Latest

ಹಿಜಾಬ್ ಬೆನ್ನಲ್ಲೇ ರಾಜ್ಯದಲ್ಲಿ ಆರಂಭವಾದ ಹಲಾಲ್ ವಿವಾದ; ಏನಿದು ಹಲಾಲ್-ಜಟ್ಕಾ ಕಟ್?

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಯುಗಾದಿ ಸಂಭ್ರಮದ ಸಂದರ್ಭದಲ್ಲಿ ರಾಜ್ಯದಲ್ಲಿ ಹಲಾಲ್ ಕಟ್ ವಿವಾದ ಆರಂಭವಾಗಿದ್ದು, ಹಿಂದೂ ಜಾಗೃತಿ ಸಮಿತಿ ನಡೆಸುತ್ತಿರುವ ಬಾಯ್ಕಾಟ್ ಹಲಾಲ್ ಹೋರಾಟಕ್ಕೆ ಶ್ರೀರಾಮ ಸೇನೆ ಬೆಂಬಲ ನೀಡಿದೆ.

ಈಗಾಗಲೆ ಹಿಂದೂ ಜಾಗೃತಿ ವೇದಿಕೆ ಹಲಾಲ್ ನಿಷೇಧ ಅಭಿಯಾನ ಆರಂಭಸಿದ್ದು, ಇದಕ್ಕೆ ಭಜರಂಗದಳ ಕಾರ್ಯಕರ್ತರು ಬೆಂಬಲ ನೀಡಿದ್ದಾರೆ. ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧೆಡೆಗಳಲ್ಲಿ ಹೋಟೆಲ್, ಅಂಗಡಿಗಳಿಗೆ ಹಾಕಿದ್ದ ಹಲಾಲ್ ಬೋರ್ಡ್ ಗಳನ್ನು ತೆರವುಗೊಳಿಸುತ್ತಿದ್ದಾರೆ.

ಹಲಾಲ್ ನಿಷೇಧಕ್ಕೆ ಬೆಂಬಲ ವ್ಯಕ್ತಪಡಿಸಿರುವ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ರಾಜ್ಯ ಹಾಗೂ ದೇಶವನ್ನು ಹಲಾಲ್ ಮುಕ್ತ ಮಾಡಬೇಕು. ಎಲ್ಲಾ ಹಿಂದೂಗಳು ಹಲಾಲ್ ಉತ್ಪನ್ನಗಳನ್ನು ಬಹಿಷ್ಕರಿಸಬೇಕು. ಹಿಂದೆ ಅಕ್ಬರ್, ಔರಂಗಾಜೇಬ್ ಹಿಂದೂಗಳ ಮೇಲೆ ಟ್ಯಾಕ್ಸ್ ಹೇರುತ್ತಿದ್ದರು. ಈಗ ಹಲಾಲ್ ವಿಚಾರ ಹೇರಿದ್ದಾರೆ ಎಂದು ಕಿಡಿಕಾರಿದ್ದಾರೆ.

ಹಲಾಲ್ ವಿರುದ್ಧ ಅಭಿಯಾನ ನಡೆಸುತ್ತಿರುವ ಹಿಂದು ಪರ ಸಂಘಟನೆಗಳು ಯುಗಾದಿ ಬಳಿಕ ಹೊಸ್ತೊಡಕಿಗೆ ಹಲಾಲ್ ಮಾಂಸ ಬಹಿಷ್ಕಾರ ಹಾಕಬೇಕು ಎಂದು ಕರೆ ನೀಡಿವೆ. ಮತ್ತೊಂದೆಡೆ ಹಿಂದೂ ಹೋಟೆಲ್, ಹಿಂದೂಗಳ ಮಟನ್ ಸ್ಟಾಲ್‌ಗಳಲ್ಲಿ ಹಲಾಲ್ ಬೋರ್ಡ್ ತೆರವು ಅಭಿಯಾನವೂ ಆರಂಭವಾಗಿದೆ.

ಜಟ್ಕಾ ಕಟ್ :
ಜಟ್ಕಾ ಕಟ್ ಬಹುತೇಕ ಹಿಂದೂಗಳು ಅನುಸರಿಸುವ ಪದ್ಧತಿ. ಈ ಪದ್ಧತಿಯಲ್ಲಿ ಒಂದು ಪ್ರಾಣಿಯ ವಧೆ ಒಂದೇ ಬಾರಿಗೆ ನಡೆಯುತ್ತದೆ. ಸಾವಿನಲ್ಲೂ ಸಹ ನೋವು ಅನುಭವಿಸಲು ಅವಕಾಶ ಕೊಡದೇ ಪ್ರಾಣಿ ಜೀವ ಬಿಡುವಂತೆ ಮಾಡಲಾಗುತ್ತದೆ. ಜಟ್ಕಾ ಕಟ್ ಅಂದರೆ ಬಲಿ.. ದೈವಬಲಿ ಎಂದು ಕರೆಯುತ್ತಾರೆ. ನಾವು ಯಾವುದೇ ಆಹಾರವನ್ನು ಸೇವಿಸುವ ಮೂದಲು ದೇವರಿಗೆ ನೈವೇದ್ಯ ಅರ್ಪಿಸಿ ತಿನ್ನುವುದು ಪೂರ್ವಜರು ಕಲಿಸಿಕೊಟ್ಟ ಕ್ರಿಯೆ. ಇದಕ್ಕೆ ಅನುಗುಣವಾಗಿ ಈ ಪದ್ಧತಿ ಇದೆ ಎಂದು ಹಿಂದುತ್ವ ಪರ ಸಂಘಟನೆಗಳ ಅಭಿಪ್ರಾಯ.

ಹಲಾಲ್​ ಕಟ್:
ಹಲಾಲ್ ಕಟ್ ನಲ್ಲಿ ವಧಿಸುವ ಪ್ರಾಣಿಯ ರಕ್ತನಾಳವನ್ನು ಕತ್ತರಿಸುವ ಮೂಲಕ ಪ್ರಾಣಿಯ ದೇಹದಲ್ಲಿರುವ ರಕ್ತವನ್ನು ಪೂರ್ತಿ ಹೊರಹಾಕಲಾಗುತ್ತದೆ. ಇದು ಇಸ್ಲಾಂ ಧರ್ಮದ ನಿಯಮಗಳಿಗೆ ಅನುಗುಣವಾಗಿದೆ. ಈ ಮೂಲಕ ರಕ್ತದಲ್ಲಿರುವ ಬ್ಯಾಕ್ಟೀರಿಯಾಗಳು ಹೊರಗೆ ಬರುತ್ತವೆ. ಇದರಿಂದ ಮಾಂಸ ಶುದ್ಧವಾಗಿರುತ್ತದೆ ಎಂದು ಮುಸ್ಲಿಂ ಮುಖಂಡರು ಹೇಳುತ್ತಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button