Politics

*ಊರು ಮೇಯೋಕೆ, ಹೆದರಿಸಿ ಬೆದರಿಸಿ ಸುಲಿಗೆ ಮಾಡೋಕೆ ನಾನು ಬಿಟ್ಟಿರಲಿಲ್ಲ; ನಿಮಗೆ ಅಂತಹ ಎದೆಗಾರಿಕೆ ಇದೆಯಾ?*

ಕಾಂಗ್ರೆಸ್ ಸಚಿವರಿಗೆ HDK ಪ್ರಶ್ನೆ

ಪ್ರಗತಿವಾಹಿನಿ ಸುದ್ದಿ: ರಾಜ್ಯಪಾಲರ ಕಚೇರಿ ಸಿಬ್ಬಂದಿ ಮೇಲೆ ತನಿಖೆ ನಡೆಸುವ ದರ್ಪ ತೋರಿಸಿದ್ದ ಲೋಕಾಯುಕ್ತ ಎಡಿಜಿಪಿ ವಿರುದ್ಧ ಹರಿಹಾಯ್ದಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು; ಕಾಂಗ್ರೆಸ್ ಕಳಂಕಿತ ಅಧಿಕಾರಿಗಳಿಂದ ರಕ್ಷಣೆ ಪಡೆದುಕೊಳ್ಳುತ್ತಿದೆ ಎಂದು ದೂರಿದ್ದಾರೆ.

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡುವ ಅವರು; ಕಳಂಕಿತ ಅಧಿಕಾರಿ ಕುಮಾರಸ್ವಾಮಿ ಅವರ ಸರ್ಕಾರದಲ್ಲಿಯೂ ಕೆಲಸ ಮಾಡಿರಲಿಲ್ಲವೆ? ಎಂದು ಕೇಳಿದ್ದ ಕೆಲ ಸಚಿವರಿಗೆ ಕುಮಾರಸ್ವಾಮಿ ಅವರು ತಿರುಗೇಟು ನೀಡಿದ್ದಾರೆ.

ಅಪ್ರಬುದ್ಧ ಅವಿವೇಕಿಗಳಿಗೆ ಏನು ಹೇಳುವುದು? ಲೋಕಾಯುಕ್ತ ಎಸ್ಐಟಿ ಎಡಿಜಿಪಿ ಹುದ್ದೆಯಲ್ಲಿರುವ ಕಳಂಕಿತ, ಕ್ರಿಮಿನಲ್ ಪ್ರವೃತ್ತಿಯ ಅಧಿಕಾರಿ ಕುಮಾರಸ್ವಾಮಿಯವರ ಅಧಿಕಾರಾವಧಿಯಲ್ಲಿಯೂ ಕೆಲಸ ಮಾಡಿರಲಿಲ್ಲವೇ? ಎನ್ನುವುದು ಈ ಸರಕಾರದಲ್ಲಿರುವ ಕೆಲವರ ಪ್ರಶ್ನೆ. ನನ್ನ ಸರಕಾರದಲ್ಲಿಯೂ ಈ ಅಧಿಕಾರಿ ಕೆಲಸ ಮಾಡಿದ್ದರು, ನಿಜ. ನಾನು ಇಲ್ಲವೆನ್ನುವುದಿಲ್ಲ.
ಆದರೆ; ಊರು ಮೇಯೋಕೆ, ಸಿಕ್ಕಸಿಕ್ಕ ಕೊಚ್ಚೆಯಲ್ಲಿ ಉರುಳಾಡೋಕೆ, ಹೆದರಿಸಿ ಬೆದರಿಸಿ ಸುಲಿಗೆ ಮಾಡೋಕೆ ನಾನು ಬಿಟ್ಟಿರಲಿಲ್ಲ. ಹದ್ದುಬಸ್ತಿನಲ್ಲಿ ಇಟ್ಟು ಕೆಲಸ ಮಾಡಿಸಿದ್ದೆ. ನಿಮಗೆ ಅಂತಹ ಎದೆಗಾರಿಕೆ ಇದೆಯಾ ಕಾಂಗ್ರೆಸ್ ಸಚಿವರೇ? ಎಂದು ಪ್ರಶ್ನಿಸಿದ್ದಾರೆ ಕೇಂದ್ರ ಸಚಿವರು.

ಕಳಂಕಿತ ಅಧಿಕಾರಿಗಳಿಂದ ರಕ್ಷಣೆ ಪಡೆದುಕೊಳ್ಳುವ ನಿಮ್ಮ ನಿಕೃಷ್ಟ ಸ್ಥಿತಿ ನನಗೆ ಬಂದಿಲ್ಲ, ಬರುವುದೂ ಇಲ್ಲ ಎಂದು ಕಾಂಗ್ರೆಸ್ ನಾಯಕರಿಗೆ ಅವರು ತಿರುಗೇಟು ನೀಡಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button