Kannada NewsKarnataka NewsLatestPolitics

*ವರ್ಗಾವಣೆ ಬಗ್ಗೆ ಮಾತನಾಡಲು ಅಸಹ್ಯವಾಗುತ್ತೆ ಎಂದ HDK; ಹೊಸ ಬಾಂಬ್ ಸಿಡಿಸಿದ ಮಾಜಿ ಸಿಎಂ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಮತ್ತೆ ಕಿಡಿ ಕಾರಿರುವ ಮಾಜಿ ಸಿಎಂ ಹೆಚ್.ಡಿ.ಕುಮರಸ್ವಾಮಿ, ವರ್ಗಾವಣೆ ಬಗ್ಗೆ ಮಾತನಾಡಲು ಅಸಹ್ಯವಾಗುತ್ತೆ ಎಂದು ಗುಡುಗಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಮರಸ್ವಾಮಿ, ದುಡ್ದಿಲ್ಲ, ದುಡ್ಡಿಲ್ಲ ಅಂತಾರೆ ಯಾಕೆ ದುಡ್ಡಿಲ್ಲ, ಟ್ಯಾಕ್ಸ್ ಸಾಕಷ್ಟು ವಸೂಲಿ ಆಗಿದೆ. ಅಷ್ಟೊಂದು ಹಣ ಇದ್ದರೂ ದುಡ್ದಿಲ್ಲ ಅಂತೀರಾ. ಇನ್ನು ವರ್ಗಾವಣೆ ದಂಧೆ. ವರ್ಗವಣೆ ದಂಧೆ ಬಗ್ಗೆ ಮಾತನಾಡಲು ಅಸಹ್ಯವಾಗುತ್ತೆ. ಗೃಹ ಸಚಿವ ಪರಮೇಶ್ವರ್ ಅವರೇ ನಾನು ಏನು ಸಲಹೆ ಕೊಟ್ಟಿದ್ದೆ ಹೇಳಿ ಎಂದು ವಾಗ್ದಾಳಿ ನಡೆಸಿದ್ದಾರೆ.

ಬಿಡಿಎ, ಪೊಲೀಸ್, ಅಧಿಕರಿಗಳ ವರ್ಗಾವಣೆಯಲ್ಲಿ ನಾನು ಯಾವುದಕ್ಕೆ ಹಸ್ತಕ್ಷೇಪ ಮಾಡಿದ್ದೇನೆ? ಏನೆಲ್ಲ ಆಯ್ತು ಅಂತ ನನಗೆ ಗೊತ್ತಿದೆ. ಇನ್ನು ನೈಸ್ ಹಗರಣಲ್ಲಿ ರೈತರ ಹೆಸರಲ್ಲಿ ಕೋಟಿ ಕೋಟಿ ಲೂಟಿ ಮಾಡಿದ್ದಾರೆ. ಎಲ್ಲಾ ದಾಖಲೆಗಳನ್ನು ಸಂಗ್ರಹಿಸಿದ್ದೇನೆ. ನೈಸ್ ಹಗರಣದ ದಾಖಲೆ ದೆಹಲಿಯಲ್ಲಿ ಬಿಡುಗಡೆ ಮಾಡುತ್ತೇನೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.

ಮೈಸೂರು ಮೂಲಸೌಕರ್ಯ ಕಾರಿಡಾರ್ ಯೋಜನೆ (ನೈಸ್) ಅಕ್ರಮಗಳ ಕುರಿತ ಎಲ್ಲಾ ದಾಖಲೆಗಳನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಖುದ್ದು ಭೇಟಿಯಾಗಿ ಸಲ್ಲಿಸಲಾಗುವುದು. ಅವರ ಭೇಟಿಯ ನಂತರ ಅದೇ ದಿನದಂದು ದೆಹಲಿಯಲ್ಲಿ ಈ ಅಕ್ರಮಗಳ ಎಲ್ಲಾ ದಾಖಲೆಗಳನ್ನು ಮಾಧ್ಯಮಗಳ ಮುಂದೆ ಬಿಡುಗಡೆ ಮಾಡುತ್ತೇನೆ ಹಾಗೂ ಈ ಬಗ್ಗೆ ಸಿಬಿಐ ತನಿಖೆಗೆ ಒತ್ತಾಯ ಮಾಡುತ್ತೇನೆ ಎಂದು ಹೇಳಿದರು.

ಪೆನ್ ಕೊಡಿ ಎಂದವರಿಂದಲೇ ಅಕ್ರಮ:

ಈ ಸರಕಾರದಲ್ಲಿರುವ ಅತ್ಯಂತ ಪ್ರಭಾವಿಯೊಬ್ಬರು ಫೆರಿಫಿರಲ್ ರಿಂಗ್ ರೋಡ್ ಮಾಡಲು ನೈಸ್ ಜತೆ ಸೇರಿಕೊಂಡು ಏನೆಲ್ಲಾ ಕರ್ಮಕಾಂಡ ಮಾಡಿದ್ದಾರೆ ಎನ್ನುವುದು ಗೊತ್ತಿದೆ. ಸಣ್ಣಪುಟ್ಟ ಮನೆಗಳನ್ನು ಕಟ್ಟಿಕೊಂಡಿದ್ದ ಬಡವರನ್ನು ಒಕ್ಕಲೆಬ್ಬಿಸಲು ಹೊರಟಿದ್ದಾರೆ. ಆ ಮಹಾನುಭಾವರು ನನಗೂ ಒಮ್ಮೆ ಪೆನ್ ಹಿಡಿಯುವ ಅವಕಾಶ ಕೊಡಿ ಎಂದು ಕೇಳಿದ್ದು ಇದಕ್ಕೇನಾ? ಎಂದು ಯಾರೊಬ್ಬರ ಹೆಸರು ಹೇಳದೆಯೇ ಮಾಜಿ ಮುಖ್ಯಮಂತ್ರಿ ಅವರು ಟೀಕಾಪ್ರಹಾರ ನಡೆಸಿದರು.

ನೈಸ್ ಯೋಜನೆಯಲ್ಲಿ ಅಕ್ರಮಗಳ ಸರಣಿಯೇ ನಡೆದಿದೆ. ಯೋಜನೆಗೆ ಸ್ವಾಧೀನಕ್ಕೆ ಗುರುತಿಸಲಾಗಿದ್ದ, ಪ್ರಾಥಮಿಕ ಅಧಿಸೂಚನೆ ಮಾಡಲಾಗಿದ್ದ ಭೂಮಿಯನ್ನೇ ಖರೀದಿ ಮಾಡಿದ್ದ ಆ ಮಹಾನುಭಾವರಿಗೆ ಇದೆಲ್ಲವನ್ನೂ ಜೀರ್ಣ ಮಾಡುವ ತಾಕತ್ತು ಇದೆ. ನಾನು ಇಲ್ಲ ಎನ್ನಲು ಆಗುತ್ತದೆಯೇ ಎಂದು ಕುಮಾರಸ್ವಾಮಿ ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

ಅಧಿಸೂಚನೆ ಆಗಿದ್ದ ಬಡ ರೈತರ ಭೂಮಿಯನ್ನೇ ಸ್ವಾಹಾ ಮಾಡಿದವರು ಇಂದು ಬ್ರ್ಯಾಂಡ್ ಬೆಂಗಳೂರು ಭಜನೆ ಮಾಡುತ್ತಿದ್ದಾರೆ. ಎಲ್ಲಿ ಯಾರ ಭೂಮಿ, ಹಿದೆದುಕೊಳ್ಳೋಣ ಎಂದು ಹೊಂಚು ಹಾಕುವವರಿಂದ ಬೆಂಗಳೂರು ಉದ್ಧಾರ ಸಾಧ್ಯವೇ? ಎಂದು ಮಾಜಿ ಮುಖ್ಯಮಂತ್ರಿಗಳು ಖಾರವಾಗಿ ಪ್ರಶ್ನಿಸಿದರು.

ಕನ್ನಡಿಗರಿಗೆ ಏನಾಗಿದೆ?

ಪ್ರತಿ ಸಣ್ಣ ವಿಷಯಕ್ಕೆ ನಾಡು, ನೀಡಿ, ಕನ್ನಡ ಅಸ್ಮಿತೆಯ ಮಾತನಾಡುವ ಮಂದಿ ಈಗೆಲ್ಲಿ ಹೋಗಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ರೈತರ 5 ಸಾವಿರ ಎಕರೆಯಲ್ಲಿ ಕಾರ್ಖಾನೆ ಕಟ್ಟಲು ಹೊರಟವರ ವಿರುದ್ಧ ಅಲ್ಲಿ ಬೃಹತ್ ಹೋರಾಟ ನಡೆಯಿತು. ಆ ಹೋರಾಟದಿಂದಲೇ ಮಮತಾ ಬ್ಯಾನರ್ಜಿ ಹುಟ್ಟಿಕೊಂಡು ನಾಯಕಿಯಾಗಿ ಹೊರಹೊಮ್ಮಿದರು. ಆದರೆ ನಮ್ಮವರಿಗೆ ಏನಾಗಿದೆ ಎಂದು ಗೊತ್ತಿಲ್ಲ. ಇಷ್ಟು ದೊಡ್ಡ ಪ್ರಮಾಣದಲ್ಲಿ ಜನರ ಭೂಮಿಯನ್ನು ಕೊಳ್ಳೆ ಹೊಡೆಯುತ್ತಿದ್ದರೂ ಕನ್ನಡಿಗರು ಮೌನವಾಗಿದ್ದಾರೆ. ಇಲ್ಲಿ ಏನಾಗಿದೆ ಎನ್ನುವುದು ನನಗೆ ಅರ್ಥ ಆಗುತ್ತಿಲ್ಲ ಎಂದು ಕುಮಾರಸ್ವಾಮಿ ಅವರು ಬೇಸರ ವ್ಯಕ್ತಪಡಿಸಿದರು.

ನೈಸ್ ಅಕ್ರಮದ ಬಗ್ಗೆ ಸೂಕ್ತ ತನಿಖೆ ಆಗಬೇಕು. ಸದನದ ಸಮಿತಿ ವರದಿಯಲ್ಲಿ ಶಿಫಾರಸು ಮಾಡಿರುವಂತೆ ಸಿಬಿಐ ತನಿಖೆಯೇ ನಡೆಯಬೇಕು. ಸರ್ಕಾರಕ್ಕೆ ವಂಚನೆ ಮಾಡಿರುವ ಹಾಗೂ ಜನರ ಭೂಮಿಯನ್ನು ನುಂಗಿರುವ ಕುಳಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು ಎಂದು ಒತ್ತಾಯ ಮಾಡಿದ ಅವರು, ಈ ಕುರಿತ ಎಲ್ಲ ದಾಖಲೆಗಳನ್ನು ಪ್ರಧಾನಿಗಳಿಗೆ ಸಲ್ಲಿಸಲಾಗುವುದು ಎಂದರು.

ಕಾಂಗ್ರೆಸ್ ಸರ್ಕಾರದಲ್ಲಿ ಹಿಂದೆ ಕಾನೂನು ಸಚಿವರಾಗಿದ್ದ ಟಿ.ಬಿ.ಜಯಚಂದ್ರ ಅವರು ಈ ವಿಷಯವನ್ನು ಸದನದಲ್ಲಿ ಪ್ರಸ್ತಾಪ ಮಾಡಿದ್ದಕ್ಕೆ ಅವರಿಗೆ ಜೀವ ಬೆದರಿಕೆ ಹಾಕಿದ್ದರು. ಈ ಬೆದರಿಕೆ ಹಿಂದೆ ಯಾರಿದ್ದಾರೆ ಎನ್ನುವ ಬಗ್ಗೆಯೂ ತನಿಖೆ ಆಗಬೇಕು ಎಂದ ಮಾಜಿ ಮುಖ್ಯಮಂತ್ರಿ ಅವರು; ಇಷ್ಟೆಲ್ಲಾ ನಡೆಯುತ್ತಿದ್ದರೂ ಈಗಿನ ಕಾನೂನು ಸಚಿವರು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

ಹಿಂದೆ ಬಳ್ಳಾರಿಯ ಜಿಂದಾಲ್ ಗೆ ಭೂಮಿ ಕೊಡಬಾರದು ಎಂದು ಹೆಚ್.ಕೆ.ಪಾಟೀಲ್ ಅವರೇ ಸರಕಾರಕ್ಕೆ ಪತ್ರ ಬರೆದಿದ್ದರು. ಈಗ ಅವರೇ ಸಚಿವರು. ಈಗೇನು ಮಾಡುತ್ತಿದ್ದಾರೆ? ಇಷ್ಟು ದೊಡ್ಡ ಪ್ರಮಾಣದ ಜನರ ಭೂಮಿಯನ್ನು ಉಳಿಸಿಕೊಳ್ಳಲು ಏನು ಮಾಡಿದ್ದೀರಿ? ಕಾನೂನು ಸಚಿವರಾಗಿ ನಿಮ್ಮ ಜವಾಬ್ದಾರಿ ಏನು? ಎಂದು ಕುಮಾರಸ್ವಾಮಿ ಅವರು ಪ್ರಶ್ನಿಸಿದರು.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button