ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಖಾನಾಪುರ ತಾಲ್ಲೂಕಿನಲ್ಲಿ ಗುರುವಾರ ಇಡೀ ರಾತ್ರಿ ಮಳೆಯ ರೌದ್ರನರ್ತನದ ಪರಿಣಾಮ ಚೋರ್ಲಾ ಘಾಟ್ ನಲ್ಲಿ ಭೂ ಕುಸಿತ ಉಂಟಾಗಿದೆ.
ಬೆಳಗಾವಿ ಚೋರ್ಲಾ ರಾಜ್ಯ ಹೆದ್ದಾರಿಯಲ್ಲಿ ಭೂ ಕುಸಿತದ ಕಾರಣ ಕರ್ನಾಟಕ-ಗೋವಾ ನಡುವೆ ಸಂಚಾರ ಸ್ಥಗಿತಗೊಂಡಿತು.
ಕಣಕುಂಬಿ ಮಾವುಲಿ ದೇವಾಲಯದ ಬಳಿ ಮಳೆಯ ನೀರು ರಸ್ತೆ ಯನ್ನು ಸೀಳಿಕೊಂಡು ಹರಿಯುತ್ತಿದೆ. ಖಾನಾಪುರ ತಾಲ್ಲೂಕಿನ ಬಹುತೇಕ ಕಡೆಗಳಲ್ಲಿ ರಸ್ತೆ ಮತ್ತು ಸೇತುವೆಗಳು ನೀರಿನಲ್ಲಿ ಮುಳುಗಿವೆ.
ಖಾನಾಪುರ ಪಟ್ಟಣದ ಬೆಳಗಾವಿ ಪಣಜಿ ಹೆದ್ದಾರಿ ಮೇಲಿನ ಸೇತುವೆ ಮೇಲೆ ನಾಲ್ಕೈದು ಅಡಿಗಳಷ್ಟು ನೀರು ಹರಿಯುತ್ತಿದೆ. ಲೋಂಡಾ, ರುಮೇವಾಡಿ ಮತ್ತು ಖಾನಾಪುರ ಪಟ್ಡಣದ ಜನವಸತಿ ಪ್ರದೇಶಗಳಲ್ಲಿ ನೀರು ಹೊಕ್ಕಿದೆ.
ಕಣಕುಂಬಿಯಲ್ಲಿ ೫೨ ಸೆಂ.ಮೀ ದಾಖಲೆಯ ಮಳೆಯಾಗಿದೆ.
ಖಾನಾಪುರ ತಾಲ್ಲೂಕಿನ ಲೋಂಡಾ ಗ್ರಾಮದಲ್ಲಿ ಪಾಂಡರಿ ನದಿಯ ಪ್ರವಾಹದ ಕಾರಣ ಕೆಲವು ಜನವಸತಿ ಪ್ರದೇಶ ಗಳಲ್ಲಿ ನೀರು ನುಗ್ಗಿದೆ. ಸ್ಥಳೀಯ ಗ್ರಾಮ ಪಂಚಾಯತಿ ವತಿಯಿಂದ ಸಂತ್ರಸ್ತರಿಗೆ ರೈಲು ನಿಲ್ದಾಣದ ಪ್ಲಾಟ್ ಫಾರ್ಮ್ ನಲ್ಲಿ ವ್ಯವಸ್ಥೆ ಕಲ್ಪಿಸುವ ಕಾರ್ಯ ನಡೆದಿದೆ.
ರೈಲು ಮಾರ್ಗ ಹೊರತುಪಡಿಸಿ ಎಲ್ಲ ದಿಕ್ಕುಗಳಿಂದ ಖಾನಾಪುರ ಸಂಪರ್ಕಿಸುವ ರಸ್ತೆಗಳು ಬಂದ್ ಆಗಿವೆ. ಬೆಳಗಾವಿ ಖಾನಾಪುರ ರಸ್ತೆಯ ದೇಸೂರು ಬಳಿ, ಪಿರನವಾಡಿ ಬಳಿ ಮತ್ತು ಗಣೆಬೈಲ ಬಳಿ ರಸ್ತೆ ಮತ್ತು ಸೇತುವೆ ಮೇಲೆ ನೀರು ಹರಿಯುತ್ತಿದೆ. ಮಲಪ್ರಭಾ ನದಿಯ ಪ್ರವಾಹದ ಕಾರಣ ಬೆಳಗಾವಿ ಚೋರ್ಲಾ, ಬೆಳಗಾವಿ ಪಣಜಿ ಹೆದ್ದಾರಿಗಳಲ್ಲಿ ಸಂಚಾರ ಸ್ಥಗಿತಗೊಂಡಿದೆ. ಕುಂಬಾರ ಹಳ್ಳದ ಪ್ರವಾಹದ ಕಾರಣ ಖಾನಾಪುರ-ಪಾರಿಶ್ವಾಡ ಮಾರ್ಗದ ಜಾಂಬೋಟಿ ಜತ್ತ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಡಾಗಿದೆ. ಶಂಕರಪೇಟ ಸೇತುವೆ ಮೇಲೆ ನೀರು ಹರಿಯುತ್ತಿರುವ ಕಾರಣ ಖಾನಾಪುರ ಜಾಂಬೋಟಿ ರಸ್ತೆ ಬಂದ್ ಆಗಿದೆ. ಅಲಾತ್ರಿ ಹಳ್ಳ ತುಂಬಿ ಹರಿಯುತ್ತಿರುವ ಕಾರಣ ಸಿಂಧನೂರು ಹೆಮ್ಮಡಗಾ ಹೆದ್ದಾರಿ ಯಲ್ಲಿ ಸಂಚಾರ ಸ್ಥಗಿತಗೊಂಡಿದೆ.
ರಾಷ್ಟ್ರೀಯ ಹೆದ್ದಾರಿ 4 ಬಂದ್ : ವಾಹನ ಸಂಚಾರ ಬಂದ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ