*ಲಾಡ್ಜ್ನಲ್ಲಿ ಪತ್ನಿಯ ಭೀಕರ ಹತ್ಯೆ*: *ಕೊಲೆ ಬಳಿಕ ಠಾಣೆಗೆ ತೆರಳಿ ಶರಣಾದ ಪತಿ!*

ಪ್ರಗತಿವಾಹಿನಿ ಸುದ್ದಿ: ಅನೈತಿಕ ಸಂಬಂಧದ ಶಂಕೆ ಹಿನ್ನೆಲೆಯಲ್ಲಿ ಪತ್ನಿಯನ್ನು ಖಾಸಗಿ ಲಾಡ್ಜ್ನಲ್ಲಿ ಬರ್ಬರವಾಗಿ ಹತ್ಯೆಗೈದ ಪತಿಯೊಬ್ಬ ಕೊಲೆ ಬಳಿಕ ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ದಂಪತಿ ನಡುವೆ ಮೊದಲಿನಿಂದಲೂ ಕೌಟುಂಬಿಕ ಕಲಹ ನಡೆಯುತ್ತಿದ್ದು, ಸಂಧಾನದ ಮೂಲಕ ಮತ್ತೆ ಒಂದಾಗುವ ಪ್ರಯತ್ನವೂ ನಡೆದಿತ್ತು. ಆದರೆ, ಲಾಡ್ಜ್ನಲ್ಲಿ ಮತ್ತೆ ಜಗಳ ಉಂಟಾಗಿ ಕೊಲೆಯಲ್ಲಿ ಅಂತ್ಯವಾಗಿದೆ.
ಕೊಲೆಯಾದ ಮಹಿಳೆ ರೂಬಿಯಾ ತಾಜ್ (29) ಎಂದು ಗುರುತಿಸಲಾಗಿದೆ. ಬೈಕ್ ಮೆಕ್ಯಾನಿಕ್ ಶೇಕ್ ನವೀದ್ ಬಾಷಾ ಅಲಿಯಾಸ್ ನವೀನ್ ಪಾಷಾ ಜೊತೆ 13 ವರ್ಷಗಳ ಹಿಂದೆ ವಿವಾಹವಾಗಿದ್ದ ರೂಬಿಯಾ ಅವರಿಗೆ ನಾಲ್ವರು ಮಕ್ಕಳಿದ್ದಾರೆ. ಇತ್ತೀಚೆಗೆ ದಂಪತಿ ನಡುವೆ ಕೌಟುಂಬಿಕ ಕಲಹ ಮತ್ತು ಅನೈತಿಕ ಸಂಬಂಧದ ಶಂಕೆ ಹಿನ್ನೆಲೆಯಲ್ಲಿ ಗಲಾಟೆ ನಡೆದಿತ್ತು. ಪರಿಣಾಮ ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಮೃತ ಮಹಿಳೆ ಕರ್ನಾಟಕದ ಕೋಲಾರ ಜಿಲ್ಲೆಯ ಮುಳಬಾಗಿಲು ಮೂಲದವರಾಗಿದ್ದು ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ಮದನಪಲ್ಲೆಯಲ್ಲಿ ಘಟನೆ ನಡೆದಿದೆ.
ಸಂಬಂಧಿಕರು ಮಧ್ಯಸ್ಥಿಕೆ ವಹಿಸಿ ದಂಪತಿಯನ್ನು ಮತ್ತೆ ಒಂದಾಗಿಸಲು ಪ್ರಯತ್ನಿಸಿದ್ದರು. ಈ ಹಿನ್ನೆಲೆಯಲ್ಲಿ ಬುಧವಾರ ನವೀದ್ ಪಲಮನೇರಿಗೆ ತೆರಳಿ ಪತ್ನಿಯನ್ನು ಭೇಟಿಯಾಗಿದ್ದ. ಬಳಿಕ ಇಬ್ಬರೂ ಚಿತ್ತೂರಿನಲ್ಲಿ ಶಾಪಿಂಗ್ ಮಾಡಿದ್ದು, ತಡರಾತ್ರಿಯಾದ ಕಾರಣ ಮದನಪಲ್ಲೆಯ ಖಾಸಗಿ ಲಾಡ್ಜ್ನಲ್ಲಿ ಕೊಠಡಿ ಪಡೆದು ತಂಗಿದ್ದರು.
ಲಾಡ್ಜ್ನಲ್ಲಿ ತಂಗಿದ್ದ ವೇಳೆ ಮತ್ತೆ ಅನೈತಿಕ ಸಂಬಂಧದ ವಿಚಾರವಾಗಿ ದಂಪತಿ ನಡುವೆ ತೀವ್ರ ವಾಗ್ವಾದ ನಡೆದಿದೆ ಎನ್ನಲಾಗಿದೆ. ಈ ವೇಳೆ ಆಕ್ರೋಶಗೊಂಡ ನವೀದ್, ಬಿಯರ್ ಬಾಟಲಿಯಿಂದ ಪತ್ನಿಯ ತಲೆಗೆ ಹೊಡೆದು, ಬಳಿಕ ಒಡೆದ ಬಾಟಲಿಯಿಂದ ಗಂಟಲು ಕೊಯ್ದು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಬಳಿಕ ಗುರುವಾರ ಬೆಳಿಗ್ಗೆ ನವೀದ್ ನೇರವಾಗಿ ಮದನಪಲ್ಲೆ ಒನ್ ಟೌನ್ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಪೊಲೀಸರು ಲಾಡ್ಜ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




