*ಗೃಹಲಕ್ಷ್ಮೀ ಯೋಜನೆ: ಅರ್ಜಿ ಸಲ್ಲಿಸಲು ಹಣ ಪಡೆದ ಗ್ರಾಮ ಒನ್ ಸಿಬ್ಬಂದಿ; ಲಾಗಿನ್ ಐಡಿ ರದ್ದು* *ಅಕ್ರಮ ಸಹಿಸುವುದಿಲ್ಲ – ಲಕ್ಷ್ಮೀ ಹೆಬ್ಬಾಳಕರ್ ಎಚ್ಚರಿಕೆ*
ಪ್ರಗತಿವಾಹಿನಿ ಸುದ್ದಿ; ಬಾಗಲಕೋಟೆ: ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ರಾಜ್ಯಾದ್ಯಂತ ಆರಂಭವಾಗಿದ್ದು, ಉಚಿತವಾಗಿ ಅರ್ಜಿ ಸಲ್ಲಿಕೆ ಇದ್ದರೂ ಅರ್ಜಿ ಸಲ್ಲಿಕೆಗೆ ಗ್ರಾಮ ಒನ್ ಸಿಬ್ಬಂದಿಗಳು ಹಣ ಪಡೆದ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಶೂರ್ಪಾಲಿ ಗ್ರಾಮದಲ್ಲಿ ಗ್ರಾಮ್ ಒನ್ ಸಿಬ್ಬಂದಿಗಳು ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಕೆಗೆ ಹಣ ಪಡೆದಿದ್ದಾರೆ ಎಂದು ಸಾರ್ವಜನಿಕರು ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಮ್ ಒನ್ ಸಿಬ್ಬಂದಿಯ ಲಾಗಿನ್ ಐಡಿ ರದ್ದುಗೊಳಿಸಿ ಕ್ರಮ ಕೈಗೊಳ್ಳಲಾಗಿದೆ.
ಗ್ರಾಮ್ ಒನ್ ಸಿಬ್ಬಂದಿ ದಾನಯ್ಯ ಮಠಪತಿ ಲಾಗಿನ್ ಐಡಿಯನ್ನು ಬಾಗಲಕೋಟೆ ಜಿಲ್ಲಾಡಳಿತ ರದ್ದುಗೊಳಿಸಿದೆ. ಇದೇ ವೇಳೆ ನಂದಗಾಂವ್ ಗ್ರಾಮದ ಗ್ರಾಮ್ ಒನ್ ಸಿಬ್ಬಂದಿ ಸಿದ್ದಪ್ಪ ಪೂಜಾರಿ ಲಾಗಿನ್ ಐಡಿಯನ್ನು ಸಹ ಡಿಸೆಬಲ್ ಮಾಡಲಾಗಿದೆ.
ಗ್ರಾಮ್ ಒನ್ ಸಿಬ್ಬಂದಿಗಳು ಹಣ ಪಡೆದ ಬಗ್ಗೆ ಸಾರ್ವಜನಿಕರು ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ವಿಡಿಯೋ ವೈರಲ್ ಆಗಿತ್ತು. ವಿಡಿಯೋ ಅಧರಿಸಿ ಸಿಬ್ಬಂದಿಗಳ ಲಾಗಿನ್ ಐಡಿ ರದ್ದುಪಡಿಸಲಾಗಿದೆ ಎಂದು ತಿಳಿದುಬಂದಿದೆ.
ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಗೃಹ ಲಕ್ಷ್ಮೀ ಯೋಜನೆಯಲ್ಲಿ ಯಾವುದೇ ರೀತಿಯ ಅವ್ಯವಹಾರ, ಅಕ್ರಮವನ್ನು ಸರಕಾರ ಸಹಿಸುವುದಿಲ್ಲ. ಅಂತವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವುದಕ್ಕೂ ಹಿಂಜರಿಯುವುದಿಲ್ಲ
-ಲಕ್ಷ್ಮೀ ಹೆಬ್ಬಾಳಕರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸಚಿವರು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ