
ಪ್ರಗತಿವಾಹಿನಿ ಸುದ್ದಿ: ಗೃಹಜ್ಯೋತಿ ಫಲಾನುಭವಿಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ. ಬೆಸ್ಕಾಂ ವ್ಯಾಪ್ತಿಯ ಗೃಹಜ್ಯೋತಿ ಫಲಾನುಭವಿಗಳ ಮರು ಸಮೀಕ್ಷೆಗೆ ಅವಧಿ ವಿಸ್ತರಿಸಲಾಗಿದೆ.
ಫಲಾನುಭವಿಗಳ ಮರು ಸಮೀಕ್ಷೆ ಸಂದರ್ಭದಲ್ಲಿ ಮನೆಗೆ ಬೀಗ ಹಾಕಿದ, ಖಾಲಿ ಇರುವ ಮನೆಗಳು ಹಾಗೂ ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದ ಗ್ರಾಹಕರು ವಿಸ್ತರಿಸುದ ಅವಧಿಯೊಳಗೆ ಸಮೀಪದ ಬೆಸ್ಕಾಂ ಕಚೇರಿಗೆ ಖುದ್ದಾಗಿ ತೆರಳಿ ದಾಖಲೆ ಸಲ್ಲಿಸಲು ಸರ್ಕಾರ ಅವಕಾಶ ಕಲ್ಪಿಸಿದೆ.
ಬೆಸ್ಕಾಂ ವ್ಯಾಪ್ತಿಯ ಗೃಹಜ್ಯೋತಿ ಫಲಾನುಭವಿಗಳ ಮರು ಸಮೀಕ್ಷೆಗೆ ಅಕ್ಟೋಬರ್ 31ರವರೆಗೆ ಅವಧಿ ವಿಸ್ತರಿಸಲಾಗಿದೆ. ಬೆಸ್ಕಾಂ ವ್ಯಾಪ್ತಿಯ ಎಂಟು ಜಿಲ್ಲೆಗಳಲ್ಲಿನ ಭಾಗ್ಯಜ್ಯೋತಿ, ಕುಟೀರ ಜ್ಯೋತಿ, ಅಮೃತ ಜ್ಯೋತಿ ಯೋಜನೆಯ ಗ್ರಾಹಕರು ಸೇರಿದಂತೆ 74.29 ಲಕ್ಷ ಗ್ರಾಹಕರು ಗೃಹಜ್ಯೋತಿ ಫಲಾನುಭವಿಗಳಿದ್ದಾರೆ. ಇವುಗಳ ಪೈಕಿ 72.40 ಲಕ್ಷ ಗ್ರಾಹಕರ ಸಮೀಕ್ಷೆ ಅಕ್ಟೋಬರ್ 14ಕ್ಕೆ ಪೂರ್ಣಗೊಂಡಿದೆ. ಸಮೀಕ್ಷೆ ವೇಳೆ ಲಭ್ಯವಿಲ್ಲದ ಸುಮಾರು 16.37 ಲಕ್ಷ ಗ್ರಾಹಕರಿದ್ದಾರೆ. ಈ ಗ್ರಾಹಕರಿಗೆ ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಅಂತಿಮ ಅವಕಾಶ ಕಲ್ಪಿಸುವಂತೆ ರಾಜ್ಯ ಸರ್ಕಾರಕ್ಕೆ ಬೆಸ್ಕಾಂ ಮನವಿ ಮಾಡಿದ್ದು, ನಂತರ ಗೃಹಜ್ಯೋತಿ ಫಲಾನುಭವಿಗಳ ಮರು ಸಮೀಕ್ಷೆ ಅವಧಿಯನ್ನು ಅಕ್ಟೋಬರ್ 31ರವರೆಗೆ ವಿಸ್ತರಿಸಿ ಸರ್ಕಾರ ಆದೇಶಿಸಿದೆ.
ಸಮೀಕ್ಷೆಯ ವೇಳೆ 16.09 ಲಕ್ಷ ಫಲಾನುಭವಿಗಳ ಮನೆಗಳಿಗೆ ಬೀಗ ಹಾಕಿರುವುದು, 28,519 ಮನೆಗಳು ಖಾಲಿ ಇರುವುದನ್ನು ಗುರುತಿಸಲಾಗಿದೆ. ಈ ಗ್ರಾಹಕರು ಅಕ್ಟೋಬರ್ 31ರೊಳಗೆ ಖುದ್ದಾಗಿ ಬೆಸ್ಕಾಂ ಉಪ ವಿಭಾಗ ಕಚೇರಿಗೆ ತೆರಳಿ ದಾಖಲೆ ಸಲ್ಲಿಸಬೇಕು. ದಾಖಲೆ ಪರಿಶೀಲನೆಗೆ ಇದು ಕೊನೆಯ ಅವಕಾಶವಾಗಿದೆ ಎಂದು ಬೆಸ್ಕಾಂ ತಿಳಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




