ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಮಹಾನಗರ ಪಾಲಿಕೆಯ ಆರೋಗ್ಯಾಧಿಕಾರಿ ಬೇಜವಾಬ್ದಾರಿ, ನಿರ್ಲಕ್ಷ್ಯಕ್ಕೆ ಪಾಲಿಕೆಯ ಆಯುಕ್ತರೇ ಬಲಿಪಶುವಾಗಿದ್ದಾರೆ.
ಮಹಾನಗರಪಾಲಿಕೆ ಆಯುಕ್ತ ಜಗದೀಶ್ ಕೆ. ದೀರ್ಘ ರಜೆಯ ಮೇಲೆ ಹೋಗಿದ್ದು, ಇಲ್ಲಿಂದ ವರ್ಗಾವಣೆ ಮಾಡಿಸಿಕೊಂಡು ಹೋಗಲು ಪ್ರಯತ್ನಿಸುತ್ತಿದ್ದಾರೆ. ಇದೀಗ ಆಯುಕ್ತರೇ ಇಲ್ಲದೆ ಪಾಲಿಕೆಯಲ್ಲಿ ಅತಿ ದೊಡ್ಡ ಚುನಾವಣೆ ನಡೆಯುವಂತಾಗಿದೆ.
ಆರೋಗ್ಯಾಧಿಕಾರಿ ಸಂಜಯ ಡುಮ್ಮಗೋಳ ಅವರ ತಪ್ಪಿನಿಂದಾಗಿ ತೀವ್ರ ಅವಮಾನಕ್ಕೊಳಗಾದ ಆಯುಕ್ತ ಜಗದೀಶ್, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಬದಲು ತಾವೇ ಶಿಕ್ಷೆ ಅನುಭವಿಸುತ್ತಿದ್ದಾರೆ.
ಬೆಳಗಾವಿ ಮಹಾನಗರದಲ್ಲಿ ಸ್ವಚ್ಛತೆ ಕಾರ್ಯ ಸರಿಯಾಗಿ ನಡೆಯುತ್ತಿಲ್ಲ ಎನ್ನುವ ಆರೋಪ ಹೊಸದಲ್ಲ. ಪ್ರತಿ ದಿನವೂ ಸಾಮಾಜಿಕ ಜಾಲತಾಣಗಳಲ್ಲಿ ಕಸದ ರಾಶಿ ರಾಶಿಯ ಫೋಟೋಗಳು ವಿಜ್ರಂಭಿಸುತ್ತಿವೆ. ಪಾಲಿಕೆಯ ಆರೋಗ್ಯ ಇಲಾಖೆಗೆ ಜನ ಹಿಡಿಶಾಪ ಹಾಕಿ ಹಾಕಿ ಬೇಸತ್ತಿದ್ದಾರೆ. ಆರೋಗ್ಯ ಇಲಾಖೆ ಇರುವುದೇತಕ್ಕೆ ಎನ್ನುವುದೇ ಅರ್ಥವಾಗದ ಸ್ಥಿತಿಯಲ್ಲಿ ಜನರಿದ್ದಾರೆ.
ಪಾಲಿಕೆಯ ಆರೋಗ್ಯಾಧಿಕಾರಿಗೆ ಮಹಾನಗರದ ಪರಿಸ್ಥಿತಿಯೇ ಗೊತ್ತಿಲ್ಲ. ಬೆಳಗ್ಗೆ ಎದ್ದು ಏನು ನಡೆಯುತ್ತಿದೆ, ನಗರದ ಸ್ವಚ್ಛತೆ ಹೇಗಿದೆ ಎಂದು ನೋಡಿದರೆ ತಾನೇ ತಿಳಿಯುವುದು? ಅನುಭವಿಸುವವರು ಜನರು ತಾನೆ? ಆರೋಗ್ಯಾಧಿಕಾರಿ ಫೀಲ್ಡಿಗೆ ಹೋಗಿದ್ದೇ ಕಂಡಿಲ್ಲ ಎಂದು ಆರೋಗ್ಯ ಇಲಾಖೆಯ ಸಿಬ್ಬಂದಿಯೇ ಹೇಳುತ್ತಾರೆ.
ಸ್ವತಃ ಶಾಸಕ ಅಭಯ ಪಾಟೀಲ ಈ ಬಗ್ಗೆ ತೀವ್ರ ಕಿಡಿಕಾರಿದ್ದಲ್ಲದೆ, ಸ್ವಚ್ಛತೆಗೆ ಗಡುವನ್ನೂ ನೀಡಿದ್ದರು. ಆದರೆ ಆರೋಗ್ಯಾಧಿಕಾರಿ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿಯಿಂದಾಗಿ ಇಡೀ ನಗರ ಕೊಳೆತು ನಾರುವಂತಾಯಿತು. ಇದರಿಂದ ಆಕ್ರೋಶಗೊಂಡ ಶಾಸಕ ಅಭಯ ಪಾಟೀಲ ಟ್ರ್ಯಾಕ್ಟರ್ ನಲ್ಲಿ ಕಸ ತುಂಬಿಕೊಂಡು ಬಂದು ಪಾಲಿಕೆಯ ಆಯುಕ್ತರ ಮನೆಯ ಮುಂದೆಯೇ ಚೆಲ್ಲಿದರು.
ನಿಜವಾಗಿ ಶಾಸಕ ಅಭಯ ಪಾಟೀಲ ಕಸ ಚೆಲ್ಲಬೇಕಿದ್ದುದು ಆರೋಗ್ಯಾಧಿಕಾರಿಯ ಮುನೆಮುಂದಾಗಿತ್ತು.
ಈ ಸುದ್ದಿಗಳನ್ನೂ ಓದಿ –
ಪಾಲಿಕೆ ಆಯುಕ್ತರ ಮನೆ ಮುಂದೆ ಕಸ ತಂದು ಚೆಲ್ಲಿದ ಶಾಸಕ ಅಭಯ ಪಾಟೀಲ (ವಿಡೀಯೋ ಸಹಿತ ವರದಿ)
ಆಯುಕ್ತರ ಮನೆ ಮುಂದಿನ ಕಸ ಕ್ಲೀನ್; ಪಾಸಿಟಿವ್ ಆಗಿ ತಗೋತೀವಿ ಎಂದ ಆಯುಕ್ತ ಜಗದೀಶ್
ಈ ಘಟನೆಯಿಂದ ಪಾಲಿಕೆ ಆಯುಕ್ತ ಜಗದೀಶ ಕೆ. ತೀವ್ರ ಆಘಾತಕ್ಕೊಳಗಾದರು. ಜಗದೀಶ್ ಅವರ ಕುಟುಂಬದವರೂ ಘಟನೆಯಿಂದ ತೀವ್ರ ನೊಂದುಕೊಂಡರು. ಇದರಿಂದಾಗಿ ಅವರು ದೀರ್ಘ ರಜೆಯ ಮೇಲೆ ತೆರಳಿದರು. ಬೇರೆಡೆ ವರ್ಗಮಾಡಿಸಿಕೊಂಡು ಹೋಗುವ ಪ್ರಯತ್ನ ನಡೆಸಿದ್ದಾರೆ. ಮತ್ತೆ ಬೆಳಗಾವಿಗೆ ವಾಪಸ್ ಬರಲು ಅವರಿಗೆ ಮನಸ್ಸಿಲ್ಲ.
ತಮ್ಮ ಕಚೇರಿಯ ಆರೋಗ್ಯಾಧಿಕಾರಿಯ ಕರ್ತವ್ಯಲೋಪ, ಬೇಜವಾಬ್ದಾರಿಯಿಂದ ಆಯುಕ್ತರು ತೀವ್ರ ಹಿಂಸೆ ಅನುಭವಿಸಬೇಕಾಯಿತು. ಆರೋಗ್ಯಾಧಿಕಾರಿಯ ತಪ್ಪಿಗೆ ಆಯುಕ್ತರು ಬಲಿಪಶುವಾಗಬೇಕಾಯಿತು. ಸೂಕ್ಷ್ಮ ಮನಸ್ಸಿನ ಅಧಿಕಾರಿ ಹೊಣೆ ಹೊತ್ತು ರಜೆಯ ಮೇಲೆ ತೆರಳಿದರೆ, ಜವಾಬ್ದಾರಿ ಹೊರಬೇಕಾಗಿದ್ದವರು ಮಾತ್ರ ಏನೂ ಆಗಿಯೇ ಇಲ್ಲ ಎನ್ನುವಂತೆ ಅಧಿಕಾರ ಅನುಭವಿಸುತ್ತಿದ್ದಾರೆ. ನಿಜವಾಗಿ ಕಳಕಳಿ ಇದ್ದರೆ ತಾವೇ ಹೊಣೆ ಹೊತ್ತು ರಾಜಿನಾಮೆ ಕೊಟ್ಟು ಹೊರಹೋಗಬೇಕಿತ್ತು.
ಈಗ ಮಹಾನಗರ ಪಾಲಿಕೆಯಲ್ಲಿ ಚುನಾವಣೆ ನಡೆಯುತ್ತಿದೆ. ಆದರೆ ಪಾಲಿಕೆಗೆ ಆಯುಕ್ತರೇ ಇಲ್ಲ. ಶನಿವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಿಎಂ ಆದ ನಂತರ ಮೊದಲ ಬಾರಿಗೆ ಬೆಳಗಾವಿಗೆ ಆಗಮಿಸುತ್ತಿದ್ದಾರೆ. ಇಲ್ಲಿನ ಕೊರೋನಾ ಮತ್ತು ಪ್ರವಾಹ ಪರಿಸ್ಥಿತಿ ಅವಲೋಕನ ನಡೆಸಲಿದ್ದಾರೆ.
ಆದರೆ ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಗೆ ಆಯುಕ್ತರೇ ಇಲ್ಲ. ಇಂತಹ ದುಸ್ಥಿತಿಗೆ ಕಾರಣರಾದ, ನಿಜವಾಗಿ ಹೊಣೆ ಹೊತ್ತು ರಾಜಿನಾಮೆ ಕೊಟ್ಟು ಹೋಗಬೇಕಾದ ಆರೋಗ್ಯಾಧಿಕಾರಿ ಮಾತ್ರ ಸರಕಾರದ ಸಂಬಳ ಎಣಿಸುತ್ತ ತನಗೇನೂ ಸಂಬಂಧವೇ ಇಲ್ಲ ಎನ್ನುವಂತಿದ್ದಾರೆ.
ಕೊರೋನಾ, ಡೆಂಗ್ಯೂದಂತಹ ರೋಗಗಳ ಅಪಾಯವಿರುವ ಈ ಸಂದರ್ಭದಲ್ಲಿ ಇಂತಹ ಮಹಾನಗರದ ಸ್ವಚ್ಛತೆಯ ಕಡೆಗೆ ಸ್ವಲ್ಪವೂ ಗಮನವಿಲ್ಲ. ಸಧ್ಯ ಪಾಲಿಕೆಯ ಆಯುಕ್ತರ ಉಸ್ತುವಾರಿ ವಹಿಸಿಕೊಂಡಿರುವ ಲಕ್ಷ್ಮಿ ನಿಪ್ಪಾಣಿಕರ್ ಆಗಿರುವ ಡ್ಯಾಮೇಜ್ ಕಂಟ್ರೋಲ್ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ತಾವೇ ನಗರ ಸುತ್ತಾಡಿ ಆರೋಗ್ಯಾಧಿಕಾರಿಯ ಕೆಲಸವನ್ನೂ ಮಾಡುತ್ತಿದ್ದಾರೆ.
ಅಧಿಕಾರಿಗಳು, ಜನಪ್ರತಿನಿಧಿಗಳು ಇನ್ನಾದರೂ ನಿಜವಾದ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಜರುಗಿಸಬೇಕಾಗಿದೆ. ನಗರದ ಜನತೆಯ ಬಗ್ಗೆ, ಸ್ವಚ್ಛತೆಯ ಬಗೆಗೆ ಕಾಳಜಿ ಇದ್ದವರನ್ನು ಆರೋಗ್ಯಾಧಿಕಾರಿಯಾಗಿ ನೇಮಿಸಿದರೆ ಇಂತಹ ಅವಾಂತರ ತಪ್ಪಿಸಬಹುದು.
ವಿಧಾನಮಂಡಲ ಅಧಿವೇಶನಕ್ಕೆ ದಿನಾಂಕ ನಿಗದಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ