ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಕೋಳಿ ಸಾಕಣೆ ಕೃಷಿಗೆ ಸಂಬಂಧಿಸಿದ ಚಟುವಟಿಕೆಯಾಗಿದ್ದು, ಅದನ್ನು ವಾಣಿಜ್ಯ ಚಟುವಟಿಕೆಯಾಗಿ ಎಂದು ಪರಿಗಣಿಸುವಂತಿಲ್ಲ. ಕರ್ನಾಟಕ ಗ್ರಾಮ ಸ್ವರಾಜ್ ಕಾಯಿದೆಯಡಿ ಯಾವುದೇ ರೀತಿಯ ತೆರಿಗೆ ವಿಧಿಸಲು ಗ್ರಾಮ ಪಂಚಾಯಿತಿಗಳಿಗೆ ಅಧಿಕಾರವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.
ಬೆಂಗಳೂರು ಉತ್ತರ ತಾಲೂಕಿನ ಸೊಂಡೇಕೊಪ್ಪದ ಕೆ. ನರಸಿಂಹಮೂರ್ತಿ ಎಂಬುವವರು ನಾಗಸಂದ್ರದಲ್ಲಿ 4 ಎಕರೆ ಜಮೀನು ಹೊಂದಿದ್ದು ಅಲ್ಲಿ ಕೋಳಿ ಸಾಕಣೆ ಕೇಂದ್ರ ತೆರೆದಿದ್ದರು. ಇದಕ್ಕಾಗಿ ಅವರು ಸ್ಥಳೀಯ ಗ್ರಾಮ ಪಂಚಾಯಿತಿಗೆ ಕೋಳಿ ಸಾಕಣೆ ಕೇಂದ್ರದ ಕಟ್ಟಡ ಹಾಗೂ ಅದಕ್ಕೆ ವಿದ್ಯುತ್ ಸಂಪರ್ಕಕ್ಕಾಗಿ ನಿರಾಕ್ಷೇಪಣಾ ಪತ್ರ ಪಡೆಯಲು ಸ್ಥಳೀಯ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿದ್ದರು.
ಆದರೆ ಈ ಕೋಳಿ ಸಾಕಣೆ ಕೇಂದ್ರ ನಿರ್ಮಿಸುವುದು ವಾಣಿಜ್ಯ ಚಟುವಟಿಕೆಯಾಗಿರುವುದರಿಂದ 1.3 ಲಕ್ಷ ರೂ. ಪಾವತಿ ಮಾಡಬೇಕೆಂದು ಗ್ರಾಮ ಪಂಚಾಯಿತಿ ಸೂಚಿಸಿತ್ತು. ನರಸಿಂಹಮೂರ್ತಿ ಅವರು 59,551 ರೂ. ಪಾವತಿಸಿ ಈ ರೀತಿ ತೆರಿಗೆ ವಿಧಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಹೈಕೋರ್ಟ್ ಮೆಟ್ಟಿಲೇರಿದ್ದರು.
ಆಕ್ಷೇಪಣಾ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರ ಏಕ ಸದಸ್ಯಪೀಠ ಅರ್ಜಿದಾರರಿಂದ ತೆರಿಗೆ ರೂಪದಲ್ಲಿ ಈಗಾಗಲೇ ಸಂಗ್ರಹಿಸಿರುವ 59,551 ರೂ.ಗಳನ್ನು ಹಿಂದಿರುಗಿಸಲು ಗ್ರಾಮ ಪಂಚಾಯಿತಿಗೆ ನಿರ್ದೇಶನ ನೀಡಿರುವ ಹೈಕೋರ್ಟ್ ಗ್ರಾಮ ಪಂಚಾಯಿತಿ ಈಗಾಗಲೇ ಜಾರಿ ಮಾಡಿದ್ದ ನೋಟಿಸ್ ಕೂಡ ರದ್ದುಪಡಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ