ಸಂಚಾರ ನಿಯಮ ಉಲ್ಲಂಘನೆ ದಂಡಕ್ಕೂ ಗುಜರಾತ್ ಮಾದರಿ?
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –
ಸಂಚಾರ ನಿಯಮ ಉಲ್ಲಂಘನೆಗೆ ದಂಡ ವಿಧಿಸುವ ನಿಯಮಾವಳಿಯಲ್ಲಿ ಕೇಂದ್ರ ಸರಕಾರ ತಂದಿರುವ ಬದಲಾವಣೆ ಜನಸಾಮಾನ್ಯರನ್ನು ಕಂಗೆಡಿಸಿದೆ. ವಾಹನವನ್ನು ರಸ್ತೆಗಿಳಿಸುವುದಕ್ಕೇ ಹೆದರುವಂತಾಗಿದೆ.
ಎಲ್ಲ ದಾಖಲೆಗಳಿದ್ದರೂ ಇನ್ನೇನು ತಪ್ಪು ಕಂಡುಹಿಡಿಲಾಗುತ್ತದೆಯೋ… ಎಷ್ಟು ದಂಡ ತೆರಬೇಕಾಗುತ್ತದೆಯೋ ಎನ್ನುವ ಭಯ ಕಾಡುವಂತಾಗಿದೆ. ಒಮ್ಮೆಲೆ ಹತ್ತಾರು ಪಟ್ಟು ದಂಡದ ಪ್ರಮಾಣ ಹೆಚ್ಚಿಸಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ.
ಇದೀಗ ಕೇಂದ್ರ ಸಾರಿಗೆ ಸಚಿವರು, ದಂಡ ನಿರ್ಧರಿಸುವ ಅಧಿಕಾರ ರಾಜ್ಯಗಳಿಗಿದೆ, ಆದರೆ ಮುಂದಿನ ಅನಾಹುತಕ್ಕೆ ರಾಜ್ಯವೇ ಹೊಣೆಯಾಗಲಿದೆ ಎಂದಿದ್ದಾರೆ.
ಸಂಚಾರ ನಿಯಮ ಉಲ್ಲಂಘಿಸಿ ವಾಹನ ಚಲಾಯಿಸುವುದರಿಂದ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ. ಇದಕ್ಕೆ ಕಡಿವಾಣ ಹಾಕಲೆಂದೇ ದಂಡದ ಮೊತ್ತ ಹೆಚ್ಚಿಸಲಾಗಿದೆ. ಬೇರೆ ಬೇರೆ ದೇಶಗಳಲ್ಲಿ ಇರುವ ದರವನ್ನು ಅಧ್ಯಯನ ಮಾಡಿ ಜಾರಿಗೊಳಿಸಲಾಗಿದೆ. ಇಷ್ಟಾಗ್ಯೂ ರಾಜ್ಯ ಸರಕಾರ ನಿರ್ಧಾರ ತೆಗೆದುಕೊಳ್ಳಬಹುದು. ಇದು ಆದಾಯತರುವ ಯೋಜನೆಯೇನಲ್ಲ ಎಂದು ನಿತಿನ್ ಗಡಕರಿ ತಿಳಿಸಿದ್ದಾರೆ.
ಗುಜರಾತ್ ಮಾದರಿ
ಕರ್ನಾಟಕದಲ್ಲಿ ಸಂಚಾರ ನಿಯಮ ಉಲ್ಲಂಘಿಸುವವರಿಗೆ ಹಾಕಲಾಗುತ್ತಿರುವ ದಂಡದ ಪ್ರಮಾಣವನ್ನು ಕಡಿಮೆ ಮಾಡಲಾಗುವುದು ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ. ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ಇಳಿಕೆ ಮಾಡಿರುವ ಪ್ರಮಾಣವನ್ನು ತಿಳಿದುಕೊಂಡು ಕರ್ನಾಟಕದಲ್ಲಿ ತಿದ್ದುಪಡಿ ತರಲಾಗುವುದು ಎಂದಿದ್ದಾರೆ.
ಗುಜರಾತ್ ನಲ್ಲಿ ಲೈಸೆನ್ಸ್ ಇಲ್ಲದೆ ಗಾಡಿ ಓಡಿಸಿದರೆ 2000 ರೂ. ದಂಡವಿದೆ. ಈಗಿನ ನಿಯಮಾವಳಿಯಲ್ಲಿ 5000 ರೂ. ಇದೆ. ಹೆಲ್ಮೆಟ್ ಇಲ್ಲದೆ ಗಾಡಿ ಓಡಿಸಿದರೆ ಪ್ರಸ್ತುತ 1000 ರೂ ಇದ್ದು, ಅದನ್ನು ಗುಜರಾತ್ ನಲ್ಲಿ 500 ರೂ.ಗೆ ಇಳಿಸಲಾಗಿದೆ. ಕರ್ನಾಟಕದಲ್ಲೂ ಗುಜರಾತ್ ಮಾದರಿಯ ದಂಡದ ನಿಯಮವನ್ನೇ ಜಾರಿಗೆ ತರಲು ಚಿಂತನೆ ನಡೆದಿದೆ.
ಉದ್ದೇಶ ಪೂರ್ವಕ ತಪ್ಪಿಗೆ ದಂಡ ಇರಲಿ
ದಂಡ ಹೆಚ್ಚಳ ಮಾಡುವುದಕ್ಕೆ ನಮ್ಮ ವಿರೋಧವಿಲ್ಲ, ಮಾಡಲೇಬೇಕು. ಆದರೆ ಉದ್ದೇಶಪೂರ್ವಕವಾಗಿ ಮಾಡುವ ತಪ್ಪುಗಳಿಗೆ ಹೆಚ್ಚಿನ ದಂಡ ವಿಧಿಸಬೇಕು. ಆಕಸ್ಮಿಕವಾಗಿ ಆಗುವ ತಪ್ಪುಗಳಿಗೆ ದಂಡ ಕಡಿಮೆ ಇರಲಿ ಎನ್ನುವುದು ಜನಸಾಮಾನ್ಯರ ಅಭಿಪ್ರಾಯ.
ಲೈಸನ್ಸ ಮಾಡಿಸದೆ ಗಾಡಿ ಓಡಿಸಿದರೆ ದಂಡ ದುಪ್ಪಟ್ಟು ಹಾಕಲಿ. ಆದರೆ ಲೈಸೆನ್ಸ್ ಮರೆತು ಬಿಟ್ಟು ಹೋದರೆ ದೊಡ್ಡ ಮೊತ್ತದ ದಂಡ ಹಾಕುವುದು ಸರಿಯಲ್ಲ. ಇನ್ಸೂರೆನ್ಸ್ ಹಣ ತುಂಬದೆ ವಾಹನ ಚಲಾಯಿಸಿದರೆ ದೊಡ್ಡ ಪ್ರಮಾಣದಲ್ಲೇ ದಂಡ ಹಾಕಲಿ. ಆದರೆ ಇನ್ಸೂರೆನ್ಸ್ ದಾಖಲೆ ವಾಹನದಲ್ಲಿ ಇಟ್ಟುಕೊಂಡಿಲ್ಲ ಎನ್ನುವ ಕಾರಣಕ್ಕೆ ಹೆಚ್ಚು ದಂಡ ಹಾಕಬಾರದು. ಇವೆಲ್ಲ ಉದ್ದೇಶಪೂರ್ವಕ ಮಾಡುವ ತಪ್ಪುಗಳಲ್ಲ. ಇಂತದಕ್ಕೆ ವಿನಾಯಿತಿ ನೀಡಬೇಕು ಎನ್ನುವುದು ಸಾರ್ವಜನಿಕರ ಅಭಿಪ್ರಾಯ.
ಬೇಕೆಂದೇ ಏಕಮುಖ ಸಂಚಾರದಲ್ಲಿ ವಾಹನ ಓಡಿಸುವವರಿಗೆ, ಸಾಮರ್ಥ್ಯಕ್ಕಿಂತ ಹೆಚ್ಚು ಜನರನ್ನು ಹೇರಿಕೊಂಡು ಹೋಗುವುದಕ್ಕೆ ಹೆಚ್ಚಿನ ದಂಡ ವಿಧಿಸಬೇಕು ಎನ್ನುವುದು ಸಾಮಾನ್ಯ ಜನರ ಅಭಿಪ್ರಾಯ.
ಒಟ್ಟಾರೆ, ಸಂಚಾರ ವ್ಯವಸ್ತೆ ಸುಗಮಗೊಳಿಸುವ ಉದ್ದೇಶದಿಂದ ಜಾರಿಗೆ ತಂದಿರುವ ದಂಡದ ನಿಯಮದ ಕುರಿತು ಸಾರ್ವಜವಿಕರಲ್ಲಿ ಪರ-ವಿರೋಧಿ ಅಭಿಪ್ರಾಯಗಳಿರುವುದಂತೂ ನಿಜ.
(ಪ್ರಗತಿವಾಹಿನಿ ಸುದ್ದಿಗಳನ್ನು ಎಲ್ಲರಿಗೂ, ಬೇರೆ ಬೇರೆ ಗ್ರುಬೃಪ್ ಗಳಿಗೆ ಶೇರ್ ಮಾಡಿ)
(ನಿಮ್ಮ ಅಭಿಪ್ರಾಯಗಳನ್ನು ಇ ಮೇಲ್ ([email protected]) ಅಥವಾ ವಾಟ್ಸಪ್ ಮಾಡಿ(8197712235)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ