
ಪರಿಸರ ಮಾಲಿನ್ಯ ತಗ್ಗಬೇಕು, ಜನರಿಗೆ ಉತ್ತಮ ಸೇವೆ ಸಿಗಬೇಕು: ಡಿಸಿಎಂ ಡಿ.ಕೆ. ಶಿವಕುಮಾರ್
ಪ್ರಗತಿವಾಹಿನಿ ಸುದ್ದಿ:“ಪರಿಸರ ಮಾಲಿನ್ಯ ತಗ್ಗಬೇಕು, ಜನರಿಗೆ ಉತ್ತಮ ಸೇವೆ ಸಿಗಬೇಕು ಎಂದು ವಿಮಾನ ನಿಲ್ದಾಣದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಚಾಲನೆ ನೀಡಿದ್ದೇನೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-1 ರಲ್ಲಿ ರಿಫೆಕ್ಸ್ ಗ್ರೂಪ್ ವತಿಯಿಂದ ಕಾರ್ಯಾಚರಣೆ ನಡೆಸಲಿರುವ 170 ಎಲೆಕ್ಟ್ರಿಕ್ ಕಾರುಗಳಿಗೆ ಡಿಸಿಎಂ ಅವರು ಚಾಲನೆ ನೀಡಿದರು.
ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, “ರಿಫೆಕ್ಸ್ ಸಂಸ್ಥೆಯವರು ಬೆಂಗಳೂರಿನಲ್ಲಿ ಗ್ರೀನ್ ಟ್ಯಾಕ್ಸಿ ಸೇವೆ ಮೂಲಕ ವಿಮಾನ ನಿಲ್ದಾಣದ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಲು ಮುಂದಾಗಿದ್ದಾರೆ. ಸುಮಾರು 170 ಕಾರುಗಳನ್ನು ಸೇವೆಗೆ ನೀಡಿದ್ದಾರೆ. ಸಂಸ್ಥೆಯವರು ಈಗಾಗಲೇ 450ಕ್ಕೂ ಹೆಚ್ಚು ಕಾರುಗಳನ್ನು ಹೊಂದಿದ್ದು, ಇದರ ಸಂಖ್ಯೆ 600ರ ಗಡಿ ದಾಟಲಿದೆ ಎಂದು ಹೇಳಿದ್ದಾರೆ.
ಬೆಂಗಳೂರು ನಗರದಿಂದ ವಿಮಾನ ನಿಲ್ದಾಣಕ್ಕೆ ₹699 ಹಾಗೂ ವಿಮಾನ ನಿಲ್ದಾಣದಿಂದ ನಗರಕ್ಕೆ ಸಾಮಾನ್ಯ ಶುಲ್ಕ ವಿಧಿಸುವುದಾಗಿ ಹೇಳಿದ್ದಾರೆ. ಈ ಕ್ಷೇತ್ರದಲ್ಲಿ ಹೆಚ್ಚಿನ ಸ್ಪರ್ಧೆ ಇದೆ. ಇದರಿಂದ ಜನರಿಗೆ ಉತ್ತಮ ಸೇವೆ ಸಿಗಬೇಕು.
ಇದರ ಜತೆಗೆ ಪಿಂಕ್ ಟ್ಯಾಕ್ಸಿ ಪರಿಕಲ್ಪನೆಯಲ್ಲಿ ಮಹಿಳೆಯರ ಪ್ರಯಾಣಕ್ಕೆ ಹಾಗೂ ಸುರಕ್ಷತೆಗೆ ಟ್ಯಾಕ್ಸಿ ಮೀಸಲಿಡಲಾಗಿದೆ. ಈ ವಿಚಾರವನ್ನು ನನಗೆ ತಿಳಿಸಿ ಪ್ರೋತ್ಸಾಹ ನೀಡುವಂತೆ ಮನವಿ ಮಾಡಿದರು. ಹೀಗಾಗಿ ನಾನು ಈ ಪ್ರಯತ್ನಕ್ಕೆ ಚಾಲನೆ ನೀಡಿದೆ. ಸಂಸ್ಥೆಗೆ ಒಳ್ಳೆಯದಾಗಲಿ ಜನರಿಗೆ ಉತ್ತಮ ಸೇವೆ ಸಿಗಲಿ ಎಂದು ಸರ್ಕಾರದ ಪರವಾಗಿ ತುಂಬು ಹೃದಯದ ಶುಭಾಶಯ ಅರ್ಪಿಸುತ್ತೇನೆ” ಎಂದು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ