*ಎಚ್ ೫ ಎನ್ ೧ ಹಕ್ಕಿಜ್ವರ: ರೋಗ ತಡೆಗಟ್ಟಲು ಜಿಲ್ಲೆ ಸಿದ್ಧ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ನೆರೆಯ ಮಹಾರಾಷ್ಟ್ರ ರಾಜ್ಯದ ಲಾತೂರಿನ ಉದಯಗಿರಿಯಲ್ಲಿ ಎಚ್ ೫ ಎನ್ ೧ ಹಕ್ಕಿಜ್ವರ (ಕೋಳಿ ಶೀತ ಜ್ವರ) ರೋಗೊದ್ರೇಕ ಪತ್ತೆಯಾಗಿದ್ದು, ಗಡಿ ಭಾಗವಾದ ಬೆಳಗಾವಿ ಜಿಲ್ಲೆಯಲ್ಲಿ ರೋಗೊದ್ರೇಕ ಉಂಟಾಗದಂತೆ ಕ್ರಮ ಕೈಗೊಳ್ಳಲಾಗಿದೆ.
ಜಿಲ್ಲಾಡಳಿತ, ಜಿಲ್ಲಾ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಅರಣ್ಯ ಇಲಾಖೆಗಳ ಸಹಯೋಗದೊಂದಿಗೆ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ೨೦ ನೇ ಜಾನುವಾರು ಗಣತಿಯ ಪ್ರಕಾರ ಬೆಳಗಾವಿ ಜಿಲ್ಲೆಯಲ್ಲಿ ೨೬.೪೦ ಲಕ್ಷ ಮಾಂಸ / ಮೊಟ್ಟೆ ಕೋಳಿಗಳಿವೆ.
ಕೇಂದ್ರ ಸರ್ಕಾರದ ಮುನ್ನೆಚ್ಚರಿಕಾ ಕ್ರಮಗಳನ್ವಯ ಈಗಾಗಲೇ ಜಿಲ್ಲೆಯ ಗಡಿಭಾಗಗಳಾದ ಅಥಣಿ ತಾಲ್ಲೂಕಿನ ಕೊಟ್ಟಲಗಿ, ಕಾಗವಾಡ, ನಿಪ್ಪಾಣಿ ತಾಲ್ಲೂಕಿನ ಕೊಗನೊಳ್ಳಿ, ಹುಕ್ಕೇರಿ ತಾಲ್ಲೂಕಿನ ಸಂಕೇಶ್ವರ ಬೆಳಗಾವಿ ತಾಲ್ಲೂಕಿನ ಹಿಂಡಲಗಾ, ಚಿಕ್ಕೋಡಿ ತಾಲ್ಲೂಕಿನ ಎಕ್ಸಂಬಾ ಮತ್ತು ಖಾನಾಪೂರ ತಾಲ್ಲೂಕಿನ ಕಣಕುಂಬಿ ಸೇರಿ ಒಟ್ಟು ೦೭ ಚೆಕ್ ಪೋಸ್ಟಗಳನ್ನು ಜಿಲ್ಲಾ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆವತಿಯಿಂದ ಪ್ರಾರಂಭಿಸಲಾಗಿದೆ.
ಪ್ರತಿಯೊಂದು ಚೆಕ್ ಪೋಸ್ಟಗಳಲ್ಲಿ ಪ್ರತಿ ೦೮ ಗಂಟೆಗಳಿಗೆ ಇಬ್ಬರಂತೆ ೦೩ ಪಾಳೆಯಗಳಲ್ಲಿ ೨೪/೭ ಕಾರ್ಯನಿರ್ವಹಿಸುವಂತೆ ಸಿಬ್ಬಂದಿಗಳನ್ನು ನೀಯೋಜಿಸಲಾಗಿದ್ದು, ಮಹಾರಾಷ್ಟ್ರದಿಂದ ಬರುವ ಕೋಳಿ, ಮೊಟ್ಟೆ, ಕೋಳಿ ಮಾಂಸ ಹಾಗೂ ಕೋಳಿಯ ಉಪ ಉತ್ಪನ್ನಗಳನ್ನು ಚೆಕ್ ಪೋಸ್ಟಗಳಲ್ಲಿ ತಪಾಸಣೆ ಕೈಗೊಳ್ಳಲಾಗುತ್ತಿದೆ.
ಜಿಲ್ಲೆಯ ಎಲ್ಲಾ ತಾಲ್ಲೂಕಿನ ನದಿ ಅಂಚಿನ ಗ್ರಾಮಗಳಲ್ಲಿ ಹಾಗೂ ಕೆರೆ ಕುಂಟೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜಮೆಯಾಗುವ ವಲಸೆ ಹಕ್ಕಿಗಳು ಮತ್ತು ಇತರೆ ಹಕ್ಕಿಗಳ ಮೇಲೆ ತೀವ್ರ ನಿಗಾವಹಿಸಲಾಗುತ್ತಿದೆ. ಅಂತಹ ಸ್ಥಳಗಳಲ್ಲಿ ಹಕ್ಕಿಗಳ ಅಸಹಜ ಸಾವು ಕಂಡುಬಂದಲ್ಲಿ ರೋಗದ ಧೃಢೀಕರಣಕ್ಕಾಗಿ ಮರಣಿಸಿದ ಹಕ್ಕಿಯ ದೇಹವನ್ನು ನಿಯಮಾನುಸಾರ ಎಸ್.ಆರ್.ಡಿ.ಡಿ.ಎಲ್. ಬೆಂಗಳೂರು ಇವರಿಗೆ ಸಲ್ಲಿಸಲು ಎಲ್ಲಾ ತಾಲ್ಲೂಕಿನ ಮುಖ್ಯಪಶುವೈದ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ.
ಕಾಲಕಾಲಕ್ಕೆ ವಿವಿಧ ಮಾದರಿಗಳನ್ನು ಸಂಗ್ರಹಿಸಿ ಕೋಳಿಶೀತ ಜ್ವರ ದೃಢೀಕರಣಕ್ಕಾಗಿ ನಿಯಮಿತವಾಗಿ ತಾಲ್ಲೂಕಿನಲ್ಲಿರುವ ಕೋಳಿ ಫಾರಂಗಳಿಂದ ಪ್ರತಿ ಸೋಮವಾರ ಪ್ರತಿ ತಾಲ್ಲೂಕಿನಿಂದ ಎರಡು ಪರಿಸರ ಮಾದರಿ, ಎರಡು ಸೀರಂ ಮಾದರಿ, ಎರಡು ಕ್ಲೋಯೆಕಲ್ ಮಾದರಿ, ಎರಡು ಟ್ರೇಕಿಯಲ್ ಮಾದರಿಗಳನ್ನು ನಿಯಮಾನುಸಾರ ಸಂಗ್ರಹಿಸಿ ರೋಗ ಪತ್ತೆಗಾಗಿ ಪಶು ರೋಗ ತನಿಖಾ ಪ್ರಯೋಗಾಲಯ ಮತ್ತು ಮಾಹಿತಿ ಕೇಂದ್ರ, ಬೆಳಗಾವಿಯಲ್ಲಿ ಸಲ್ಲಿಸಲಾಗುತ್ತಿದೆ.
ಈವರೆಗೂ ಬೆಳಗಾವಿ ಜಿಲ್ಲೆಯಿಂದ ೩೬೩ ಸೀರಂ, ೩೬೩ ಕ್ಲೋಯೆಕಲ್, ೩೬೩ ಟ್ರೇಕಿಯಲ್ ಮತ್ತು ೧೩೮ ಪರಿಸರ ಮಾದರಿಗಳನ್ನು ಪಶು ರೋಗ ತನಿಖಾ ಪ್ರಯೋಗಾಲಯಕ್ಕೆ ಸಲ್ಲಿಸಲಾಗಿದೆ.
ಕೋಳಿಶೀತ ಜ್ವರ ನಿಯಂತ್ರಣ ಕಾರ್ಯಕ್ರಮಕ್ಕೆ ಜಿಲ್ಲಾ ಮಟ್ಟದಲ್ಲಿ ಒಬ್ಬ ನೋಡಲ್ ಅಧಿಕಾರಿ ಹಾಗೂ ಒಬ್ಬ ತಾಂತ್ರಿಕ ಸಹಾಯಕರನ್ನು ಹಾಗೂ ೧೫ ತಾಲ್ಲೂಕು ಮುಖ್ಯಪಶುವೈದ್ಯಾಧಿಕಾರಿ(ಆಡಳಿತ) ಇವರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ.
ತಾಲ್ಲೂಕು ಮಟ್ಟದಲ್ಲಿ ಕ್ಷೇತ್ರ ಕಾರ್ಯಾಚರಣೆಗಾಗಿ ಕ್ಷಿಪ್ರ ಕಾರ್ಯಾಚರಣೆ ಪಡೆಯನ್ನು ರಚಿಸಿಲಾಗಿದೆ. ಒಂದು ಟೀಮ್ ಒಬ್ಬ ನುರಿತ ಪಶುವೈದ್ಯಾಧಿಕಾರಿ, ಒಬ್ಬ ಸಹಾಯಕ ಸಿಬ್ಬಂದಿ ಮತ್ತು ೦೨ ಅನುಚರರನ್ನು ಒಳಗೊಂಡಿರುತ್ತದೆ. ಹಾಗೂ ಕಾರ್ಯಾಚರಣೆ ಪಡೆಯ ಸದಸ್ಯರಿಗೆ ಕೋಳಿಶೀತ ಜ್ವರ ರೋಗೊದ್ರೇಕ ಕಂಡುಬಂದಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಪ್ರಕಟಣೆಯಲ್ಲಿ ಉಪ ನಿರರ್ದೇಶಕರು(ಆ) ರವರು ತಿಳಿಸಿರುತ್ತಾರೆ.
ಕೋಳಿಸಾಕಾಣಿಕೆದಾರರಿಗೆ / ಕೋಳಿ ಉದ್ಯಮಿದಾರರಿಗೆ ಕೋಳಿಶೀತ ಜ್ವರ ತಡೆಗಟ್ಟುವ ಕುರಿತು ಮಾಹಿತಿ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳು ಕ್ರಮ ವಹಿಸಲಾಗಿದೆ.
ಜಿಲ್ಲಾಧಿಕಾರಿಗಳ ಹೇಳಿಕೆ
ನೆರೆಯ ತೆಲಂಗಾಣ, ಆಂಧ್ರ ಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಎಚ್ ೫ ಎನ್ ೧ ಹಕ್ಕಿಜ್ವರ (ಕೋಳಿ ಶೀತ ಜ್ವರ) ರೋಗೊದ್ರೇಕಗಳು ಪತ್ತೆಯಾಗಿದ್ದು, ಗಡಿ ಭಾಗವಾದ ಬೆಳಗಾವಿ ಜಿಲ್ಲೆಯಲ್ಲಿ ಮುನ್ನೇಚ್ಚರಿಕಾ ಕ್ರಮವಾಗಿ ಜಿಲ್ಲಾಡಳಿತ, ಜಿಲ್ಲಾ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಅರಣ್ಯ ಇಲಾಖೆಗಳ ಸಹಯೋಗದೊಂದಿಗೆ ಸಭೆ ಜರುಗಿಸಿ ರೋಗೋದ್ರೇಕವನ್ನು ತಡೆಗಟ್ಟಲು ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಮುಂದುವರೆದು ಜಿಲ್ಲೆಯಲ್ಲಿ ಒಟ್ಟು ೦೭ ಚೆಕಪೋಸ್ಟಗಳನ್ನು ರಚಿಸಲಾಗಿದೆ. ಕ್ಷೇತ್ರ ಕಾರ್ಯಾಚರಣೆಗಾಗಿ ೩೩ ಕ್ಷಿಪ್ರ ಕಾರ್ಯಾಚರಣೆ ಪಡೆಗಳನ್ನು ರಚಿಸಿ, ಚೆಕ್ ಪೋಸ್ಟಗಳಲ್ಲಿ ಪ್ರತಿ ೦೮ ಗಂಟೆಗಳಿಗೆ ಇಬ್ಬರಂತೆ ೦೩ ಪಾಳೆಯಗಳಲ್ಲಿ ೨೪/೭ ಕಾರ್ಯನಿರ್ವಹಿಸುವಂತೆ ಸಿಬ್ಬಂದಿಗಳನ್ನು ನೀಯೋಜಿಸಲಾಗಿದ್ದು, ಮಹಾರಾಷ್ಟ್ರದಿಂದ ಬರುವ ಕೋಳಿ, ಮೊಟ್ಟೆ, ಕೋಳಿ ಮಾಂಸ ಹಾಗೂ ಕೋಳಿಯ ಉಪ ಉತ್ಪನ್ನಗಳನ್ನು ಚೆಕ್ ಪೋಸ್ಟಗಳಲ್ಲಿ ತಪಾಸಣೆ ಕೈಗೊಳ್ಳಲಾಗುತ್ತಿದೆ.
ರೋಗೋದ್ರೇಕ ಉಂಟಾದಲ್ಲಿ ಜಿಲ್ಲಾಡಳಿತವು ರೋಗೋದ್ರೇಕವನ್ನು ತಡೆಗಟ್ಟಿ ಮರಣ ಹೊಂದಿದ ಕೋಳಿಗಳನ್ನು ಸುರಕ್ಷಿತವಾಗಿ ವಿಲೇವಾರಿ ಮಾಡಲು ಬೇಕಾದಂತಹ ಸೋಂಕು ನಿವಾರಕಗಳು, ಪಿ.ಪಿ.ಇ ಕಿಟ್, ಜೆ.ಸಿ.ಬಿಗಳು, ಫಾಗಿಂಗ್ ಮಷಿನ, ಗನ್ನಿ ಬ್ಯಾಗ್ ಹಾಗೂ ಇನ್ನೀತರೆ ಅವಶ್ಯಕ ಸಾಮಗ್ರಿಗಳನ್ನು ಕ್ರೋಢಿಕರಿಸಲು ಕ್ರಮವಹಿಸಲಾಗಿದೆ
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಹೇಳಿಕೆ
ಕೋಳಿಸಾಕಾಣಿಕೆದಾರರಿಗೆ / ಕೋಳಿ ಉದ್ಯಮಿದಾರರಿಗೆ ಕೋಳಿಶೀತ ಜ್ವರದ ಕುರಿತು ಮಾಹಿತಿ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲು ಪಶು ಪಾಲನಾ ಇಲಾಖೆಯವರಿಗೆ ಸೂಚಿಸಲಾಗಿದೆ. ಈ ರೋಗವು ಪಾರಣಿಜನ್ಯ ಪ್ರಾಮುಖ್ಯತೆಯನ್ನು ಪಡೆದಿರುವುರಿಂದ ಪಶು ಪಕ್ಷಿಗಳಿಂದ ಸಹ ಮನುಷ್ಯರಿಗೂ ಹರಡುವ ಸಂಭವವಿರುತ್ತದೆ. ಆದರೆ ಜಿಲ್ಲೆಯಲ್ಲಿ ಕೋಳಿಶೀತ ಜ್ವರದ ರೋಗೋದ್ರೇಕದ ಯಾವುದೇ ಪ್ರಕರಣಗಳು ಪತ್ತೆಯಾಗಿರುವುದಿಲ್ಲ. ಕೋಳಿ ಮಾಂಸ ಮತ್ತು ಮೊಟ್ಟೆಗಳ ಸೇವಿಸುವ ಪ್ರಿಯರು ಯಾವುದೇ ಆತಂಕ ಪಡುವ ಅಗತ್ಯವಿರುವುದಿಲ್ಲ. ಮುಂದುವರೆದು ಕೋಳಿ ಮಾಂಸವನ್ನು ಹಾಗೂ ಮೊಟ್ಟೆಗಳನ್ನು ೭೦ ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ಉಷ್ಣಾಂಶದಲ್ಲಿ ಬೇಯಿಸಿ ಸೇವಿಸುವುದರಿಂದ ವೈರಾಣುಗಳು ನಿಷ್ಕ್ರಿಯವಾಗುತ್ತವೆ ಹಾಗೂ ಆರೋಗ್ಯಕ್ಕೆ ಯಾವುದೇ ಹಾನಿ ಆಗುವುದಿಲ್ಲ. ಜಿಲ್ಲೆಯ ಕೋಳಿ ಮತ್ತು ಇತರೆ ಹಕ್ಕಿಗಳ ಅಸಹಜ ಸಾವು ಉಂಟಾದಲ್ಲಿ ಹತ್ತಿರದ ಪಶುವೈದ್ಯರನ್ನು ಸಂಪರ್ಕಿಸಲು ಸಹ ಸೂಚಿಸಲಾಗಿದೆ.