Latest

2 ವರ್ಷಗಳ ನಂತರ ಹಜ್ ಯಾತ್ರೆಯ ಪ್ರಕ್ರಿಯೆಗೆ ಸಚಿವೆ ಶಶಿಕಲಾ ಜೊಲ್ಲೆ ಚಾಲನೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕರೊನಾ ಕಾರಣದಿಂದ ಕಳೆದ ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ಹಜ್ ಯಾತ್ರೆಯ ಪ್ರಕ್ರಿಯೆಗೆ ಇಂದು ಮಾನ್ಯ ಮುಜರಾಯಿ, ಹಜ್ ಮತ್ತು ಔಕಾಫ್ ಸಚಿವೆ ಶ್ರೀಮತಿ ಶಶಿಕಲಾ ಜೊಲ್ಲೆ ಅವರು ಇಂದು ನಗರದ ಹಜ್ ಭವನದಲ್ಲಿ ಚಾಲನೆ ನೀಡಿದರು.

ಆನ್ ಲೈನ್ ಅರ್ಜಿಗಳ ಪ್ರಕ್ರಿಯೆಗೆ ಚಾಲನೆ ನೀಡಿ ಸಚಿವರು ಮಾತನಾಡಿದರು. ಮುಸ್ಲಿಂ ಸಮುದಾಯದ ಪ್ರಮುಖ ಧಾರ್ಮಿಕ ಯಾತ್ರೆ ಹಜ್. ಕರೊನಾ ಕಾರಣದಿಂದ ಕಳೆದ 2 ವರ್ಷಗಳಿಂದ ಇದು ಸ್ಥಗಿತಗೊಂಡಿತ್ತು. ವಿಶ್ವದಾದ್ಯಂತ ಕರೊನಾ ಲಸಿಕೆ ಕಾರ್ಯ ಚುರುಕುಗೊಂಡಿದ್ದು, ಕರೊನಾ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ ಹಜ್ ಯಾತ್ರೆಗೆ ಅವಕಾಶ ನೀಡುವ ನಿಟ್ಟಿನಲ್ಲಿ ಪ್ರಕ್ರಿಯೆಗಳನ್ನು ಪ್ರಾರಂಭಿಸಲಾಗಿದೆ ಎಂದರು.

ಆನ್ ಲೈನ್ ಮೂಲಕ ಅರ್ಜಿ ಪ್ರಕ್ರಿಯೆಗೆ ಚಾಲನೆ:
ಈ ಬಾರಿ ಹಜ್ ಯಾತ್ರೆಗೆ ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಇರುವ ಜನರು ಆನ್ ಲೈನ್ ಮೂಲಕವೇ ಸುಲಭವಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಜನವರಿ 31, 2022 ರ ವರೆಗೆ ಅರ್ಜಿಯನ್ನು ಸಲ್ಲಿಸಲು ಕಾಲಾವಕಾಶ ನೀಡಲಾಗಿದೆ. ಮುಖ್ಯಮಂತ್ರಿ ಅವರ ಸಮ್ಮುಖದಲ್ಲಿ ಖುರಾ ನಡೆಸಿ, ಜುಲೈ 2022 ರಲ್ಲಿ ಹಜ್ ಯಾತ್ರೆಯನ್ನು ಅಯೋಜಿಸಲಾಗುವುದು ಎಂದು ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.

ಯಾತ್ರೆಯಲ್ಲಿ ತೊಂದರೆ ಆಗದಂತೆ ಸೌಲಭ್ಯಗಳನ್ನು ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚನೆ:

ಮುಸ್ಲಿಂ ಸಮುದಾಯ ದವರು ಶ್ರದ್ಧೆ ಮತ್ತು ಭಕ್ತಿಯಿಂದ ಕೈಗೊಳ್ಳುವ ಈ ಯಾತ್ರೆಯಲ್ಲಿ ಅವರಿಗೆ ಯಾವುದೇ ತೊಂದರೆ ಆಗದಂತೆ ಸೌಲಭ್ಯಗಳನ್ನು ಕಲ್ಪಿಸಬೇಕು. ವಿಮಾನದ ವ್ಯವಸ್ಥೆ, ಅಲ್ಲಿ ತಂಗುವ ಹಾಗೂ ಇನ್ನಿತರ ವ್ಯವಸ್ಥೆಗಳಲ್ಲಿ ಲೋಪ ವಿರದಂತೆ ಕ್ರಮಗಳನ್ನು ಕೈಗೊಳ್ಳುವಂತೆ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ರಾಜ್ಯದ ವಿವಿಧ ಭಾಗಗಳಲ್ಲಿ ಹಜ್ ಭವನ ನಿರ್ಮಾಣ, ಬೆಂಗಳೂರು ಹಜ್ ಭವನದ ರಿಪೇರಿ, ಹೆಚ್ಚಿನ ಅನುದಾನ ದೊರಕಿಸಿಕೊಡಲು ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಇಂದು ಬೆಳಿಗ್ಗೆ ಕೇಂದ್ರ ಹಜ್ ಸಮಿತಿಯ ಸದಸ್ಯರೊಂದಿಗೆ ಸಭೆ ನಡೆಸಿ ಹಲವಾರು ಅಭಿವೃದ್ಧಿ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದೇವೆ. ಕೇಂದ್ರ ಸರಕಾರದ ಸಹಯೋಗದಲ್ಲಿ ರಾಜ್ಯದಲ್ಲಿ ಕೈಗೊಳ್ಳಬೇಕಾದ ಕ್ರಮಗಳನ್ನು ಎಂದು ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.

ಸಭೆಯಲ್ಲಿ ಕರ್ನಾಟಕ ರಾಜ್ಯ ಹಜ್ ಸಮಿತಿಯ ಅಧ್ಯಕ್ಷರಾದ ರೌಫುದ್ದೀನ್ ಕಛೇರಿವಾಲೈ, ರಾಜ್ಯಸಭಾ ಸದಸ್ಯ ಹಾಗೂ ಹಜ್ ಸಮಿತಿ ಸದಸ್ಯ ಸೈಯ್ಯದ್ ನಾಸಿರ್ ಹುಸೇನ್, ಶಾಸಕಿ ಹಾಗೂ ಸಮಿತಿ ಸದಸ್ಯೆ ಖಾನಿಜ್ ಫಾತಿಮಾ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ನದಿ ತೀರದ ಗ್ರಾಮಗಳ ಸಂತ್ರಸ್ಥ ಕುಟುಂಬಗಳಿಗೆ ಶೀಘ್ರ ವಸತಿ ಸೌಲಭ್ಯ: ಶಾಸಕ ಬಾಲಚಂದ್ರ ಜಾರಕಿಹೊಳಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button