*ಗೃಹಲಕ್ಷ್ಮೀ ಯೋಜನೆ ನೋಂದಣಿ ಮಾಡಿಸುತ್ತೇನೆ ಎಂದು ವೃದ್ಧೆಗೆ ಮೋಸ; ಚಿನ್ನದ ಸರ ಕದ್ದು ಎಸ್ಕೇಪ್ ಆದ ಕಳ್ಳ*
ಪ್ರಗತಿವಾಹಿನಿ ಸುದ್ದಿ; ರಾಮನಗರ: ಗೃಹಲಕ್ಷ್ಮೀ ಯೋಜನೆಯ ಹಣ ಬರುವಂತೆ ಸಹಾಯ ಮಾಡುತ್ತೇನೆ ನೋಂದಣಿ ಮಾಡಿಸಿಕೊಡುತ್ತೇನೆ ಎಂದು ಹೇಳಿ ವ್ಯಕ್ತಿಯೋರ್ವ ವೃದ್ಧೆಗೆ ವಂಚಿಸಿ, ಸರ ಕದ್ದು ಪರಾರಿಯಾಗಿರುವ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ನಡೆದಿದೆ.
ಹಾರೋಕೊಪ್ಪದ ಸಾವಿತ್ರಮ್ಮ (62) ವಂಚನೆಗೊಳಗಾದ ಮಹಿಳೆ. ಸಾವಿತ್ರಮ್ಮ ಅವರ 40 ಗ್ರಾಂ ಚಿನ್ನದ ಸರ ಕದ್ದು ಕಳ್ಳ ಪರಾರಿಯಾಗಿದ್ದಾನೆ.
ಮಂಡ್ಯ ಆಸ್ಪತ್ರೆಗೆ ದಾಖಲಾಗಿದ್ದ ಪುತ್ರನನ್ನು ನೋಡಲು ಬಂದಿದ್ದ ವೃದ್ಧೆ ಸಾವಿತ್ರಮ್ಮ, ಮಂಡ್ಯದಿಂದ ಚನ್ನಪಟ್ಟಣಕ್ಕೆ ಬಸ್ ನಲ್ಲಿ ಬಂದು ಇಳಿದಿದ್ದರು. ಈ ವೇಳೆ ಸಾವಿತ್ರಮ್ಮ ಅವರಿಗೆ ಪರಿಚಯಸ್ಥರಂತೆ ನಟಿಸಿದ್ದ ಅಪರಿಚಿತ ವ್ಯಕ್ತಿ, ಗೃಹಲಕ್ಷ್ಮೀ ಯೋಜನೆ ಹಣ ಬರುವಂತೆ ಮಾಡಿಸುತ್ತೇನೆ ಎಂದು ನಂಬಿಸಿದ್ದ. ವೈದ್ಯರು ಸಹಿಹಾಕಬೇಕು ಎಂದು ಆಸ್ಪತ್ರೆ ಬಳಿ ಕರೆದೊಯ್ದಿದ್ದ ವಂಚಕ, ಕತ್ತಿನಲ್ಲಿದ್ದ ಸರ ನೋಡಿದರೆ ವೈದ್ಯರು ಸಹಿ ಹಾಕಲ್ಲ ತೆಗೆಯಿರಿ ಎಂದು ಹೇಳಿದ್ದ.
ಇದಕ್ಕೆ ಚಿನ್ನದ ಸರ ತೆಗೆದು ಸಾವಿತ್ರಮ್ಮ ತಮ್ಮ ಪರ್ಸ್ ನಲ್ಲಿ ಇಟ್ಟುಕೊಂಡಿದ್ದರು. ವೃದ್ಧೆಗೆ ಗೊತ್ತಾಗದಂತೆ ಪರ್ಸ್ ನಿಂದ ಚಿನ್ನದ ಸರವನ್ನು ವಂಚಕ ಎಗರಿಸಿದ್ದಾನೆ. ನಂತರ ಸಾವಿತ್ರಮ್ಮ ಅವರನ್ನು ಅಂಚೆ ಕಚೇರಿ ಬಳಿ ಕರೆತಂದು ಕೂರಿಸಿ ಪರಾರಿಯಾಗಿದ್ದಾನೆ. ಎಷ್ಟುಹೊತ್ತಾದರೂ ವ್ಯಕ್ತಿ ಬರದಿದ್ದನ್ನು ಗಮನಿಸಿ ಸಾವಿತ್ರಮ್ಮಗೆ ಅನುಮಾನ ಬಂದು ಪರ್ಸ್ ತೆಗೆದು ನೋಡಿದ್ದಾರೆ. ಚಿನ್ನದ ಸರ ಕಳ್ಳತನವಾಗಿರುವುದು ಗೊತ್ತಾಗಿದೆ. ಗಾಬರಿಯಾದ ಸಾವಿತ್ರಮ್ಮ ಚನ್ನಪಟ್ಟಣ ಠಾಣೆಯಲ್ಲಿ ದೂರು ನೀಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ