ಜಿಲ್ಲೆ ಮಾಡಿ ಅಭಿವೃದ್ಧಿ ಮಾಡಿದ್ದು ನಾನು; ವೇದಿಕೆ ಮೇಲೆ ಕಿತ್ತಾಡಿಕೊಳ್ಳುತ್ತಿರುವುದು ಇವರು; ಕುಮಾರಸ್ವಾಮಿ ಆಕ್ರೋಶ

ಪ್ರಗತಿವಾಹಿನಿ ಸುದ್ದಿ; ಮೈಸೂರು: ಸಿಎಂ ಎದುರಲ್ಲೇ ಸಂಸದ ಡಿ.ಕೆ.ಸುರೇಶ್ ಹಾಗೂ ಸಚಿವ ಅಶ್ವತ್ಥನಾರಾಯಣ ಕಿತ್ತಾಟ ನಡೆಸಿರುವುದನ್ನು ತೀವ್ರವಾಗಿ ಖಂಡಿಸಿರುವ ಮಾಜಿ ಸಿಎಂ ಹೆಚ್.ಡಿ.ಕುಮರಸ್ವಾಮಿ ಜನಪ್ರತಿನಿಧಿಗಳ ವರ್ತನೆಯನ್ನು ಜನರು ಗಮನಿಸುತ್ತಿದ್ದಾರೆ. ಇಂಥ ಜನಪ್ರತಿನಿಧಿಗಳಿಂದ ಜನರು ಹುಷಾರಾಗಿರಬೇಕು ಎಂದು ಹೇಳಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಕುಮಾರಸ್ವಾಮಿ, ಜನಪ್ರತಿನಿಧಿಗಳು ತಾಳ್ಮೆಯಿಂದಯಿರಬೇಕು. ಜನರ ಸಮಸ್ಯೆಗಳಿಗೆ ಸ್ಪಂದಿಸಿ ಬಗೆಹರಿಸುವ ಕೆಲಸ ಮಾಡಬೇಕು. ಆದರೆ ಮುಖ್ಯಮಂತ್ರಿಗಳ ಎದುರಲ್ಲೇ ವೇದಿಕೆ ಮೇಲೆ ಕಿತ್ತಾಟ ನಡೆಸಿದ್ದಾರೆ ಎಂದರೆ ಗೂಂಡಾಸಂಸ್ಕೃತಿಯಿಂದ ಬಂದವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ? ಎಂದರು.
ರಾಮನಗರವನ್ನು ಜಿಲ್ಲೆಯನ್ನಾಗಿ ಮಾಡಿ ಅಭಿವೃದ್ಧಿ ಮಾಡಿದ್ದು ನಾನು ಆದರೆ ಇಂದು ಬಿಜೆಪಿ ಹಾಗೂ ಕಾಂಗ್ರೆಸ್ ಜನಪ್ರತಿನಿಧಿಗಳು ಅಭಿವೃದ್ಧಿ ಮಾಡಿದ್ದು ತಾವೆಂದು ವೇದಿಕೆ ಮೇಲೆ ಕಿತ್ತಾಟ ನಡೆಸಿದ್ದಾರೆ. ನಾನು ಮುಖ್ಯಮಂತ್ರಿಯಾಗಿದ್ದಾಗ ರಾಮನಗರಕ್ಕೆ 360 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಆದರೆ ನಮ್ಮ ಸರ್ಕಾರ ಕೆಳಗಿಳಿಯುತ್ತಿದ್ದಂತೆ ಅನುದಾನವನ್ನೇ ನಿಲ್ಲಿಸಿದರು. ಕಾಂಗ್ರೆಸ್ ನವರು 5 ವರ್ಷಗಳ ಕಾಲ ಅಧಿಕಾರದಲ್ಲಿದ್ದರು ಆಗ ಏನು ಮಾಡಿದರು? ಎಂದು ಪ್ರಶ್ನಿಸಿದ್ದಾರೆ.
ಇಷ್ಟು ದಿನ ಶಾಂತಿಯಿಂದ ಇದ್ದ ರಾಮನಗರದಲ್ಲಿ ಈಗ ಅಶಾಂತಿ ಸೃಷ್ಟಿಸುತ್ತಿದ್ದಾರೆ. ಜನರಲ್ಲಿ ಭಯದ ವಾತಾವರಣ ನಿರ್ಮಿಸುತ್ತಿದ್ದಾರೆ. ಜನಪ್ರತಿನಿಧಿಗಳು ಈ ರೀತಿ ನಡೆದುಕೊಳ್ಳುತ್ತಿರುವುದು ಸರಿಯಲ್ಲ ಎಂದು ಕಿಡಿಕಾರಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ