ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ದೇಗುಲಗಳ ತೆರವು ಕಾರ್ಯದ ನಿರ್ಧಾರ ರಾಜ್ಯ ಬಿಜೆಪಿ ಸರ್ಕಾರದಿಂದಲೇ ನಡೆಯುತ್ತಿರುವ ಕೆಲಸ. ರಾತ್ರೋ ರಾತ್ರಿ ದೇವಾಲಯಗಳನ್ನು ತೆರವು ಮಾಡುತ್ತಿರುವುದು ಸರಿಯಲ್ಲ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಕುಮಾರಸ್ವಾಮಿ, ಒಂದೆಡೆ ರಾಜ್ಯ ಸರ್ಕಾರದಿಂದಲೇ ದೇವಾಲಯಗಳ ತೆರವು ಕಾರ್ಯಾಚರಣೆ ಮಾಡಲಾಗುತ್ತಿದೆ. ಇನ್ನೊಂದೆಡೆ ಬಿಜೆಪಿ ಅಂಗಪಕ್ಷವಾದ ಹಿಂದೂ ಜಾಗರಣ ಸಮೀತಿಯಿಂದಲೇ ದೇವಾಲಯಗಳ ತೆರವಿನ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಇವರದ್ದೇ ಸರ್ಕಾರ ಇರುವಾಗ ಇವರು ಪ್ರತಿಭಟನೆ ನಡೆಸುತ್ತಿರುವುದು ಯಾರ ವಿರುದ್ಧ? ಸರ್ಕಾರದ ಈ ದ್ವಿಮುಖ ನೀತಿ ಖಂಡನೀಯ ಎಂದು ಕಿಡಿಕಾರಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶವಿದೆ ಎಂದು ರಾತ್ರೋ ರಾತ್ರಿ ದೇವಾಲಯಗಳನ್ನು ಈ ಹಿಂದೆ ತೆರವುಗೊಳಿಸಿದ ಪ್ರಸಂಗವಿದೆಯೇ? ಕೋರ್ಟ್ ಆದೇಶವನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ. ಒಂದು ವೇಳೆ ನ್ಯಾಯಾಲಯ ಆದೇಶ ನೀಡಿದರೂ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟಾಗುತ್ತಿದೆ ಎಂಬ ಕಾರಣಕ್ಕೆ ಸರ್ಕಾರವೇ ಮೇಲ್ಮನವಿ ಸಲ್ಲಿಸಿ ಸಮಸ್ಯೆ ಬಗೆಹರಿಸಿಕೊಳ್ಳುವ ಯತ್ನ ಮಾಡಬಹುದಿತ್ತು. ಈಗಲಾದರೂ ಸರ್ಕಾರ ಈ ನಿಟ್ಟಿನಲ್ಲಿ ಮೇಲ್ಮನವಿ ಸಲ್ಲಿಸಿ ಗೊಂದಲ ಬಗೆಹರಿಸಬಹುದು. ಆದರೆ ರಾಜ್ಯ ಸರ್ಕಾರವೇ ದೇವಾಲಯಗಳ ತೆರವಿಗೆ ಮುಂದಾಗಿದೆ ಎಂದು ಕುಮರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಗಾವಿಗೂ ತಟ್ಟಿದ ದೇವಾಲಯಗಳ ತೆರವು ಭೀತಿ; ಪುರಾತನ ಅಶ್ವತ್ಥಾಮ ದೇವಾಲಯ ತೆರವಿಗೆ ನೋಟೀಸ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ