ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೊರೊನಾ ಸಂಕಷ್ಟದಿಂದಾಗಿ ರಾಜ್ಯದಲ್ಲಿ ಜನರು ಆಕ್ಸಿಜನ್, ಬೆಡ್, ಸರಿಯಾದ ಚಿಕಿತ್ಸೆ ಇಲ್ಲದೇ ಸಾಯುತ್ತಿದ್ದಾರೆ. ಇಂತಹ ಸೂತಕದ ನಡುವೆ ಪತ್ರಿಕೆಗಳ ಮುಖಪುಟದಲ್ಲಿ ಕೋಟ್ಯಂತರ ಖರ್ಚುಮಾಡಿ ಪ್ರಧಾನಿ ಮೋದಿ ನಗುಮೊಗದ ಜಾಹೀರಾತು ಹಾಕುತ್ತಿರುವ ಸರ್ಕಾರದ ಮೂರ್ಖತನ ಆತ್ಮಸಾಕ್ಷಿಯನ್ನು ಪ್ರಶ್ನಿಸುವಂತಿದೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಮೆಟ್ರೋ 2ನೇ ಹಂತದ ಯೋಜನೆಗಳಿಗೆ ಕೇಂದ್ರ ಅನುದಾನ ನೀಡಿದ್ದನ್ನೇ ನೆಪ ಮಾಡಿಕೊಂಡು ಸರ್ಕಾರ ಪ್ರಚಾರ ನಡೆಸುತ್ತಿದೆ. ರಾಜ್ಯಕ್ಕೆ ಕೇಂದ್ರ ನೀಡುವ ಅನುದಾನ ಭಿಕ್ಷೆಯಲ್ಲ. ಅದು ನಮ್ಮ ಹಕ್ಕು. ಅದರಲ್ಲಿ ಪ್ರಚಾರ ಪಡೆಯುವ, ಜಾಹೀರಾತು ನೀಡುವ ತುರ್ತು ಏನಿದೆ ? ಅದು ಇಂತ ಸಂದರ್ಭದಲ್ಲಿ ಸಮಾಜವೇ ಗಂಡಾಂತರದಲ್ಲಿ ಸಿಲುಕಿರುವಾಗ ಈ ಪ್ರಚಾರ ಪ್ರಿಯತೆ ಏಕೆ? ಜಾಹೀರಾತುಗಳಲ್ಲಿ ನೀವು ಬೀರುವ ನಗು ನೋವಿನಲ್ಲಿರುವವರನ್ನು ಅಣಕಿಸುತ್ತದೆ ಎಂಬ ಸೂಕ್ಷ್ಮತೆ ಇಲ್ಲವೇ? ಜಾಹೀರಾತುಗಳಿಗೆ ನೀಡುವ ಕೋಟಿ ಹಣವನ್ನು ವೈದ್ಯಕೀಯ ವ್ಯವಸ್ಥೆಗೆ ಬಳಸಿಕೊಂಡಿದ್ದಿದ್ದರೆ ಯಾರಾದರೂ ಬೇಡವೆನ್ನುತ್ತಿದ್ದರೆ? ಸರ್ಕಾರದ ಪ್ರಚಾರದ ಈ ಹುಚ್ಚು ನಾಚಿಕೆಗೇಡಿನದ್ದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ದುರಿತ ಕಾಲದಲ್ಲಿ ಸರ್ಕಾರ ಜನರ ಪ್ರಾಣ ರಕ್ಷಣೆಗಾಗಿ ಪಣತೊಡಬೇಕೆ ಹೊರತು, ಪ್ರಚಾರದಲ್ಲಿ ತೊಡಗಬಾರದು. ಈ ರೀತಿಯ ಜಾಹೀರಾತುಗಳನ್ನು ಕೋವಿಡ್ ನ ಈ ಸಂದರ್ಭದಲ್ಲಿ ಹಾಕುವ ಮೂಲಕ ಜನರಿಗೆ ಯಾವ ರೀತಿ ಸಂದೇಶ ನೀಡಲು ಹೊರಟಿದ್ದೀರಾ? ರಾಜ್ಯದಲ್ಲಿ ಉಂಟಾಗುತ್ತಿರುವ ದುಸ್ಥಿತಿ, ಜನರ ಸಂಕಷ್ಟ ಕಂಡರೂ ರಾಜ್ಯ ಸರ್ಕಾರಕ್ಕೆ ಬುದ್ಧಿ ಬಂದಿಲ್ಲ. ಇನ್ನಾದರೂ ಮೂರ್ಖ ಸರ್ಕಾರ ಅರ್ಥಮಾಡಿಕೊಳ್ಳಬೇಕು ಎಂದು ಕಿಡಿಕಾರಿದ್ದಾರೆ.
ಯಡಿಯೂರಪ್ಪ ಆಸ್ಪತ್ರೆಯಿಂದ ಡಿಸ್ಚಾರ್ಜ್ : ರಾಜ್ಯದ ಜನತೆಗೆ ಸಿಎಂ ವಿಶೇಷ ಮನವಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ