Kannada NewsKarnataka News

*ಸುಳ್ಳು ದೂರು ನೀಡಿ ಬೆಳಗಾವಿಗರ ನೆಮ್ಮದಿ ಕೆಡಿಸಿದ್ದ ಸರಕಾರಿ ವಾಹನ ಚಾಲಕ; ಆತನ ವಿರುದ್ಧವೇ ಬಿತ್ತು ಕೇಸ್*

ಪ್ರಗತಿ ವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯ ಸುವರ್ಣ ವಿಧಾನಸೌಧದ ಬಳಿ ಸರಕಾರಿ ವಾಹನದ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ ಎಂದು ಬೆಂಗಳೂರಿನ ಅಗ್ರಿಕಲ್ಚರ್ ರೂರಲ್ ಡೆವಲ್‍ಪ್ಮೆಂಟ್ ಬ್ಯಾಂಕಿನ ವಾಹನ ಚಾಲಕ ಸುಳ್ಳು ದೂರು ದಾಖಲಿಸಿ ಸಂಚಲನ ಸೃಷ್ಟಿಸಿದ್ದ ಪ್ರಕರಣದ ಸತ್ಯಾಸತ್ಯತೆಯನ್ನು ಪೊಲೀಸರು ಬಯಲಿಗೆಳೆದಿದ್ದಾರೆ.

 

ವಾಹನ ಚಾಲಕ ಸ್ವಯಂಕೃತ ಅಪರಾದದಿಂದ ವಾಹನದ ಗಾಜು ಒಡೆದುಕೊಂಡು ಸುಳ್ಳು ದೂರು ದಾಖಲಿಸಿದ್ದು ತನಿಖೆಯಿಂದ ಬಯಲಿಗೆ ಬಂದಿದೆ.

ಬೆಂಗಳೂರಿನ ಚಾಮರಾಜಪೇಟೆಯ ಅಗ್ರಿಕಲ್ಚರ್ ರೂರಲ್ ಡೆವಲ್‍ಪ್ಮೆಂಟ್ ಬ್ಯಾಂಕಿನ ವಾಹನದ ಚಾಲಕ ಚೇತನ ಎನ್.ವಿ. ಎಂಬುವವರು ಚಳಿಗಾಲ ಅಧಿವೇಶನದಲ್ಲಿ ಭಾಗವಹಿಸುವ ಸಲುವಾಗಿ ಬೆಂಗಳೂರಿನಿಂದ ಬುಧವಾರ ಬೆಳಗ್ಗೆ 7.45ಕ್ಕೆ ಬ್ಯಾಂಕಿನ ಬಲೆರೋ ವಾಹನ ಚಾಲನೆ ಮಾಡಿಕೊಂಡು ಬೆಳಗಾವಿಗೆ ಹೊರಟಿದ್ದಾರೆ.

 

ಸಂಜೆ 4.30ರ ವೇಳೆಗೆ ಶಿಗ್ಗಾವಿ ತಾಲೂಕಿನ ತಡಸ ಬಳಿಯ ಬಾರ್ ಒಂದರಲ್ಲಿ ಮದ್ಯ ಸೇವಿಸಿದ್ದಾನೆ. ಅಲ್ಲಿಂದ ಸಾರಾಯಿ ಅಮಲಿನಲ್ಲಿಯೇ ವಾಹನ ಚಲಾಯಿಸಿಕೊಂಡು ಬಂದು ಸ್ಟೀಲ್ ಬಾರ್‍ಗಳನ್ನು ತುಂಬಿಕೊಂಡು ಹೊರಟಿದ್ದ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆಸಿದ್ದಾನೆ.

ಈ ವೇಳೆ ಬಲೆರೋ ವಾಹನದ ಗಾಜು ಎಡಭಾಗದಲ್ಲಿ ಒಡೆದಿದೆ. ಆದರೆ ಹಿರಿಯ ಅಧಿಕಾರಿಗಳು ಬಯ್ಯುತ್ತಾರೆ ಎಂಬ ಭಯದಲ್ಲಿ ಚೇತನ್ ಕತೆ ಕಟ್ಟಿದ್ದಾರೆ.

ಸುವರ್ಣ ವಿಧಾನಸೌಧ ಬಳಿ ಕೆಲ ಕಿಡಿಗೇಡಿಗಳು ವಾಹನ ಅಡ್ಡಗಟ್ಟಿ ಕಲ್ಲು ತೂರಿ ಗಾಜು ಒಡೆದಿದ್ದಾರೆ, ಬಳಿಕ ತನ್ನ ಮೇಲೂ ಹಲ್ಲೆಗೆ ಯತ್ನಿಸಿದ್ದಾರೆ, ಹಲ್ಲೆ ಮಾಡಿದವರು ಮರಾಠಿ ಭಾಷೆಯಲ್ಲಿ ಮಾತಾಡುತ್ತಿದ್ದರು ಎಂದು ಹಿರೇಬಾಗೇವಾಡಿ ಠಾಣೆಯಲ್ಲಿ ದೂರು ನೀಡಿದ್ದಾರೆ.

ಕರ್ನಾಟಕ- ಮಹಾರಾಷ್ಟ್ರ ಗಡಿ ಸಮಸ್ಯೆ ಉಲ್ಬಣಗೊಂಡಿರುವ ಸಂದರ್ಭದಲ್ಲಿ ಇಂಥದ್ದೊಂದು ಪ್ರಕರಣದ ನಡೆದಿದ್ದು ಬೆಳಗಾವಿಗರನ್ನು ಅಕ್ಷರಶಃ ಬೆಚ್ಚಿಬೀಳಿಸಿತ್ತು. ಅಲ್ಲದೇ ಕಳೆದ ವರ್ಷ ಅಧಿವೇಶನದ ಸಂದರ್ಭದಲ್ಲಿ ಸರಕಾರಿ ವಾಹನಗಳ ಮೇಲೆ ಪುಂಡರು ಕಲ್ಲು ತೂರಿದ್ದರಿಂದ ಪೊಲೀಸರು ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದರು.

ಪ್ರಕರಣದ ತನಿಖೆ ನಡೆಸಿದ ಪೊಲೀಸರು ಚಾಲಕನನ್ನು ವಿಚಾರಣೆಗೆ ಒಳಪಡಿಸಲಾಗಿ ಆತ ಸುಳ್ಳು ದೂರು ದಾಖಲಿಸಿದ್ದು ತಿಳಿದುಬಂದಿದೆ. ಹಿರೇಬಾಗೇವಾಡಿ ಟೋಲ್ ನಾಕಾದಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮರಾದಲ್ಲಿಯೇ ವಾಹನದ ಗಾಜು ಒಡೆದಿರುವುದು ಸೆರೆಯಾಗಿದೆ.

ದೂರುದಾರನ ಆರೋಪದಂತೆ ಯಾರೂ ಕಲ್ಲು ತೂರಾಟ ನಡೆಸಿಲ್ಲ. ಯಾರೂ ಸಹ ವದಂತಿಗಳನ್ನು ನಂಬಬಾರದು. ಸುಳ್ಳು ದೂರು ನೀಡಿದ ವಾಹನ ಚಾಲಕನ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಬೆಳಗಾವಿ ಕಾನೂನು ಸುವ್ಯವಸ್ಥೆ ಡಿಸಿಪಿ ರವೀಂದ್ರ ಗಡಾದಿ ತಿಳಿಸಿದ್ದಾರೆ.

ಕೆಲವೇ ಗಂಟೆಗಳಲ್ಲಿ ಪ್ರಕರಣವನ್ನು ಪೊಲೀಸರು ಬಯಲು ಮಾಡಿದ್ದಾರೆ.

ಭೀಕರ ಕಾರು ಅಪಘಾತ: ಅಪಾಯದಿಂದ ಪಾರಾದ ಕರವೇ ಜಿಲ್ಲಾಧ್ಯಕ್ಷ

https://pragati.taskdun.com/terrible-car-accident-krv-district-president-escaped-unharmed/

ಎಂಇಎಸ್ ಗೇ ಉರುಳಾದ ಶಾ ಸಂಧಾನ; ಮಹಾಮೇಳಾವ ಮೇಲೆ ಅನಿಶ್ಚಿತತೆಯ ತೂಗು ಕತ್ತಿ

https://pragati.taskdun.com/uncertainty-hangs-over-the-mes-mahamelava/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button