Kannada NewsKarnataka NewsLatest
ಚುನಾವಣೆ ನಿರ್ವಹಣೆಗೆ ರಾಜ್ಯ ಪ್ರಶಸ್ತಿ ಪಡೆದ ಡಾ.ಹರೀಶ್ ಕುಮಾರ ಡಿಸಿಯಾಗಿ ಅಧಿಕಾರ ಸ್ವೀಕಾರ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಉತ್ತಮ ಚುನಾವಣೆ ನಿರ್ವಹಣೆಗಾಗಿ ಚುನಾವಣೆ ಆಯೋಗದಿಂದ ರಾಜ್ಯ ಪ್ರಶಸ್ತಿ ಪಡೆದಿರುವ ಡಾ.ಕೆ.ಹರೀಶ್ ಕುಮಾರ್ ಅವರು ಸೋಮವಾರ ಬೆಳಗಾವಿಯ ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದರು.
ನಿಕಟಪೂರ್ವ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಅಧಿಕಾರ ಹಸ್ತಾಂತರಿಸಿ, ಶುಭ ಕೋರಿದರು. ಬೆಳಗಾವಿ ಲೋಕಸಭಾ ಉಪಚುನಾವಣೆ ಹಿನ್ನೆಲೆಯಲ್ಲಿ ಈ ಬದಲಾವಣೆ ಮಾಡಲಾಗಿದೆ. ಎಂ.ಜಿ.ಹಿರೇಮಠ ಬೆಳಗಾವಿ ಜಿಲ್ಲೆಯವರಾಗಿರುವುದರಿಂದ ಚುನಾವಣೆ ವೇಳೆಯಲ್ಲಿ ಸ್ವಂತ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಲು ಅವಕಾಶವಿರುವುದಿಲ್ಲ.
ಹರೀಶ್ ಕುಮಾರ್ ಉದ್ಯೋಗ ಮತ್ತು ತರಬೇತಿ ಇಲಾಖೆಗೆ ವರ್ಗಾವಣೆಗೊಳ್ಳುವ ಮೊದಲು ಉತ್ತರ ಕನ್ನಡ ಡಿಸಿಯಾಗಿದ್ದರು. ಉತ್ತರ ಕನ್ನಡದಲ್ಲಿ ಅವರು ಚುನಾವಣೆಗಳನ್ನು ಉತ್ತಮವಾಗಿ ನಿರ್ವಹಿಸಿ ಗಮನ ಸೆಳೆದಿದ್ದರು. ಲೋಕಸಭೆ ಚುನಾವಣೆ, ಯಲ್ಲಾಪುರ ಕ್ಷೇತ್ರದ ಉಪ ಚುನಾವಣೆ, ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಮತ್ತು ಗ್ರಾಪಂ ಚುನಾವಣೆ ಸೇರಿದಂತೆ ನಾಲ್ಕು ಮಹತ್ವದ ಚುನಾವಣೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯ ಚುನಾವಣಾ ಆಯೋಗ ಅವರಿಗೆ ಕಳೆದ ಜ. ೨೫ರಂದು ರಾಜ್ಯಪ್ರಶಸ್ತಿ ನೀಡಿ ಗೌರವಿಸಿತ್ತು.
ಪ್ರಸ್ತುತ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಡಾ.ಹರೀಶ್‌ಕುಮಾರ ಅವರನ್ನು ಬೆಳಗಾವಿ ಡಿಸಿಯಾಗಿ ವರ್ಗಾಯಿಸಿದೆ.
ಕೊರೋನಾ ಟಾಸ್ಕ್ ಫೋರ್ಸ್ ಮುಖ್ಯಸ್ಥ
ಕಳೆದ ಫೆ.೧೩ರಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಸ್ಥಾನದಿಂದ ವರ್ಗಾವಣೆಗೊಂಡಿದ್ದ ಡಾ. ಹರೀಶ್‌ಕುಮಾರ ಅವರನ್ನು ಉದ್ಯೋಗ ಮತ್ತು ತರಬೇತಿ ಇಲಾಖೆಯ ಆಯುಕ್ತರನ್ನಾಗಿ ನೇಮಕ ಮಾಡಲಾಗಿತ್ತು.
ಈ ನಡುವೆ ಉತ್ತರ ಕನ್ನಡ ಡಿಸಿಯಾಗಿದ್ದ ಅವಧಿಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯ ನಡುವೆಯೂ ಜಿಲ್ಲೆಯಲ್ಲಿ ಕೋವಿಡ್ ಸೋಂಕನ್ನು ಪರಿಣಾಮಕಾರಿಯಾಗಿ ನಿರ್ವಹಿಸುವಲ್ಲಿ ಯಶಸ್ವಿಯಾಗಿದ್ದ ಹಿನ್ನೆಲೆಯಲ್ಲಿ ಐದು ದಿನಗಳ ಹಿಂದೆ ಅವರನ್ನು ರಾಜ್ಯ ಕೋವಿಡ್ ನಿರ್ವಹಣೆ ಟಾಸ್ಕ್ ಫೋರ್ಸ್ನ ಮುಖ್ಯಸ್ಥರನ್ನಾಗಿ ಹೆಚ್ಚುವರಿ ಜವಾಬ್ದಾರಿ ವಹಿಸಲಾಗಿತ್ತು.
ಈ ಹಿಂದಿನ ಸುದ್ದಿ – ಬೆಳಗಾವಿ ಜಿಲ್ಲಾಧಿಕಾರಿ ಬದಲಾವಣೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ