Kannada NewsKarnataka News

15 ದಿನಗಳಿಗೊಮ್ಮೆ ಡಿಸಿ ಅಧ್ಯಕ್ಷತೆಯಲ್ಲಿ ಸಮನ್ವಯ ಸಭೆ ನಡೆಸಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ-  ದಂಡುಮಂಡಳಿ(ಕಂಟೋನ್ಮೆಂಟ್)ಗೆ ಸೇರಿದ ಜಾಗೆಯಲ್ಲಿ ಸ್ಮಾರ್ಟ್ ಸಿಟಿ, ಪಾಲಿಕೆ ಅಥವಾ ಸಾರಿಗೆ ಸಂಸ್ಥೆಯ ಯಾವುದೇ ಕಾಮಗಾರಿ ಆರಂಭಿಸಲು ಅಥವಾ ಜಾಗೆ ಸ್ವಾಧೀನಕ್ಕೆ ೨೦೧೬ ರ ಸುತ್ತೋಲೆಯ ಪ್ರಕಾರ ನಿಗದಿತ ನಮೂನೆಯಲ್ಲಿ ಮಾಹಿತಿಯನ್ನು ಭರ್ತಿ ಮಾಡಿ ಜಿಲ್ಲಾಧಿಕಾರಿಗಳ ಮೂಲಕ ಸಲ್ಲಿಸಿ ಸೂಕ್ತ ಅನುಮತಿ ಪಡೆದುಕೊಳ್ಳಬೇಕು ಎಂದು ರೈಲ್ವೆ ಇಲಾಖೆಯ ಸಚಿವ ಸುರೇಶ್ ಅಂಗಡಿ ಅವರು ಅಧಿಕಾರಿಗಳಿಗೆ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ (ಅ.೧೧) ನಡೆದ ಸ್ಮಾರ್ಟ್ ಸಿಟಿ ಹಾಗೂ ನಗರೋತ್ಥಾನ ಯೋಜನೆಗಳ ತುರ್ತು ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಂಬಂಧಪಟ್ಟ ಇಲಾಖೆಗಳ ಜಂಟಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸ್ಮಾರ್ಟ್ ಸಿಟಿ ಯೋಜನೆಗೆ ಸಂಬಂಧಿಸಿದ ಯಾವುದೇ ಕಾಮಗಾರಿಗಳು ಬಾಕಿ ಉಳಿಯದಂತೆ ಯುದ್ದೋಪಾದಿಯಲ್ಲಿ ಕೆಲಸ ಮಾಡಬೇಕು.
ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳನ್ನು ಕೈಗೊಳ್ಳುವ ಮುಂಚೆ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಹೆಸ್ಕಾಂ, ಬಿ.ಎಸ್.ಎನ್.ಎಲ್. ಹಾಗೂ ಮಹಾನಗರ ಪಾಲಿಕೆ ಸಮನ್ವಯದೊಂದಿಗೆ ನಿರ್ಧಾರ ಕೈಗೊಳ್ಳಬೇಕು ಎಂದರು.

ಯಾವುದೇ ಹೊಸ ಯೋಜನೆಯ ಪ್ರಸ್ತಾವ ಸಲ್ಲಿಸುವಾಗ ಪಾಲುದಾರ ಇಲಾಖೆಯ ಜತೆ ಸಮಗ್ರವಾಗಿ ಚರ್ಚಿಸಿ ಸೂಕ್ತ ಯೋಜನೆ ರೂಪಿಸಬೇಕು.
ಪ್ರತಿ ಹದಿನೈದು ದಿನಗಳಿಗೊಮ್ಮೆ ಸಮನ್ವಯ ಸಭೆ ನಡೆಸಬೇಕು. ಮುಂಬರುವ ದಿನಗಳಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮನ್ವಯ ಸಭೆ ನಡೆಸಬೇಕು ಎಂದು ಸಚಿವ ಸುರೇಶ್ ಅಂಗಡಿ ತಿಳಿಸಿದರು.
ಅಶೋಕ ವೃತ್ತ ರಸ್ತೆ ಹಾಗೂ ತರಕಾರಿ ಮಾರುಕಟ್ಟೆ ರಸ್ತೆ ಅಗಲೀಕರಣಕ್ಕೆ ಅಗತ್ಯವಾದ ಜಾಗವನ್ನು ಪಡೆದುಕೊಂಡು ಸ್ಮಾರ್ಟ್ ಸಿಟಿ ಯೋಜನೆಯಡಿ ಕಾಮಗಾರಿ ಆರಂಭಿಸಬೇಕು.
ಅದೇ ರೀತಿ ವೆಂಗುರ್ಲಾ ಮತ್ತು ಗಣೇಶಪುರ ರಸ್ತೆ ಅಭಿವೃದ್ಧಿ ಕೆಲಸವನ್ನು ಮಹಾನಗರ ಪಾಲಿಕೆ ವತಿಯಿಂದ ಕೈಗೊಳ್ಳಬೇಕು.
ಮುಂಬರುವ ದಿನಗಳಲ್ಲಿ ದಂಡುಮಂಡಳಿಯ ವ್ಯಾಪ್ತಿಯ ಜಾಗೆಯಲ್ಲಿ ಸ್ಮಾರ್ಟ ಸಿಟಿ ಯೋಜನೆಯಡಿ ಏನೇ ಅಭಿವೃದ್ಧಿ ಕಾರ್ಯ ಕೈಗೊಳ್ಳಬೇಕಾದರೆ ಜಿಲ್ಲಾಧಿಕಾರಿ ಮೂಲಕ ಪ್ರಸ್ತಾವ ಸಲ್ಲಿಸಿ ಅಗತ್ಯ ಅನುಮತಿ ಪಡೆದುಕೊಳ್ಳಬೇಕು ಎಂದು ಸಚಿವ ಸುರೇಶ್ ಅಂಗಡಿ ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಾಂತ್ರಿಕ ಕಾರಣ ನೆಪದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ವಿಳಂಬಗೊಳಿಸದೇ ನಾಗರಿಕರಿಗೆ ಮೂಲಸೌಕರ್ಯಗಳನ್ನು ಒದಗಿಸಿಕೊಡಬೇಕು ಎಂದು ಅವರು ಹೇಳಿದರು.

ಹೆಚ್ಚುವರಿ ಅನುದಾನ-ಪ್ರಸ್ತಾವ ಸಲ್ಲಿಕೆಗೆ ಸಲಹೆ

ಸ್ಮಾರ್ಟ್ ಸಿಟಿ ಕಾಮಗಾರಿ ಕೈಗೊಳ್ಳಲು ಇತರೆ ಇಲಾಖೆಯ ಪೈಪ್ ಲೈನ್ ಮತ್ತಿತರ ಸೌಕರ್ಯಗಳನ್ನು ಸ್ಥಳಾಂತರಕ್ಕೆ ಅಗತ್ಯವಿರುವ ಅನುದಾನ ಪಡೆಯಲು ಸ್ಮಾರ್ಟ್ ಸಿಟಿ ವತಿಯಿಂದ ಪ್ರಸ್ತಾವ ಸಲ್ಲಿಸಿ ಹೆಚ್ಚುವರಿ ಅನುದಾನ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಸಲಹೆ ನೀಡಿದರು.
ನಾನಾವಾಡಿ ರಸ್ತೆ ವಿಸ್ತರಣೆಗೆ ನಿರಾಕ್ಷೇಪಣಾ ಪ್ರಮಾಣಪತ್ರ ಪಡೆಯುವುದು ಮತ್ತು ಗೋಗಟೆ ವೃತ್ತದಿಂದ ನಾನಾವಾಡಿ ಕ್ರಾಸ್ ವರೆಗೆ ಕಾಂಗ್ರೆಸ್ ರಸ್ತೆಯಲ್ಲಿ ಫುಟ್ ಪಾಥ್ ಅಭಿವೃದ್ಧಿಪಡಿಸುವುದು ಮತ್ತು ಸೈಕಲ್ ಟ್ರ್ಯಾಕ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ನಿರಾಕ್ಷೇಪಣಪತ್ರ ಪಡೆಯುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಮಹಾನಗರ ಪಾಲಿಕೆ ಅಥವಾ ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಎಷ್ಟು ಜಾಗ ಅಗತ್ಯವಿದೆ ಎಂಬುದರ ಬಗ್ಗೆ ಹಾಗೂ ಯೋಜನೆಯ ರೂಪುರೇಷೆಯ ಕುರಿತು ನಿಗದಿತ ನಮೂನೆಯಲ್ಲಿ ಮಾಹಿತಿ ನೀಡಿದರೆ ಎನ್.ಓ.ಸಿ. ನೀಡುವ ಬಗ್ಗೆ ಪರಿಶೀಲಿಸಿ ತಕ್ಷಣವೇ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ದಂಡುಮಂಡಳಿ ಅಧ್ಯಕ್ಷ ಬ್ರಿಗೇಡಿಯರ್ ಗೋವಿಂದ ಕಾಲವಾಡ ಹೇಳಿದರು.

ಗೋಗಟೆ ವೃತ್ತದಿಂದ ನಾನಾವಾಡಿ ಕ್ರಾಸ್ ವರೆಗೆ ಕಾಂಗ್ರೆಸ್ ರಸ್ತೆಯಲ್ಲಿ ಫುಟ್ ಪಾಥ್ ಅಭಿವೃದ್ಧಿಪಡಿಸುವುದು ಮತ್ತು ಸೈಕಲ್ ಟ್ರ್ಯಾಕ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪ್ರಸ್ತಾವ ಸಲ್ಲಿಸಲಾಗುವುದು ಎಂದು ಸ್ಮಾರ್ಟ್ ಸಿಟಿ ಯೋಜನೆಯ ವ್ಯವಸ್ಥಾಪಕ ನಿರ್ದೇಶಕರಾದ ಶಿರೀನ್ ನದಾಫ್ ತಿಳಿಸಿದರು.
ರೈಲ್ವೆ ನಿಲ್ದಾಣದ ಬಳಿ ಖಾಸಗಿ ಬಸ್ ಪಾರ್ಕಿಂಗ್ ಅಗತ್ಯವಿರುವ ನಿವೇಶನ ಹಸ್ತಾಂತರಿಸುವುದು, ಸಿಬಿಟಿಯಲ್ಲಿನ ಜಾಗ ತೆರವುಗೊಳಿಸಲು ಅನುಮತಿ ಪಡೆಯುವುದರ ಬಗ್ಗೆ ಚರ್ಚಿಸಲಾಯಿತು.
ದಂಡುಮಂಡಳಿ ವ್ಯಾಪ್ತಿಯಲ್ಲಿ ಬೀದಿದೀಪ ನಿರ್ವಹಣೆ ಹಾಗೂ ಬಿಲ್ ಅನ್ನು ರಾಜ್ಯ ಸರ್ಕಾರದ ವತಿಯಿಂದ ಪಾವತಿಸಲು ಕ್ರಮ ಕೈಗೊಳ್ಳಬೇಕು ಮತ್ತು ದಂಡುಮಂಡಳಿಯ ವ್ಯಾಪ್ತಿಯಲ್ಲಿ ಇರುವ ಕಸಾಯಿಖಾನೆ ನಿರ್ಮಾಣಕ್ಕೆ ಬೇರೆ ಕಡೆ ಜಾಗ ಒದಗಿಸಬೇಕು ಎಂದು ದಂಡುಮಂಡಳಿಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಬರ್ಚಸ್ವಾ ಮನವಿ ಮಾಡಿಕೊಂಡರು.
ಮಹಾನಗರ ಪಾಲಿಕೆ ಆಯುಕ್ತರಾದ ಜಗದೀಶ್ ಕೆ.ಎಚ್., ಸ್ಮಾರ್ಟ್ ಸಿಟಿ ಯೋಜನೆ, ಮಹಾನಗರ ಪಾಲಿಕೆ, ಹೆಸ್ಕಾಂ, ಸಾರಿಗೆ, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button