*ಬ್ರ್ಯಾಂಡ್ ಬೆಂಗಳೂರು ಹೆಸರಿನಲ್ಲಿಯೂ ಕಮೀಷನ್ ದಂಧೆ; ಗುತ್ತಿಗೆದಾರರ ಹಣ ಬಿಡುಗಡೆಗೂ 10-15 ಪರ್ಸೆಂಟ್ ಗೆ ಬೇಡಿಕೆ; HDK ಗಂಭೀರ ಆರೋಪ*
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬ್ರ್ಯಾಂಡ್ ಬೆಂಗಳೂರು ಮಾಡುವ ಮಹಾನುಭಾವರು ಬಿಬಿಎಂಪಿಯಲ್ಲಿ 710 ಕೋಟಿ ರೂಪಾಯಿ ಗುತ್ತಿಗೆದಾರರ ಹಣವನ್ನು ಯಾಕೆ ಬಿಡುಗಡೆ ಮಾಡಿಸಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.
ಜೆಡಿಎಸ್ ಪಕ್ಷದ ರಾಜ್ಯ ಕಚೇರಿಯಲ್ಲಿಂದು ಮಾಧ್ಯಮಗಳ ಜತೆ ಮಾತನಾಡಿದ ಅವರು; ಬಿಜೆಪಿ ಸರ್ಕಾರ ಇದ್ದಾಗ ಪ್ರತಿಯೊಂದನ್ನೂ ಪ್ರಶ್ನೆ ಮಾಡುತ್ತಿದ್ದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಈಗೆಲ್ಲಿದ್ದಾರೆ ಎಂದು ಕೇಳಿದರು.
ಗುತ್ತಿಗೆದಾರರ ಬಾಕಿ ಬಿಲ್ಲುಗಳನ್ನು ಯಾಕೆ ತಡೆ ಹಿಡಿದ್ದಾರೆ? ಬೆಂಗಳೂರು ಉಸ್ತುವಾರಿ ಸಚಿವರಾದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು 710 ಕೋಟಿ ಹಣ ರಿಲೀಸ್ ಮಾಡಿಸಿಲ್ಲ. ಇದರ ಹಿಂದಿರುವ ಅಸಲಿ ಕಾರಣವನ್ನು ಜನರಿಗೆ ಕೊಂಚ ಹೇಳಬೇಕಲ್ಲವೇ ಎಂದು ಅವರು ಒತ್ತಾಯಿಸಿದರು.
ಕಳೆದ ಮೇ ತಿಂಗಳಲ್ಲಿ ಗುತ್ತಿಗೆದಾರರಿಗೆ 710 ಕೋಟಿ ರೂ. ಬಿಡುಗಡೆ ಆಯಿತು. ಅವತ್ತಿನ ದಿನವೇ ಕಾಂಗ್ರೆಸ್ ಪಕ್ಷದ ಎಂಪಿ ಬಿಬಿಎಂಪಿ ಅಧಿಕಾರಿಗಳಿಗೆ ಎಚ್ಚರಿಕೆ ಕೊಟ್ಟರು. ನಮ್ಮ ಸರ್ಕಾರ ಬರ್ತಾ ಇದೆ, ಒಂದು ರೂಪಾಯಿ ಬಿಡುಗಡೆ ಆಗಬಾರದು ಅಂತ ತಾಕೀತು ಮಾಡಿದರು. ಆ ಹಣವನ್ನು ಹಾಗೆಯೇ ಬ್ಯಾಂಕ್ ಖಾತೆಯಲ್ಲಿ ಇಟ್ಟರು. ಆ ಹಣ ಬಿಡುಗಡೆಗೆ ಹಲವಾರು ಸಭೆಗಳು ಆದವು. 5 ಪರ್ಸೆಂಟ್ ನಿಂದ 10 ಪರ್ಸೆಂಟ್ ಡಿಮ್ಯಾಂಡ್ ಮಾಡಲಾಗುತ್ತಿದೆ ಈಗ. ಗುತ್ತಿಗೆದಾರರ ಪರವಾಗಿ ಒಬ್ಬ ಅಧಿಕಾರಿ ಹೋದರೆ, 10ರಿಂದ 15 ಪರ್ಸೆಂಟ್ ಕೊಟ್ಟರೆ ಹಣ ಬಿಡುಗಡೆ ಮಾಡ್ತೀವಿ ಅಂತ ಹೇಳಿ ಕಳಿಸಿದ್ದಾರೆ. ಇವರು ಬ್ರ್ಯಾಂಡ್ ಬೆಂಗಳೂರು ಮಾಡಲು ಹೊರಟಿದ್ದಾರೆ. ಅವರ ಮನೆಯಲ್ಲಿ ಸಿಸಿಟಿವಿ ಇದೆಯಾ? ಇದ್ದರೆ ಯಾರು ಅವರ ಮನೆಗೆ ಹೋಗಿದ್ದರು ಎನ್ನುವುದನ್ನು ಪತ್ತೆ ಹಚ್ಚಬೇಕು ಎಂದರು ಅವರು.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ ಸುರ್ಜೇವಾಲ ಅವರನ್ನು ಬಿಬಿಎಂಪಿ ಅಧಿಕಾರಿಗಳ ಸಭೆಯಲ್ಲಿ ಕೂರಿಸಿಕೊಂಡಿದ್ದಿರಿ? ನಿನ್ನೆ ಹೇಳಿದ್ದರಲ್ಲ, ಅಣ್ಣ ಹೇಳಿದರೆ ತಮ್ಮ ಕೇಳಬೇಕು ಅಂತಾ, ಆವರಿಗೆ ಹೇಳಲು ಬಯಸುತ್ತೇನೆ. ಮೊದಲು ಗುತ್ತಿಗೆದಾರರ ಹಣ ಬಿಡುಗಡೆ ಮಾಡಿ, ಒಂದು ಮಾಡಲು ಆಗದಿದ್ದರೆ ಅದಕ್ಕಿರುವ ಕಾರಣವನ್ನದಾರೂ ತಿಳಿಸಿ ಎಂದು ಅವರು ಟಾಂಗ್ ನೀಡಿದರು.
ಪ್ರತಿಯೊಂದಕ್ಕೂ ಕೈ ಚಾಚುವ, ಜನರ ರಕ್ತ ಹೀರುವ ಇಂಥ ದರಿದ್ರ ಸರ್ಕಾರ, ಇಂತಹ ಕೆಟ್ಟ ಸರ್ಕಾರವನ್ನು ನಾನು ಎಲ್ಲಿಯೂ ನೋಡಿಲ್ಲ. ಅದು ಗೊತ್ತಿದ್ದರೂ ನನ್ನ ಕೆಣಕುವ ವ್ಯರ್ಥ ಪ್ರಯತ್ನ ಮಾಡುತ್ತಿದ್ದಾರೆ. ಇನ್ನೂ ಕೆಣಕಲಿ, ಕಾಯ್ತಾ ಇದ್ದೇನೆ. ಕೆಣಕಲಿ, ಸೂಟ್ ಕೇಸ್ ಗಟ್ಟಲೇ ದಾಖಲೆಗಳು ನನ್ನ ಬಳಿ ಇವೆ ಎಂದು ಎಚ್ಚರಿಕೆ ನೀಡಿದರು ಕುಮಾರಸ್ವಾಮಿ.
ನಾನು ಈ ಕೂಡಲೇ ದಾಖಲೆ ಬಿಡುಗಡೆ ಮಾಡುತ್ತೇನೆ. ಆರೋಪಿತ ವ್ಯಕ್ತಿ ವಿರುದ್ಧ ಕ್ರಮ ಜರುಗಿಸುವ ಧೈರ್ಯ ಸಿಎಂಗೆ ಇದೆಯಾ? ಒಂದು ವೇಳೆ ನಾನು ದಾಖಲೆ ಬಿಡುಗಡೆ ಮಾಡಿದರೆ ನಕಲಿ ಅಂತಾರೆ, ಮಿಮಿಕ್ರಿ ಅಂತಾರೆ. ಅದಕ್ಕೆ ಕಾದು ಸರಿಯಾದ ಸಮಯದಲ್ಲಿಯೇ ಪೆನ್ ಡ್ರೈವ್ ಹೊರ ಬಿಡುತ್ತೇನೆ. ನನ್ನ ಬಳಿ ಇರುವುದು ಎಸ್ ಪಿ ರೋಡ್ ಪೆನ್ ಡ್ರೈವ್ ಅಲ್ಲ, ಆ ರಸ್ತೆಗೆ ಹೋಗಿ ಪೆನ್ ಡ್ರೈವ್ ತಯಾರು ಮಾಡುವ ಕರ್ಮ ನನಗೇಕೆ? ಅವರ ಪಕ್ಷದವರೇ ತಯಾರು ಮಾಡುತ್ತಿದ್ದಾರಲ್ಲ ಎಂದು ತಮ್ಮ ಟೀಕಾಕಾರರಿಗೆ ತಿರುಗೇಟು ಕೊಟ್ಟರು ಕುಮಾರಸ್ವಾಮಿ ಅವರು.
ಬ್ರ್ಯಾಂಡ್ ಬೆಂಗಳೂರು ಹೆಸರಲ್ಲಿ ಕಮೀಷನ್ ದಂಧೆ ಶುರುವಾಗಿದೆ. ಅದಕ್ಕಾಗಿ ಬೆಂಗಳೂರನ್ನು ಸಿಂಗಾಪುರ ಮಾಡಲು ಹೊರಟಿದ್ದಾರೆ! ಅದಕ್ಕಾಗಿ 15-20 ವರ್ಷ ಕೆಲಸ ಮಾಡಿರುವ ಒಬ್ಬ ಚೀಫ್ ಎಂಜಿನಿಯರ್ ಒಬ್ಬರನ್ನು ಇಟ್ಟುಕೊಂಡಿದ್ದಾರೆ. ಅಲ್ಲಿ ಫೈಲ್ ಟ್ರಾನ್ಸ್‌ಫರ್ ಮಾಡೋದಕ್ಕೆ 15% ಕೊಡಬೇಕಿದೆ. ಕೆ.ಟಿ ನಾಗರಾಜ್ ಎಂಬುವರ ಮೂಲಕ 15% ಕಮೀಷನ್ ಪಡೆಯಲಾಗುತ್ತಿದೆ ಎಂದು ಎಂದು ಅವರು ಆರೋಪ ಮಾಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ