್ಬರೂ ತಮ್ಮ ಧರ್ಮದ ಮೇಲೆ ನಂಬಿಕೆ ಇಟ್ಟುಕೊಂಡಿರುತ್ತಾರೆ. ಅವರ ಆಚಾರ ವಿಚಾರ ಅವರದು. ನಾವು ಅದರಲ್ಲಿ ಯಾಕೆ ಮೂಗು ತೂರಿಸಬೇಕು” ಎಂದರು.

“ಜನಪ್ರತಿನಿಧಿಗಳು ಹಾಗೂ ಸರ್ಕಾರಿ ನೌಕರರೆಲ್ಲರೂ ಒಂದೇ. ನಾವು ನಿಮ್ಮನ್ನು ಒಟ್ಟಾಗಿ ತೆಗೆದುಕೊಂಡು ಹೋಗುತ್ತೇವೆ. ನಿಮ್ಮ ಬೇಡಿಕೆಯನ್ನು ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಸೇರಿಸಿದ್ದೇವೆ. ನಾವು ರಾಜ್ಯದ ನಾಲ್ಕು ಕೋಟಿ ಜನರಿಗೆ ಸಹಾಯ ಮಾಡುವ ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದೇವೆ. ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನರಿಗೆ ಆಸರೆಯಾಗಲು ಪಂಚ ಗ್ಯಾರಂಟಿ ಘೋಷಣೆ ಮಾಡಿದ್ದೇವೆ. ಸರ್ಕಾರ ಹಂತಹಂತವಾಗಿ ಸಂಪನ್ಮೂಲ ಕ್ರೂಢೀಕರಣ ಆದಂತೆ ನಾವು ನಮ್ಮ ಯೋಜನೆಗಳ ಫಲಾನುಭವಿಗಳಿಗೆ ಹಣ ನೀಡುತ್ತೇವೆ.‌ ನಾವು ಯಾರಿಗೂ ಗೃಹಲಕ್ಷ್ಮೀ ಹಣ ತಪ್ಪಿಸುವ ಪ್ರಮೇಯವೇ ಇಲ್ಲ” ಎಂದು ಭರವಸೆ ನೀಡಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button