Kannada NewsKarnataka NewsLatestPolitics

*ಗೃಹ ಲಕ್ಷ್ಮಿ ಯೋಜನೆಗೆ ಅಗತ್ಯ ಸಿದ್ಧತೆ; ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ಸಚಿವರು*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳಲ್ಲಿ ಒಂದಾದ ಗೃಹ ಲಕ್ಷ್ಮಿ ಯೋಜನೆಯನ್ನು ಸೂಕ್ತ ರೀತಿಯಲ್ಲಿ ಫಲಾನುಭವಿಗಳಿಗೆ ತಲುಪಿಸುವ ಕೆಲಸವಾಗಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದರು.

ಗೃಹ ಲಕ್ಷ್ಮಿ ಯೋಜನೆಗೆ ಜುಲೈ 19 ರಂದು ಚಾಲನೆ ಸಿಗಲಿದ್ದು, ಈ ಹಿನ್ನೆಲೆಯಲ್ಲಿ ಇಂದು ವಿಕಾಸಸೌಧದಲ್ಲಿ ಇಲಾಖೆಯ ಅಧಿಕಾರಿಗಳೊಂದಿಗೆ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ಸಚಿವರು ವಿಡಿಯೋ ಸಂವಾದ ನಡೆಸಿದರು.

ಗೃಹ ಲಕ್ಷ್ಮಿ ಯೋಜನೆಯ ಫಲಾನುಭವಿಗಳ ಸಮರ್ಪಕ ನೋಂದಣಿಗಾಗಿ ಸೂಕ್ತ ಸಿದ್ಧತೆ ಕೈಗೊಳ್ಳಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು. ನೋಂದಣಿ ಸ್ಥಳದಲ್ಲಿ ಅಗತ್ಯ ವ್ಯವಸ್ಥೆ ಕೈಗೊಳ್ಳಬೇಕು ಹಾಗೂ ಯಾವುದೇ ಗೊಂದಲಗಳಿಗೆ ಅನುವು ಮಾಡಿಕೊಡಬಾರದು. ಸುಗಮ ನೋಂದಣಿಗೆ ಅನುಕೂಲವಾಗುವಂತೆ ಅಗತ್ಯವಿರುವ ಕಂಪ್ಯೂಟರ್, ಇಂಟರ್‌ನೆಟ್ ಸಂಪರ್ಕ ಸೇರಿದಂತೆ ಎಲ್ಲ ರೀತಿಯ ಸಿದ್ಧತೆಗಳನ್ನು ಅಧಿಕಾರಿಗಳು ಮಾಡಿಕೊಳ್ಳಬೇಕು ಎಂದು ಸಚಿವರು ಆದೇಶಿಸಿದರು.

ನೋಂದಣಿಗೆ ಆಗಮಿಸುವ ಫಲಾನುಭವಿಗಳಿಗೆ ಅನುಕೂಲ ಕಲ್ಪಿಸಬೇಕು. ಮಳೆಗಾಲ ಇರುವುದರಿಂದ ಸರದಿಯಲ್ಲಿ ನಿಲ್ಲಲು ಅನುಕೂಲವಾಗುವಂತೆ ವ್ಯವಸ್ಥೆ ಕಲ್ಪಿಸಬೇಕು. ನೋಂದಣಿ ಕೇಂದ್ರಗಳಲ್ಲಿ ಸ್ಥಳೀಯ ಪಿಡಿಒ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳನ್ನು ನಿಯೋಜಿಸಬೇಕು ಎಂದರು. ಇದರಿಂದ ನೋಂದಣಿ ಪ್ರಕ್ರಿಯೆ ಮೇಲ್ವಿಚಾರಣೆ ಕೂಡ ಸುಗಮವಾಗಲಿದ್ದು, ಪ್ರತಿ ನೋಂದಣಿ ಕೇಂದ್ರಗಳಲ್ಲಿ ಸೂಕ್ತ ಭದ್ರತೆ ಕಲ್ಪಿಸಬೇಕು ಎಂದು ಹೇಳಿದರು.

ಜುಲೈ 19 ರಂದು ಸಂಜೆ 5 ಗಂಟೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ವಿಧಾನಸೌಧದ ಬಾಂಕ್ವೆಟ್ ಹಾಲ್‌ನಲ್ಲಿ ಯೋಜನೆಗೆ ಚಾಲನೆ ನೀಡಲಿದ್ದಾರೆ. ಆ ಬಳಿಕ ಮರು ದಿನ ರಾಜ್ಯಾದ್ಯಂತ ಗೃಹ ಲಕ್ಷ್ಮಿ ಫಲಾನುಭವಿಗಳ ನೋಂದಣಿ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿಸಿದರು.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button