Kannada NewsKarnataka NewsLatest

*ಹನೂರು ಎನ್ ಕೌಂಟರ್ ಪ್ರಕರಣ: ಮೂವರು ಅರಣ್ಯ ಸಿಬ್ಬಂದಿಗಳಿಗೆ ಜಾಮೀನು ಮಂಜೂರು*

ಪ್ರಗತಿವಾಹಿನಿ ಸುದ್ದಿ: ಚಾಮರಾಜನಗರದ ಕಾವೇರಿ ವನ್ಯಧಾಮದ ಹೊಳೆ ಮುರಿದಟ್ಟಿ ಕರಿಕಲ್ಲು ಗುಡ್ಡದಲ್ಲಿ ಬೇಟೆಗಾರರ ಮೇಲೆ ನಡೆಸಿದ್ದ ಗುಂಡಿನ ದಾಳಿಯಲ್ಲಿ ಮೂವರು ಬಲಿಯಾಗಿದ್ದರು. ಶೂಟೌಟ್‌ ಪ್ರಕರಣದಲ್ಲಿ ಭಾಗಿಯಾಗಿದ್ದ ಮೂವರು ಅರಣ್ಯ ಸಿಬ್ಬಂದಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಲಾಗಿದೆ.

ಅರಣ್ಯ ರಕ್ಷಕ ಶಿವರಾಜ್ ಸಾಸಲವಾಡೆ, ವಾಚರ್‌ಗಳಾದ ಶಿವಲಿಂಗ ನಾಯ್ಕ ಮತ್ತು ಗಿರೀಶ್ ಅವರಿಗೆ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನ್ಯಾಯಾಲಯ, ಕೊಳ್ಳೇಗಾಲದಲ್ಲಿ ನಿರೀಕ್ಷಣಾ ಜಾಮೀನು ಮಂಜೂರಾಗಿದೆ.

ಆಗಸ್ಟ್ 15ರಂದು ಅರಣ್ಯ ಸಿಬ್ಬಂದಿಗಳು ಹೊಳೆ ಮುರಿದಟ್ಟಿ ಅರಣ್ಯ ಪ್ರದೇಶದಲ್ಲಿ ನಡೆಸಿದ್ದ ಗುಂಡಿನ ದಾಳಿಯಲ್ಲಿ ಅಂತೋಣಿಸ್ವಾಮಿ, ಲಾಸರ್ ದೊಡ್ಡಿ ಗ್ರಾಮದ ಡೇವಿಡ್ ಕುಮಾರ್ ಮತ್ತು ಜಗನ್ನಾಥ್ ದೊಡ್ಡಿ ಗ್ರಾಮದ ಜಾನ್ ರೋಸ್ ಪೀಟರ್ ಎಂಬವರು ಮೃತಪಟ್ಟಿದ್ದರು. ಗುಂಡು ಹಾರಿಸಿದ್ದಾರೆ ಎನ್ನಲಾದ ಅರಣ್ಯ ರಕ್ಷಕ ಶಿವರಾಜ್ ಸಾಸಲವಾಡೆ, ವಾಚರ್‌ಗಳಾದ ಶಿವಲಿಂಗ ನಾಯ್ಕ, ಗಿರೀಶ್ ಹಾಗೂ ಇತರ ಸಿಬ್ಬಂದಿಯನ್ನು ಸಿಐಡಿ ಎಸ್‌ಪಿ ಉಮಾ ಪ್ರಶಾಂತ್ ವಿಚಾರಣೆಗೆ ಒಳಪಡಿಸಿದ್ದರು. ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಜಾಮೀನಿಗೆ ಅರ್ಜಿ ಸಲ್ಲಿಸಿದರು. ಕೆಲವೊಂದು ಷರತ್ತು ವಿಧಿಸಿ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಅರ್ಜಿದಾರರು ಈ ಆದೇಶದ ದಿನಾಂಕದಿಂದ 25 ದಿನಗಳೊಳಗೆ ತನಿಖಾಧಿಕಾರಿಯ ಮುಂದೆ ಹಾಜರಾಗಬೇಕು. ಹಾಗೆ ಹಾಜರಾದಾಗ, ತನಿಖಾಧಿಕಾರಿಯು ತಲಾ 1,00,000 ರೂ. ಮೊತ್ತದ ವೈಯಕ್ತಿಕ ಬಾಂಡ್ ಮತ್ತು ಅದೇ ಮೊತ್ತದ ಒಬ್ಬ ಜಾಮೀನುದಾರರನ್ನು ಪಡೆದುಕೊಂಡು ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು ಎಂದು ಷರತ್ತು ವಿಧಿಸಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button