Election NewsKannada NewsKarnataka NewsPolitics

*ಸಂಸದೆ ಸುಮಲತಾ ಅವರ ಮನೆಗೆ ಹೆಚ್.ಡಿ.ಕುಮಾರಸ್ವಾಮಿ ಅವರ ಭೇಟಿ*

ಸುಮಲತಾ ಅವರ ಸಹಕಾರ ಕೋರಿದ್ದೇನೆ ಎಂದ ಮಾಜಿ ಮುಖ್ಯಮಂತ್ರಿಗಳು

ಅಂಬರೀಷ್ ಅವರ ಮನೆ ನನಗೆ ಹೊಸದಲ್ಲ, ಹಲವಾರು ವರ್ಷ ಕಾಲ ಜತೆಗೂಡಿ ಬದುಕಿದವರು ನಾವು

ಚಳಿ, ಮಳೆ, ಗಾಳಿ ಲೆಕ್ಕಿಸದೇ ನಿಂತುಕೊಂಡರು ನೋಡಿ.. ಅವರು ನನಗೆ ಸಹಕಾರ ನೀಡಿದ್ದರಲ್ಲ, ಅದಕ್ಕೆ 14 ತಿಂಗಳಿಗೆ ಸರಕಾರ ಹೋಗಿದ್ದು

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಬೆಂಗಳೂರು: ಮಂಡ್ಯ ಲೋಕಸಭೆ ಕ್ಷೇತ್ರದ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಏಪ್ರಿಲ್ ನಾಲ್ಕರಂದು ನಾಮಪತ್ರ ಸಲ್ಲಿಸುತ್ತಿದ್ದೇನೆ. ಈ ಹಿನ್ನೆಲೆಯಲ್ಲಿ ಸುಮಲತಾ ಅವರ ಸಹಕಾರ ಕೋರಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.

ಬೆಂಗಳೂರಿನಲ್ಲಿ ಭಾನುವಾರ ಕ್ಷೇತ್ರದ ಸಂಸದರಾದ ಸುಮಲತಾ ಅವರ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ ನಂತರ ಅವರು ಮಾಧ್ಯಮಗಳ ಜತೆ ಮಾತನಾಡಿದರು.

ಇವತ್ತಿನ ಮಾತುಕತೆ ಸೌಹಾರ್ದಯುತವಾಗಿ ನಡೆಯಿತು. ಅಂಬರೀಷ್ ಅವರ ಮನೆ ನನಗೆ ಹೊಸದಲ್ಲ. ಹಲವಾರು ವರ್ಷಗಳ ಕಾಲ ಜತೆಗೂಡಿ ಬದುಕಿದವರು ನಾವು. ನಾನು ನಾಮಪತ್ರ ಸಲ್ಲಿಸುತ್ತಿರುವ ಹಿನ್ನೆಲೆಯಲ್ಲಿ ಸುಮಲತಾ ಅವರ ಸಹಕಾರ ಕೋರಿದ್ದೇನೆ. ಹಲವಾರು ವಿಷಯಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಅವರಿಗೂ ಹಿತೈಷಿಗಳು ಮತ್ತು ಅಂಬರೀಶ್ ಅವರ ಅಭಿಮಾನಿಗಳು ಇದ್ದಾರೆ. ಅವರು ಬೆಂಗಳೂರಿನಲ್ಲಿ ತಮ್ಮ ಬೆಂಬಲಿಗರ ಸಭೆ ನಡೆಸಿ, ಏಪ್ರಿಲ್ 3ನೇ ತಾರೀಖು ಮಂಡ್ಯದಲ್ಲಿಯೇ ನಿರ್ಧಾರ ತಿಳಿಸುವುದಾಗಿ ಹೇಳಿದ್ದಾರೆ. ಈಗಾಗಲೇ ಬಿಜೆಪಿ ಅಧ್ಯಕ್ಷರಾದ ವಿಜಯೇಂದ್ರ ಅವರೂ ಸುಮಲತಾ ಅವರ ಜತೆ ಚರ್ಚೆ ನಡೆಸಿದ್ದಾರೆ ಎಂದರು ಮಾಜಿ ಮುಖ್ಯಮಂತ್ರಿಗಳು.

ಎಲ್ಲಾ ವಿಚಾರಗಳ ಬಗ್ಗೆಯೂ ಮುಕ್ತವಾಗಿ ಚರ್ಚೆ ನಡೆಸಿದ್ದೇವೆ. ಅವರು ತಮ್ಮ ಮುಂದೆ ಯಾವ ಬೇಡಿಕೆಯನ್ನು ಇಟ್ಟಿಲ್ಲ. ಅವರು ಬಿಜೆಪಿ ಜತೆ ಒಳ್ಳೇ ಬಾಂಧವ್ಯ ಹೊಂದಿದ್ದಾರೆ ಎಂದು ಕುಮಾರಸ್ವಾಮಿ ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

*ಡಿ.ಕೆ.ಶಿವಕುಮಾರ್ ಅವರಿಗೆ ತಿರುಗೇಟು ಕೊಟ್ಟ ಹೆಚ್ಡಿಕೆ*

ಅಮೃತ ಕೊಟ್ಟವರಿಗೆ ವಿಷಾನ? ಎಂದು ತಮ್ಮ ಬಗ್ಗೆ ಟೀಕೆ ಮಾಡಿದ್ದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಯ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ಅವರು; ಪಾಪ.. ಡಿ.ಕೆ.ಶಿವಕುಮಾರ್ ವೈರಿಯಲ್ಲ ನನಗೆ. ಅವರು ನನ್ನ ದೊಡ್ಡಮಟ್ಟದ  ಹಿತೈಷಿಗಳು. ಅವರಷ್ಟು ಹಿತೈಷಿಗಳು ನನಗೆ ಯಾರೂ ಇಲ್ಲ ಎಂದು ವ್ಯಂಗ್ಯವಾಡಿದರು.

ಐದು ವರ್ಷ ಕಾಲ ಸರಕಾರ ನಡೆಸಲಿ ಎಂದು 39 ಶಾಸಕರಿರುವ ಪಕ್ಷಕ್ಕೆ ಸಿಎಂ ಸ್ಥಾನ ಕೊಟ್ಟೆವು ಎಂದು ಅವರು ಪದೆಪದೇ ಹೇಳುತ್ತಿದ್ದಾರೆ. ಐದು ವರ್ಷ ನಾಮಕಾವಸ್ತೆಯಾಗಿ ನಮಗೆ ಅಧಿಕಾರ ಕೊಟ್ಟರು. ಒಂದು ದಿನವೂ ನೆಮ್ಮದಿಯಾಗಿ ಸರಕಾರ ನಡೆಸಲು ಬಿಡಲಿಲ್ಲ. ಎಷ್ಟು ಚಿತ್ರಹಿಂಸೆ ಕೊಟ್ಟರು ಎಂಬುದು ನನಗಷ್ಟೇ ಗೊತ್ತು. ಅದಕ್ಕೇ ಸಮ್ಮಿಶ್ರ ಸರಕಾರ ಹೋಗಿದ್ದು, ನನ್ನಿಂದ ಆ ಸರಕಾರ ಹೋಗಲಿಲ್ಲ ಎಂದು ಡಿ.ಕೆ.ಶಿವಕುಮಾರ್ ಹೇಳಿಕೆಗೆ ಕುಮಾರಸ್ವಾಮಿ ಅವರು ತಿರುಗೇಟು ಕೊಟ್ಟರು.

ನನ್ನನ್ನು ಮುಖ್ಯಮಂತ್ರಿ ಮಾಡಿಕೊಂಡು ಯಾವ ರೀತಿ ನಡೆಸಿಕೊಂಡರು? ಎಷ್ಟು ಅಪಮಾನ ಮಾಡಿದರು? ಎನ್ನುವುದು ಇಡೀ ರಾಜ್ಯಕ್ಕೆ ಗೊತ್ತಿದೆ. ಚಳಿ, ಮಳೆ, ಗಾಳಿ ಯಾವುದನ್ನೂ ಲೆಕ್ಕಿಸದೇ ನನ್ನ ಜೊತೆ ನಿಂತುಕೊಂಡರು ನೋಡಿ.. ಅವರು ನನಗೆ ಸಹಕಾರ ನೀಡಿದ್ದರಲ್ಲ, ಅದಕ್ಕೆ ಹದಿನಾಲ್ಕು ತಿಂಗಳಿಗೆ ಸರಕಾರ ಹೋಗಿದ್ದು. ಸರಕಾರ ಬಂದ ಆರಂಭದಲ್ಲಿಯೇ ಡಿ.ಕೆ.ಶಿವಕುಮಾರ್ ಮತ್ತು ರಮೇಶ್ ಜಾರಕಿಹೋಳಿ ಘರ್ಷಣೆ ಮಾಡಿಕೊಂಡರಲ್ಲ, ಅದೇನು ಸರಕಾರ ಉಳಿಸೋದಕ್ಕೆ ಘರ್ಷಣೆ ಮಾಡಿದರಾ? ಯಾರು ಶತ್ರು, ಯಾರು ಹಿತೈಷಿ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗುತ್ತದೆ ಎಂದು ಕುಮಾರಸ್ವಾಮಿ ಅವರು ಹೇಳಿದರು.

ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ಅವರು ಈ ಸಂದರ್ಭದಲ್ಲಿ ಜತೆಯಲ್ಲಿ ಇದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button