Latest

ಕೊರೊನಾ ಮೃತದೇಹವನ್ನು ಬಸ್ಟ್ಯಾಂಡ್ ನಲ್ಲೇ ಬಿಟ್ಟು ಹೋದ ಸಿಬ್ಬಂದಿ

ಪ್ರಗತಿವಾಹಿನಿ ಸುದ್ದಿ; ಹಾವೇರಿ: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಜತೆಗೆ ಸಾವಿನ ಸಂಖ್ಯೆಯೂ ಶರವೇಗದಲ್ಲಿ ಹೆಚ್ಚುತ್ತಿದೆ. ಈ ನಡುವೆ ವೈದ್ಯರು, ವೈದ್ಯಕೀಯ ಸಿಬ್ಬಂದಿಗಳು ಮಾನವೀಯತೆ ಮರೆಯುತ್ತಿರುವುದು ಬೇಸರದ ಸಂಗತಿ.

ಕೊರೊನಾ ರೋಗಿಯ ಮೃತದೇಹವನ್ನು ಪಿಪಿಇ ಕಿಟ್​ನಲ್ಲಿ ಸುತ್ತಿ, ಬಸ್​ಸ್ಟಾಂಡ್​ನಲ್ಲಿಟ್ಟು ಹೋಗಿರುವ ಅಮಾನವೀಯ ಘಟನೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಲ್ಲಿ ನಡೆದಿದೆ.

ಆಸ್ಪತ್ರೆ ಸಿಬ್ಬಂದಿ, ಕೊರೋನಾ ಸೋಂಕಿನಿಂದ ಸಾವನ್ನಪ್ಪಿದ್ದ ರೋಗಿಯ ಶವವನ್ನು ಪಿಪಿಇ ಕಿಟ್​ನಲ್ಲಿ ಸುತ್ತಿ, ಜನಸಂದಣಿ ಇರುವ ಬಸ್​ಸ್ಟಾಂಡ್​ನಲ್ಲಿ ಇಟ್ಟುಹೋಗಿದ್ದಾರೆ. ಸುಮಾರು 3 ಗಂಟೆಗಳ ಕಾಲ ಅಲ್ಲೇ ಇದ್ದ ಶವದ ಬಳಿ ಹೋಗಲು ಸ್ಥಳೀಯರೂ ಹೆದರಿದ್ದಾರೆ. ಆಸ್ಪತ್ರೆಯ ಸಿಬ್ಬಂದಿಯ ಈ ವರ್ತನೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಣೆಬೆನ್ನೂರಿನ ಮಾರುತಿನಗರದ 45 ವರ್ಷದ ವ್ಯಕ್ತಿ ತೀವ್ರ ಜ್ವರದಿಂದ ಬಳಲುತ್ತಿದ್ದ. ಒಂದು ವಾರವಾದರೂ ಜ್ವರ ಕಡಿಮೆಯಾಗಿರಲಿಲ್ಲ. ಹೀಗಾಗಿ, ರಾಣೆಬೆನ್ನೂರಿನ ಆಸ್ಪತ್ರೆಗೆ ಹೋಗಿ ತಪಾಸಣೆ ಮಾಡಿಸಿಕೊಳ್ಳಲು ಆತ ನಿರ್ಧರಿಸಿದ್ದ. ಜೂನ್ 28ರಂದು ಆತನ ಸ್ವಾಬ್​ ಟೆಸ್ಟ್​ಗೆ ಕಳಿಸಲಾಗಿತ್ತು. ತನ್ನ ವೈದ್ಯಕೀಯ ವರದಿಯನ್ನು ತೆಗೆದುಕೊಳ್ಳಲು ಆಸ್ಪತ್ರೆಗೆ ಬಂದಿದ್ದ ಆತನ ವರದಿ ಇನ್ನೂ ಬಂದಿರಲಿಲ್ಲ. ಹೀಗಾಗಿ, ಅಲ್ಲಿಯವರೆಗೂ ಬಸ್​ ಸ್ಟಾಂಡ್​ನಲ್ಲಿ ಕುಳಿತುಕೊಳ್ಳಲು ಆತ ನಿರ್ಧರಿಸಿದ್ದ. ಹೀಗೆ ಕುಳಿತಿದ್ದ ವ್ಯಕ್ತಿ ಬಸ್​ ಸ್ಟಾಂಡ್​ನಲ್ಲಿಯೇ ಸಾವನ್ನಪ್ಪಿದ್ದಾನೆ.

ಈ ವಿಷಯ ರಾಣೆಬೆನ್ನೂರಿನ ಸರ್ಕಾರಿ ಆಸ್ಪತ್ರೆ ಸಿಬ್ಬಂದಿಗೆ ತಿಳಿದಿದ್ದರಿಂದ ಅವರು ತಕ್ಷಣ ಸ್ಥಳಕ್ಕೆ ಬಂದು, ಶವವನ್ನು ಶವಾಗಾರಕ್ಕೆ ತೆಗೆದುಕೊಂಡು ಹೋಗುವ ಬದಲು ಪಿಪಿಇ ಕಿಟ್​ನಲ್ಲಿ ಸುತ್ತಿಟ್ಟು ಹೋಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಲಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತ ಸಿಬ್ಬಂದಿ ಆ್ಯಂಬುಲೆನ್ಸ್​ನಲ್ಲಿ ಬಂದು ಶವವನ್ನು ತೆಗೆದುಕೊಂಡು ಹೋಗಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button