ನಾಲ್ಕು ತಿಂಗಳ ಹಿಂದಷ್ಟೆ ಮದುವೆಯಾದ ಯುವತಿ ಸಾವು
ಪ್ರಗತಿವಾಹಿನಿ ಸುದ್ದಿ; ಹಾಸನ: ನಾಲ್ಕು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ಯುವತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾಸನದಲ್ಲಿ ನಡೆದಿದೆ.
ಹಾಸನ ಜಿಲ್ಲೆಯ ಸಾಲಗಾಮೆ ಹೋಬಳಿ ಗೌಡಗೆರೆ ಗ್ರಾಮದ ಪ್ರಿಯಾಂಕಾ (23) ಮೃತ ಮಹಿಳೆ. ವರದಕ್ಷಿಣೆ ಕಿರುಕುಳ ನೀಡಿ ತಮ್ಮ ಮಗಳನ್ನು ಗಂಡ ಮತ್ತು ಅತ್ತೆ-ಮಾವ ಸೇರಿಕೊಂಡು ನೇಣು ಬಿಗಿದು ಸಾಯಿಸಿದ್ದಾರೆ ಎಂದು ಯುವತಿ ಮನೆಯವರು ಆರೋಪಿಸಿದ್ದಾರೆ.
ಪ್ರಿಯಾಂಕಾ ಆಲೂರು ತಾಲೂಕಿನ ಪುರಬೈರವನಹಳ್ಳಿ ಗ್ರಾಮದ ಕಿರಣ್ ನನ್ನು ಪ್ರೀತಿಸಿ, ಕಳೆದ ನಾಲ್ಕು ತಿಂಗಳ ಹಿಂದೆ ಮದುವೆಯಾಗಿದ್ದಳು. ಗಂಡನ ಮನೆಯವರು ಮದುವೆ ಬಳಿಕ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ.
ನಮ್ಮ ಮಗಳಿಗೆ ಆಕೆಯ ಗಂಡ ಹಾಗೂ ಅತ್ತೆ, ಮಾವ ವರದಕ್ಷಿಣೆ ತಂದುಕೊಡು ಎಂದು ಕಿರುಕುಳ ನೀಡುತ್ತಿದ್ದರು. ಮಗಳನ್ನು ಕೊಲೆ ಮಾಡಿ ನಂತರ ಆಕೆಯೇ ಆತ್ಮಹತ್ಯೆ ಮಾಡಿಕೊಂಡಿರುವ ರೀತಿಯಲ್ಲಿ ನೇಣು ಬಿಗಿದಿದ್ದಾರೆ ಎಂದು ಪ್ರಿಯಾಂಕಾ ಸಂಬಂಧಿಕರು ಆರೋಪ ಮಾಡಿದ್ದಾರೆ.
ಪ್ರಕರಣ ಸಂಬಂಧ ಪ್ರಿಯಾಂಕಾಳ ಪತಿ ಕಿರಣ್, ಆತನ ತಂದೆ ಲೋಕೇಶ್ ಹಾಗೂ ತಾಯಿ ರುಕ್ಮಿಣಿ ಮೂವರನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ