Latest

ಜನವರಿ 26 ರಿಂದ 5 ಜಿಲ್ಲೆಗಳಲ್ಲಿ ಗ್ರಾಮ ಸೇವಾ ಯೋಜನೆಗೆ ಚಾಲನೆ: ಬೊಮ್ಮಾಯಿ

ಗ್ರಾಮ ಪಂಚಾಯಿತಿ ಮಟ್ಟದಲ್ಲೇ ಆನ್ ಲೈನ್ ಮೂಲಕ ನಾಗರಿಕ ಸೇವೆಗಳು ಲಭ್ಯ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ನಾಗರಿಕ ಸೇವೆಗಳನ್ನು ಗ್ರಾಮ ಪಂಚಾಯಿತಿ ಹಂತದಲ್ಲಿಯೇ ಆನ್ ಲೈನ್ ಮೂಲಕ ಒದಗಿಸುವ ವಿನೂತನ “ಗ್ರಾಮ ಸೇವಾ” ಯೋಜನೆಯನ್ನು ಪ್ರಾಯೋಗಿಕವಾಗಿ ರಾಜ್ಯದ 5 ಜಿಲ್ಲೆಗಳಲ್ಲಿ ಮುಂಬರುವ ಗಣರಾಜ್ಯೋತ್ಸವ ಜನವರಿ 26 ರಿಂದ ಜಾರಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಘೋಷಿಸಿದರು.

ಅವರು ಇಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಏರ್ಪಡಿಸಲಾಗಿದ್ದ ಅಮೃತ ಗ್ರಾಮ ಪಂಚಾಯತ್ ಯೋಜನೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಅಭಿವೃದ್ಧಿ ಜನರ ಸುತ್ತ ಆಗಬೇಕು; ಜನರು ಅಭಿವೃದ್ಧಿ ಸುತ್ತ ಸುತ್ತುವಂತಾಗಬಾರದು. ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿಗಳು ಜನರಿಗೆ ವಿವಿಧ ಸೇವೆಗಳನ್ನು ಒದಗಿಸುವ ಗ್ರಾಮ ಸೇವಾ ಸಂಸ್ಥೆಯಾಗಬೇಕು. ಮನೆ ಬಾಗಿಲಿಗೆ ಸೌಲಭ್ಯಗಳು ತಲುಪಬೇಕು. ಈ ಆಶಯದೊಂದಿಗೆ ‘ಗ್ರಾಮ ಸೇವಾ ಯೋಜನೆ’ಯನ್ನು ಜಾರಿಗೊಳಿಸಲಾಗುವುದು. ಇದಕ್ಕೆ ಅಧಿಕಾರಿಗಳು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಮುಖ್ಯಮಂತ್ರಿಗಳು ಸೂಚಿಸಿದರು.

ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಹಾಗೂ ಅಂದಿನ ಗ್ರಾಮೀಣಾಭಿವೃದ್ಧಿ ಸಚಿವ ಅಬ್ದುಲ್ ನಝೀರ್ ಸಾಬ್ ರಾಜ್ಯದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯ ರೂವಾರಿಗಳು ಎಂದು ಮುಖ್ಯಮಂತ್ರಿಗಳು ಸ್ಮರಿಸಿದರು.

ಜನರ ಸಹಭಾಗಿತ್ವದಿಂದ ಮಾತ್ರ ಪ್ರಜಾ ಪ್ರಭುತ್ವ ಯಶಸ್ವಿಯಾಗಲು ಸಾಧ್ಯ. ಆದರೆ ಇಂದು ಜನರನ್ನು ಫಲಾನುಭವಿಗಳನ್ನಾಗಿಸಿದ್ದೇವೆ. ಅವರನ್ನು ಭಾಗೀದಾರರನ್ನಾಗಿಸಬೇಕಾಗಿದೆ. ಜನರೂ ಸಕ್ರಿಯವಾಗಿ ಭಾಗವಹಿಸಿದಾಗ ಮಾತ್ರ ಪ್ರಜಾಪ್ರಭುತ್ವ ಯಶಸ್ವಿಯಾಗುತ್ತದೆ ಎಂದು ಅವರು ಹೇಳಿದರು.

‘ ಪ್ರೋತ್ಸಾಹ ಧನ ‘

ಇಂದು ಉದ್ಘಾಟನೆಯಾಗಿರುವ ಅಮೃತ ಯೋಜನೆಯಡಿ 750 ಗ್ರಾಮ ಪಂಚಾಯಿತಿಗಳ ಸರ್ವಾಂಗೀಣ ಅಭಿವೃದ್ಧಿ ಮಾಡುವ ಗುರಿ ಹೊಂದಲಾಗಿದೆ. ಇದಕ್ಕಾಗಿ ಪ್ರತಿ ಪಂಚಾಯಿತಿಗೆ ಸರಾಸರಿ 3 ಕೋಟಿ ರೂ. ಗಳಂತೆ ಸುಮಾರು 2300 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಮಾರ್ಚ್ 31 ರೊಳಗೆ ಯೋಜನೆ ಪೂರ್ಣಗೊಳಿಸಿದ ಪಂಚಾಯಿತಿಗಳಿಗೆ 25 ಲಕ್ಷ ಪ್ರೋತ್ಸಾಹ ಧನ ನೀಡಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಎಲ್ಲ ಗ್ರಾಮ ಪಂಚಾಯಿತಿಗಳು ಇದನ್ನು ಪೂರ್ಣಗೊಳಿಸಿದರೆ ಮುಂದಿನ ವರ್ಷ 1500 ಪಂಚಾಯಿತಿಗಳಲ್ಲಿ ಈ ಕಾರ್ಯಕ್ರಮ ಕೈಗೆತ್ತಿಕೊಳ್ಳಲಾಗುವುದು ಎಂದು ಅವರು ನುಡಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆ ಜಲ ಜೀವನ್ ಮಿಷನ್ ಅನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ 2000 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಗ್ರಾಮಾಭಿವೃದ್ಧಿಯಾದಾಗ ಅಲ್ಲಿನ ಜೀವನ ಮಟ್ಟ ಸುಧಾರಿಸುತ್ತದೆ. ಗ್ರಾಮಗಳಲ್ಲಿ ಆರ್ಥಿಕ ಚಟುವಟಿಕೆ ಹೆಚ್ಚಾಗಬೇಕು. ಸ್ತ್ರೀಶಕ್ತಿ ಸ್ವಸಹಾಯ ಸಂಘಗಳು ಹಾಗೂ ಸಹಕಾರಿ ಸಂಸ್ಥೆಗಳಿಂದ ಇದು ಸಾಧ್ಯ. ಇಂದು ರಾಜ್ಯದ ತಲಾ ಆದಾಯಕ್ಕೆ ಶೇ. 25-30 ಜನಸಂಖ್ಯೆಯ ಕೊಡುಗೆ ಅತಿ ಹೆಚ್ಚು ಇದೆ. ಆದರೆ ಉಳಿದ ಜನರೂ ಹೆಚ್ಚಾಗಿ ಆರ್ಥಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ತಮ್ಮ ಆದಾಯ ಹೆಚ್ಚಿಸಿಕೊಳ್ಳುವುದಲ್ಲದೆ, ರಾಜ್ಯದ ತಲಾ ಆದಾಯ ಹೆಚ್ಚಳಕ್ಕೆ ಕೊಡುಗೆ ನೀಡುವಂತಾಗಬೇಕು ಎಂದು ಮುಖ್ಯಮಂತ್ರಿಗಳು ಆಶಿಸಿದರು.

ಗ್ರಾಮಾಭಿವೃದ್ಧಿಗಾಗಿ ಆತ್ಮವಿಶ್ವಾಸದಿಂದ ಕೆಲಸ ಮಾಡುವಂತೆ ಮುಖ್ಯಮಂತ್ರಿಗಳು ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಪಿ.ಡಿ.ಓಗಳಿಗೆ ಸಿಎಂ ಕರೆ ನೀಡಿದರು.

‘ ಡಿಜಿಟಲ್ ಸಂಪರ್ಕ ‘

ಅಮೃತ ಗ್ರಾಮ ಪಂಚಾಯತ್ ಯೋಜನೆಗೆ ಚಾಲನೆ ನೀಡಿದ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಗಿರಿರಾಜ್ ಸಿಂಗ್ ಅವರು ರಾಜ್ಯದ ಗ್ರಾಮ ಪಂಚಾಯಿತಿಗಳ ಕಾರ್ಯನಿರ್ವಹಣೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಎಲ್ಲ ಗ್ರಾಮ ಪಂಚಾಯಿತಿಗಳು 2024 ರೊಳಗೆ ಡಿಜಿಟಲ್ ಕನೆಕ್ಟಿವಿಟಿ ಹೊಂದಿರಬೇಕು ಎಂದು ಆಶಿಸಿದ ಅವರು, ರಾಜ್ಯದಲ್ಲಿಯೂ ಈ ಯೋಜನೆಯನ್ನು ಆದ್ಯತೆಯ ಮೇರೆಗೆ ಜಾರಿಗೊಳಿಸುವಂತೆ ಸೂಚಿಸಿದರು.

ಅಕ್ಟೋಬರ್ 2 ರಂದು ದೇಶಾದ್ಯಂತ ಗ್ರಾಮ ಪಂಚಾಯಿತಿಗಳು ಗ್ರಾಮ ಸಭೆ ನಡೆಸಿ, ನನ್ನ ಗ್ರಾಮ, ನನ್ನ ಪರಂಪರೆ ಎಂಬ ಘೋಷಣೆಯಡಿ ತಮ್ಮ ಗ್ರಾಮಕ್ಕಾಗಿ ಶ್ರಮಿಸಿದ ಹಿರಿಯರು, ವಿದ್ವಾಂಸರು, ಸ್ವಾತಂತ್ರ್ಯಹೋರಾಟಗಾರರು ಮೊದಲಾದ ಗಣ್ಯರನ್ನು ಸ್ಮರಿಸುವ ಕೆಲಸವಾಗಬೇಕು. ಅಕ್ಟೋಬರ್ 1 ರಿಂದ 15 ರ ವರೆಗೆ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಕರೆ ನೀಡಿದರು.

ಪಂಚಾಯಿತಿಗಳು ಸಬಲವಾದರೆ ದೇಶ ಸಬಲವಾಗುತ್ತದೆ. ಈ ನಿಟ್ಟಿನಲ್ಲಿ ಭಾರತ ಸರ್ಕಾರ ಗ್ರಾಮೀಣಾಭಿವೃದ್ಧಿಗೆ ಹೆಚ್ಚು ಅನುದಾನ ನೀಡುತ್ತಿದೆ. ಕರ್ನಾಟಕದಲ್ಲಿ 12 ಮತ್ತು 13ನೇ ಹಣಕಾಸು ಆಯೋಗದಡಿ 2008ರಿಂದ 2014 ರ ನಡುವೆ 3988_ ಕೋಟಿ ರೂ. ಅನುದಾನ ಒದಗಿಸಲಾಗಿತ್ತು. 14 ಮತ್ತು 15ನೇ ಹಣಕಾಸು ಆಯೋಗದಲ್ಲಿ ಇದು ಎರಡೂವರೆ ಪಟ್ಟು ಹೆಚ್ಚಾಗಿದ್ದು 9626 ಕೋಟಿ ರೂ. ಗಳಿಗೆ ಹೆಚ್ಚಿದೆ.

ಗ್ರಾಮ ಸ್ವರಾಜ್ ಅಭಿಯಾನದಡಿ 2008-2014ರ ವರೆಗೆ 35 ಕೋಟಿ, 2014 ರಿಂದ ಈ ವರೆಗೆ 135 ಕೊಟಿ ಒದಗಿಸಲಾಗಿದೆ.

ಮಹಾತ್ಮಾಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ರಾಜ್ಯದ ಗುರಿಯನ್ನು ಹೆಚ್ಚಿಸಲು ರಾಜ್ಯದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪಅವರು ಮಾಡಿದ ಮನವಿಗೆ ಸ್ಪಂದಿಸಿದ ಸಚಿವರು, ಈ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಸಕ ರಿಜ್ವಾನ್ ಅರ್ಷದ್ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ `ಯೋಜನೆಯಡಿ ತರಬೇತಿ ಪಡೆದ ನಾಲ್ವರು ಯುವತಿಯರಿಗೆ ಉದ್ಯೋಗ ಪ್ರಮಾಣ ಪತ್ರ ನೀಡಲಾಯಿತು. ಇದೇ ಸಂದರ್ಭದಲ್ಲಿ ಕಲಬುರಗಿಯಲ್ಲಿ ನಿರ್ಮಿಸಲಾಗಿರುವ ಅಬ್ದುಲ್ ನಝೀರ್ ಸಾಬ್ ಗ್ರಾಮೀಣಾಭಿವೃದ್ಧಿ ತರಬೇತಿ ಸಂಸ್ಥೆಯ ಪ್ರಾದೇಶಿಕ ತರಬೇತಿ ಕೇಂದ್ರವನ್ನು ಉದ್ಘಾಟಿಸಲಾಯಿತು.

ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ, ತೋಟಗಾರಿಕೆ, ಸಹಕಾರ ಸಚಿವ ಎಸ್.ಟಿ. ಸೋಮಶೇಖರ್, ಯೋಜನೆ ಮತ್ತು ಸಾಂಖ್ಯಿಕ ಸಚಿವ ಎನ್. ಮುನಿರತ್ನ, ಶಿಕ್ಷಣ ಸಚಿವ ಬಿ.ಸಿ. ನಾಗೇಶ್, ಅಭಿವೃದ್ಧಿ ಆಯುಕ್ತೆ ವಂದಿತಾ ಶರ್ಮ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಎಲ್ ಕೆ. ಅತೀಕ್, ಪ್ರಧಾನ ಕಾರ್ಯದರ್ಶಿ ಉಮಾ ಮಹಾದೇವನ್ ಮೊದಲಾದವರು ಸಮಾರಂಭದಲ್ಲಿ ಭಾಗವಹಿಸಿದ್ದರು.

ಬೆಳಗಾವಿ ಜಿಲ್ಲೆಯಲ್ಲಿ ಸಿಎಂ ಸರಣಿ ಕಾರ್ಯಕ್ರಮ -ಇಲ್ಲಿದೆ ಸಂಪೂರ್ಣ ವಿವರ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button