ಮಂಗಳೂರು; ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಪ್ರಕರಣ ಅಣಕು ಪ್ರದರ್ಶನದಂತೆ ಇದೆ. ಇದು ಉದ್ದೇಶಪೂರ್ವಕವಾಗಿ ಜನರಲ್ಲಿ ಭಯಮೂಡಿಸಲು ಮಾಡಿದ ಕೃತ್ಯ ಎಂಬುದು ನನ್ನ ಭಾವನೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಸಂಶಯ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರಿನಲ್ಲಿ ಬಾಂಬ್ ಪತ್ತೆ ಹಾಗೂ ಅದನ್ನು ಸ್ಫೋಟಿಸಿ ನಿಷ್ಕ್ರಿಯಗೊಳಿಸಿದ ಪ್ರಕ್ರಿಯೆ ನೋಡಿದರೆ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಮಾಡುವ ಅಣುಕು ಪ್ರದರ್ಶನದಂತೆ ಇದೆ ಎಂದು ಹೇಳಿದ್ದಾರೆ.
ಮಾಧ್ಯಮಗಳಲ್ಲಿ ನಿನ್ನೆ ನಿರ್ಜನ ಪ್ರದೇಶದಲ್ಲಿ ಬಾಂಬ್ ಸ್ಪೋಟಗೊಳಿಸಿ ನಿಷ್ಕ್ರಿಯಗೊಳಿಸಿದ ಪ್ರಕ್ರಿಯೆಯನ್ನು ತೋರಿಸಿದಾಗ ನಾನು ನೋಡಿದ್ದೇನೆ. ಅದನ್ನು ಗಮನಿಸಿದರೆ, ಅಣಕು ಪ್ರದರ್ಶನ ರೀತಿ ಇತ್ತು. ಕಬ್ಬಿಣದ ಬಾಕ್ಸ್ನಲ್ಲಿ ಪಟಾಕಿ ತಯಾರು ಮಾಡಲು ಬಳಸುವ ಬಿಳಿ ಪೌಡರು ಇಟ್ಟಿದ್ದರು ಎಂದಿದ್ದಾರೆ. ಇದನ್ನು ನಿಷ್ಕ್ರಿಯಗೊಳಿಸಲು ಬೆಳಗ್ಗೆಯಿಂದ ಸಂಜೆಯವರೆಗೂ ಹರಸಾಹಸ ನಡೆಸಿದರು. ಅಲ್ಲದೇ ಇದಕ್ಕೆ ಸರಿಯಾದ ವ್ಯವಸ್ಥೆ ಇರಲಿಲ್ಲ. ಈ ರೀತಿ ಬಾಂಬ್ ನಿಷ್ಕ್ರಿಯ ಮಾಡಿದ್ದು, ಇದೇ ಮೊದಲು. ಅದರಲ್ಲಿ ಮುಖಕ್ಕೆ ಹಾಕಿಕೊಳ್ಳೋ ಮಿಣಮಿಣ ಪೌಡರ್ ಇತ್ತೋ ಏನೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಈ ರೀತಿ ರಾಜ್ಯದಲ್ಲಿ ಜನರನ್ನು ಭಯಭೀತರನ್ನಾಗಿ ಮಾಡುವ ವಾತಾವರಣ ಸುಷ್ಟಿಯಾಗುತ್ತಿದೆ. ನಮ್ಮ ಸರ್ಕಾರದ ಅವಧಿಯಲ್ಲಿ ಇಂತಹ ಘಟನೆಗಳು ನಡೆದಿಲ್ಲ. ನಿನ್ನೆ ಬೆಳವಣಿಗೆ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದ್ದು, ಇದರ ವಾಸ್ತವತೆಯನ್ನು ಜನರ ಮುಂದೆ ಇಡಬೇಕು. ಸರ್ಕಾರ, ಜನರ ಸಮಸ್ಯೆ, ಆತಂಕ ದೂರಮಾಡಬೇಕೆ ಹೊರತು ಈ ರೀತಿ ಭೀತಿಗೊಳಪಡಿಸುವುದಲ್ಲ ಎಂದು ಹೇಳಿದರು.
ಕರಾವಳಿಯಲ್ಲಿ ಪದೇ ಪದೇ ಶಾಂತಿ ಕದಡುವ ವಾತಾವರಣ ನಿರ್ಮಾಣ ಮಾಡುವ ಮೂಲಕ ಜನರಲ್ಲಿ ಭಯ ಭೀತರನ್ನಾಗಿ ಮಾಡಲಾಗುತ್ತಿದೆ. ಈ ರೀತಿ ಭಯದ ಸೃಷ್ಟಿಸುವುದು, ಸಮುದಾಯ, ಧರ್ಮದ ಮಧ್ಯೆ ಸಾಮರಸ್ಯ ಹಾಳುಮಾಡುವ ಕೆಲಸ ಮಾಡಬೇಡಿ. ತಪ್ಪಿತಸ್ಥರ ಮೇಲೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಿ. ಯಾರನ್ನೋ ಮೆಚ್ಚಿಸಲು ನೀವು ಕೆಲಸ ಮಾಡಬೇಡಿ. ಇದು ಆರ್ಎಸ್ಎಸ್ ಕಂಪನಿಯ ಸರ್ಕಾರವಲ್ಲ. ಅಧಿಕಾರಿಗಳು ಮುಲಾಜಿಲ್ಲದೆ ಕೆಲಸ ಮಾಡಿ, ತಪ್ಪಿತಸ್ಥರ ಮೇಲೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು. ಜನರನ್ನ ದಾರಿ ತಪ್ಪಿಸುವ ಪ್ರಹಸನವಾಗಬಾರದು ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ