ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಅಧಿಕಾರಿಗಳು ಬಹಿರಂಗವಾಗಿ ಕಿತ್ತಾಡುತ್ತಿದ್ದರೂ ಕ್ರಮ ಕೈಗೊಳ್ಳದ ರಾಜ್ಯ ಸರ್ಕಾರದ ವೈಖರಿ ಬಗ್ಗೆ ಕಿಡಿಕಾರಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಇದು ಪ್ರಜಾಪ್ರಭುತ್ವದ ಮೂರು ಮಂಗಗಳು ನಾಚುವಂತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನ ಜಿಲ್ಲಾಧಿಕಾರಿ ಹಾಗೂ ಪಾಲಿಕೆ ಆಯುಕ್ತರ ನಡುವಿನ ಜಟಾಪಟಿ ಬಗ್ಗೆ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ, ಪ್ರಜಾಪ್ರಭುತ್ವದ ಮೂರು ಮಂಗಗಳು ನಾಚುವಂತೆ ವರ್ತಿಸುತ್ತಿರುವ ಸರ್ಕಾರದ ಎಡಬಿಡಂಗಿತನ ಮತ್ತು ಮಹಾಮೌನ ಕಂಡು ಜನತೆ ಹಾದಿ ಬೀದಿಯಲ್ಲಿ ನಗುವಂತಾಗಿದೆ. ಮುಖ್ಯಮಂತ್ರಿ ಮತ್ತು ಸರ್ಕಾರಕ್ಕೆ ತಾಕತ್ತಿದ್ದರೆ ಬಹಿರಂಗ ಸಂಘರ್ಷಕ್ಕೆ ಕಡಿವಾಣ ಹಾಕಲಿ. ಇಲ್ಲ ಅಧಿಕಾರ ಬಿಟ್ಟು ತೊಲಗಲಿ ಎಂದು ಆಗ್ರಹಿಸಿದ್ದಾರೆ.
ಸಿ ಎಸ್ ಆರ್ ಎಫ್ ಹಣದ ಲೆಕ್ಕ ಕೊಟ್ಟಿಲ್ಲ ಎಂದು ಮೈಸೂರು ಜಿಲ್ಲಾಧಿಕಾರಿ ಆರೋಪಿಸಿದರೆ, 42 ಕೋಟಿ ರೂಪಾಯಿಗಿಂತಲೂ ಅಧಿಕಹಣದ ದುರ್ಬಳಕೆಯಾಗಿದೆ ಎಂದು ಜಿಲ್ಲಾಧಿಕಾರಿ ವಿರುದ್ಧ ಬಿಜೆಪಿ ಸಂಸದರು ಆರೋಪಿಸಿದ್ದಾರೆ. ಭ್ರಷ್ಟಾಚಾರದ ವಾಸನೆ ಗಬ್ಬೆದ್ದು ನಾರುತ್ತಿದ್ದರೂ ಸರ್ಕಾರ ಕಂಡು ಕಾಣದಂತೆ ವರ್ತಿಸುತ್ತಿರುವುದರ ಮರ್ಮವೇನು? ಮುಖ್ಯಮಂತ್ರಿಯ ದೌರ್ಬಲ್ಯವೋ? ಸರ್ಕಾರದ ಉನ್ನತ ಅಧಿಕಾರಿಗಳ ದೌರ್ಬಲ್ಯವೋ? ಎಂದು ಪ್ರಶ್ನಿಸಿದ್ದಾರೆ.
ಇಬ್ಬರು ಐಎಎಸ್ ಅಧಿಕಾರಿಗಳ ಜಟಾಪಟಿಯಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ 24 ಮಂದಿಯ ಜೀವ ಬಲಿ ಪಡೆಯಲಾಯಿತು. ಅಂತಹದೇ ಪರಿಸ್ಥಿತಿ ಮೈಸೂರಿನಲ್ಲೂ ನಿರ್ಮಾಣವಾಗಿದೆ. ಅಧಿಕಾರಿಗಳ ಜಗಳದಲ್ಲಿ ಜನಪ್ರತಿನಿಧಿಗಳು ಪರ ವಿರೋಧದ ಹೇಳಿಕೆಗಳನ್ನು ನೀಡಿ ತಮ್ಮ ಬಾಯಿಚಪಲ ತೀರಿಸಿ ಕೊಳ್ಳುತ್ತಿದ್ದರೆ ಸರ್ಕಾರ ಮೌನಕ್ಕೆ ಶರಣಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
SSLC, PUC ಪರೀಕ್ಷೆ ವಿಚಾರ; ಶಿಕ್ಷಣ ಸಚಿವರ ಐಲು-ಪೈಲು ನಿರ್ಧಾರ; ಹೆಚ್.ಡಿ.ಕೆ ಕಿಡಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ