Kannada NewsKarnataka NewsLatestPolitics

*ರಾಜ್ಯದಲ್ಲಿ ಹನಿ ನೀರಿಗೂ ತತ್ವಾರ; ಗ್ಯಾರಂಟಿ ಸಮಾವೇಶದಲ್ಲಿ ಸರ್ಕಾರ: ಸಿದ್ದರಾಮಯ್ಯನವರೇ ನೀವೇ ನಮ್ಮ ನೀರೋ!! ರಾಜ್ಯದ ಪಾಲಿನ ಝೀರೋ!!*

ಸರ್ಕಾರದ ವಿರುದ್ಧ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕಿಡಿ

ಪ್ರಗತಿವಾಹಿನಿ ಸುದ್ದಿ: ರೋಮ್ ಹೊತ್ತಿ ಉರಿಯುತ್ತಿದ್ದರೆ ಅಲ್ಲಿನ ದೊರೆ ನೀರೋ ಪಿಟೀಲು ಬಾರಿಸುತ್ತಿದ್ದ. ಕರ್ನಾಟಕದಲ್ಲಿ ಜನರು ಬರದಿಂದ ಕಂಗೆಟ್ಟಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀರೋನಂತೆ ವರ್ತಿಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಕಟುವಾಗಿ ಟೀಕಿಸಿದ್ದಾರೆ.

ರಾಜ್ಯದ ಬರ ಪರಿಸ್ಥಿತಿಯನ್ನು ಹಾಗೂ ಜನರ ಸಂಕಷ್ಟವನ್ನು ಅಣಕಿಸುವಂತೆ ಸಿದ್ದರಾಮಯ್ಯ ಅವರ ಸರ್ಕಾರ ವರ್ತಿಸುತ್ತಿದೆ. ಜನರ ತೆರಿಗೆ ಹಣದಲ್ಲಿ ಗ್ಯಾರಂಟಿ ಸಮಾವೇಶಗಳನ್ನು ಮಾಡುತ್ತಾ ಪ್ರಚಾರದ ಜಾತ್ರೆಯಲ್ಲಿ ಮುಳುಗಿದೆ ಎಂದು ಅವರು ಆರೋಪಿಸಿದ್ದಾರೆ.

ರಾಜ್ಯ ಇತಿಹಾಸದಲ್ಲಿ ಕಂಡೂ ಕೇಳರಿಯದ ಬರವಿದೆ. ಜಲಕ್ಷಾಮ ಬಿಗಡಾಯಿಸಿದೆ. ಹನಿ ನೀರಿಗೂ ತತ್ವಾರ, ಜನ ಜಾನುವಾರುಗಳ ಹಾಹಾಕಾರ. ಪರಿಸ್ಥಿತಿ ಹೀಗಿದ್ದರೂ ಕಾಂಗ್ರೆಸ್ ಸರಕಾರ ಕೋಟಿ ಕೋಟಿ ರೂ. ಜನರ ತೆರಿಗೆ ಹಣ ಸುರಿದು ಗ್ಯಾರಂಟಿ ಸಮಾವೇಶಗಳನ್ನು ಮಾಡುತ್ತಿದೆ! ಲಜ್ಜೆಗೇಡು!! ಎಂದು ಕಟುವಾಗಿ ಟೀಕಿಸಿದ್ದಾರೆ.

‘ರೋಮ್ ಹೊತ್ತು ಉರಿಯುತ್ತಿದ್ದರೆ ನೀರೋ ಪಿಟೀಲು ಬಾರಿಸುತ್ತಿದ್ದ!’ ಸಿದ್ದರಾಮಯ್ಯನವರೇ ನೀವೇ ನಮ್ಮ ನೀರೋ!! ರಾಜ್ಯದ ಪಾಲಿನ ಝೀರೋ!! ನಿಮಗೆ ಜನರ ಚಿಂತೆ ಇಲ್ಲ, ಚುನಾವಣೆ ಚಿಂತೆಯಷ್ಟೇ..ಆ ಚಿಂತೆಯೇ ನಿಮ್ಮ ಪಕ್ಷ, ಸರಕಾರಕ್ಕೆ ಚಿತೆಯಾಗಲಿದೆ. ಇದು ಜನರೇ ನುಡಿಯುತ್ತಿರುವ ಭವಿಷ್ಯ. ಪ್ರಜೆಗಳ ಮಾತು, ಆ ಪರಮೇಶ್ವರನ ಮಾತು ಒಂದೇ! ಸುಳ್ಳಾಗದು ಎಂದು ಕುಮಾರಸ್ವಾಮಿ ಅವರು ಹೇಳಿದ್ದಾರೆ.

ಬರಪೀಡಿತ ರೈತರಿಗೆ ಕೊಡಲು ಈ ನಿಮ್ಮ ಸರಕಾರಕ್ಕೆ ₹2000 ಗತಿ ಇಲ್ಲ. ಆದರೆ, ಗ್ಯಾರಂಟಿ ಸಮಾವೇಶಗಳಿಗೆ ಬೇಕಾದಷ್ಟು ಹಣವಿದೆ. ತುರ್ತು ಉದ್ದೇಶಕ್ಕೆ ಇರಿಸಿರುವ ಜಿಲ್ಲಾಧಿಕಾರಿ,ತಹಸೀಲ್ದಾರುಗಳ ಪಿಡಿ ಖಾತೆಗೆ ನಿಮ್ಮ ಸರಕಾರ ಕನ್ನ ಹಾಕಿದೆ. ಜನರ ಹಾಹಾಕಾರವೇ ನಿಮಗೆ ಭರ್ಜರಿ ಆಹಾರ!! ಹೌದಲ್ಲವೇ? ಇದೆಂಥಾ ಸಿದ್ದನಾಮಿಕ್ಸ್ ಸಿದ್ದರಾಮಯ್ಯನವರೇ? ಎಂದು ಮಾಜಿ ಮುಖ್ಯಮಂತ್ರಿಗಳು ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.

ಈ ಗ್ಯಾರಂಟಿ ಸಮಾವೇಶಗಳಿಗೆ, ಜಾಹೀರಾತು ಜಾತ್ರೆಗಳಿಗೆ ವರ್ಷದಿಂದ ಎಷ್ಟು ಸಾವಿರ ಕೋಟಿ ಸುರಿದಿದ್ದಿರಿ ಸಿದ್ದರಾಮಯ್ಯನವರೇ? ಜನರ ಮುಂದೆ ಲೆಕ್ಕ ಇಡಿ. ಬೇಕಾದರೆ ‘ಗ್ಯಾರಂಟಿ ಪ್ರಚಾರ ಸಮಾವೇಶ ಖರ್ಚು ಬಾಬತ್ತಿನ ಶ್ವೇತಪತ್ರ’ ಹೊರಡಿಸಿ. ನಿಮ್ಮ ಸರಕಾರದ ಅಸಲಿ ಬಣ್ಣ ಏನೆಂಬುದು ಜನರಿಗೆ ಗೊತ್ತಾಗಲಿ ಎಂದು ಅವರು ಒತ್ತಾಯ ಮಾಡಿದ್ದಾರೆ.

ಒಂದು ವರ್ಷದಿಂದ ನಿಮ್ಮ ಇಡೀ ಸರಕಾರದ ಬದುಕು ಜಾಹೀರಾತು ಮೇಳದಲ್ಲೇ ಮುಗಿದು ಹೋಗಿದೆ. ನಿಮ್ಮ ಹಿಂದೆ ಮುಂದೆ ಸುತ್ತುವ ಪಟಾಲಂಗಳ ಏಜೆನ್ಸಿಗಳ ಮೂಲಕ ‘ಜಾಹೀರಾತು ಜಾತ್ರೆ’ಯನ್ನು ಎಗ್ಗಿಲ್ಲದೆ ಮಾಡುತ್ತಿದ್ದೀರಿ. ಬರದಲ್ಲಿ ಬೆಂದು ಕಣ್ಣೀರು ಹಾಕುತ್ತಿರುವ ಜನರ ಹಣವನ್ನು ಹೀಗೆ ಪ್ರಚಾರದ ತೆವಲಿಗೆ ಸುರಿಯುತ್ತಿರುವ ನಿಮಗೆ ನಾಚಿಕೆ ಆಗುವುದಿಲವೇ? ಎಂದು ಅವರು ಕೇಳಿದ್ದಾರೆ.

Related Articles

Back to top button