
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯ ರಾಜಕೀಯದಲ್ಲಿ ದಿನಕ್ಕೊಂದು ಗಾಳಿ ಸುದ್ದಿ ಹರಡುತ್ತಿರುವಂತೆಯೇ ಇಂದು ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿಗಳಿಬ್ಬರು ಭೇಟಿ ಮಾಡುತ್ತಿರುವುದು ಇನ್ನಷ್ಟು ವದಂತಿಗಳಿಗೆ ಕಾರಣವಾಗಿದೆ.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇದೀಗ ಮಾಜಿ ಮುಖ್ಯಮಂತ್ರಿಗಳೂ ಆಗಿರುವ ರಾಜ್ಯ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್ ಅವರನ್ನು ಭೇಟಿ ಮಾಡುತ್ತಿದ್ದಾರೆ.
ಕೈಗಾರಿಕೆ ಬೆಳವಣಿಗೆ ಮತ್ತು ಬೆಂಗಳೂರಿನ ಕೆಲವು ಸಮಸ್ಯೆಗಳ ಕುರಿತು ಜಗದೀಶ ಶೆಟ್ಟರ್ ಅವರನ್ನು ಭೇಟಿ ಮಾಡುತ್ತಿರುವುದಾಗಿ ಕುಮಾರಸ್ವಾಮಿಯವರ ಆಪ್ತರು ಹೇಳುತ್ತಿದ್ದಾರೆ. ಆದರೆ ಭೇಟಿ ಇಷ್ಟಕ್ಕೇ ಸೀಮಿತವಾಗಿರಲಿದೆಯೇ ಅಥವಾ ರಾಜಕೀಯ ಉದ್ದೇಶವೇನಾದರೂ ಇದೆಯೇ ಎನ್ನುವ ಅನುಮಾನ ಹುಟ್ಟಿಸಿದೆ.
ಕುಮಾರಸ್ವಾಮಿ ಈಚೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನೂ ಭೇಟಿ ಮಾಡಿದ್ದರು. ಆ ನಂತರ ಕಾಂಗ್ರೆಸ್ ಮಂಡಿಸಿದ್ದ ಅವಿಶ್ವಾಸ ಗೊತ್ತುವಳಿ ವೇಳೆ ಜೆಡಿಎಸ್ ತಟಸ್ಥವಾಗುಳಿದಿತ್ತು.
ಬಿಜೆಪಿಯಲ್ಲಿ ಹಲವು ಆಂತರಿಕ ಬೆಳವಣಿಗೆ ಆಗುತ್ತಿರುವ ಹಿನ್ನೆಲೆಯಲ್ಲಿ ಮತ್ತು ಉಪಚುನಾವಣೆಗಳು ಬರುತ್ತಿರುವ ಹಿನ್ನೆಲೆಯಲ್ಲಿ ಎಲ್ಲ ರಾಜಕೀಯ ಬೆಳವಣಿಗೆಗಳಿಗೂ ರೆಕ್ಕೆ ಪುಕ್ಕ ಮೂಡುತ್ತಿದೆ.