ಸಿದ್ದರಾಮಯ್ಯ ತಮ್ಮ ತಲೆ ಮೇಲೆ ತಾವೇ ಚಪ್ಪಡಿ ಎಳೆದುಕೊಂಡಿದ್ದಾರೆ; ಫಲಿತಾಂಶದ ಬಳಿಕ ಗೊತ್ತಾಗುತ್ತೆ ಎಂದ ಹೆಚ್ ಡಿಕೆ

ಪ್ರಗತಿವಾಹಿನಿ ಸುದ್ದಿ; ಹುಬ್ಬಳ್ಳಿ: ವಿಪಕ್ಷನಾಯಕ ಸಿದ್ದರಾಮಯ್ಯ ನೂರು ಜನ್ಮ ಎತ್ತಿದರೂ ಜೆಡಿಎಸ್ ಮುಗಿಸಲು ಸಾಧ್ಯವಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯಸಭಾ ಚುನಾವಣೆಗೆ ಕಾಂಗ್ರೆಸ್ ನಿಂದ ಎರಡನೇ ಅಭ್ಯರ್ಥಿ ಕಣಕ್ಕಿಳಿಸಿರುವ ಬಗ್ಗೆ ಸಿದ್ದರಾಮಯ್ಯ ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಸಿದ್ದರಾಮಯ್ಯ ಒಂದು ಕಲ್ಲಲ್ಲಿ ಎರಡು ಹಕ್ಕಿ ಹೊಡೆದ್ರೋ ಅಥವಾ ಅವರೇ ಹೊಡೆದುಕೊಂಡು ತಮ್ಮ ತಲೆಯ ಮೇಲೆ ಚಪ್ಪಡಿ ಎಳೆದುಕೊಂಡ್ರಾ ಎಂಬುದು ಜೂನ್ 10ರ ರಾಜ್ಯಸಭಾ ಚುನಾವಣಾ ಫಲಿತಾಂಶದ ಬಳಿಕ ಗೊತ್ತಾಗುತ್ತೆ ಎಂದು ಹೇಳಿದರು.
ಅಡ್ಡ ಮತದಾನವಾಗುವ ಬಗ್ಗೆ ಕಾಂಗ್ರೆಸ್ ನಾಯಕರು ಜೆಡಿಎಸ್ ಕುರಿತು ಲಘುವಾಗಿ ಮಾತನಾಡುತ್ತಿದ್ದಾರೆ. ಹಿಂದೆ ನಡೆದಂತೆ ಈಬಾರಿ ಅಡ್ಡ ಮತದಾನವಾಗಲ್ಲ. ಜೆಡಿಎಸ್ ನಲ್ಲಿ 32 ಶಾಸಕರಿದ್ದಾರೆ. ಕೆಲವರಿಗೆ ಅಸಮಾಧಾನವಿದೆ ನಿಜ. ಅಸಮಾಧಾನವಿದ್ದರೂ ಯಾರೂ ಕೂಡ ಕಾಂಗ್ರೆಸ್ ಗೆ ಮತಹಾಕಲ್ಲ ಎಂದು ಹೇಳಿದರು.
ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಖಾನ್ ಅವರಿಗೆ ಸಿಗುವುದು ಕೇವಲ 24 ಮತಗಳು. ಅವರು ಮೊದಲ ಹಂತದಲ್ಲೇ ಎಲಿಮಿನೇಟ್ ಆಗ್ತಾರೆ. ಈ ಬಗ್ಗೆ ನಾನು ಲೆಕ್ಕಾಚಾರ ಹಾಕಿದ್ದೆನೆ. ಸಿದ್ದರಾಮಯ್ಯ, ಡಿಕೆಶಿವಕುಮಾರ್ ಹೊಂದಾಣಿಕೆ ಮಾಡಿಕೊಂಡು ಜೆಡಿಎಸ್ ಮುಗಿಸಬೇಕು ಎಂದು ತಂತ್ರ ಮಾಡುತ್ತಿದ್ದಾರೆ. ಆದರೆ ನಮ್ಮ ಅಭ್ಯರ್ಥಿ ಗೆಲುವು ಖಚಿತ ಎಂಬ ವಿಶ್ವಾಸವಿದೆ ಎಂದು ಹೇಳಿದರು.